Site icon Vistara News

ಶಿವಸೇನೆ ಸಂಸದ ಸಂಜಯ್‌ ರಾವತ್‌ಗೆ ಆಗಸ್ಟ್‌ 4 ರವರೆಗೆ ಇಡಿ ಕಸ್ಟಡಿ; 8 ದಿನಗಳ ಮನವಿಗೆ ಇಲ್ಲ ಸಮ್ಮತಿ

Sanjay Raut ED

ನವ ದೆಹಲಿ: ಪಾತ್ರಾ ಚಾಲ್‌ ಭೂಹಗರಣದಲ್ಲಿ ಬಂಧಿತರಾಗಿರುವ ಶಿವ ಸೇನೆ ಸಂಸದ ಸಂಜಯ್‌ ರಾವತ್‌ರನ್ನು ಆಗಸ್ಟ್‌ 4ರವರೆಗೆ ಇಡಿ (ಜಾರಿ ನಿರ್ದೇಶನಾಲಯ) ಕಸ್ಟಡಿಗೆ ನೀಡಿ, ಮುಂಬೈನ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ((PMLA) ನ್ಯಾಯಾಲಯ ಆದೇಶ ಹೊರಡಿಸಿದೆ. ಸಂಜಯ್‌ ರಾವತ್‌ರನ್ನು ಎಂಟು ದಿನಗಳವರೆಗೆ ನಮ್ಮ ಕಸ್ಟಡಿಗೆ ನೀಡಿ ಎಂದು ಇಡಿ ಅಧಿಕಾರಿಗಳು ಕೋರ್ಟ್‌ಗೆ ಮನವಿ ಮಾಡಿದ್ದರು. ಆದರೆ ನ್ಯಾಯಾಧೀಶರು ʼಸಂಜಯ್‌ ರಾವತ್‌ಗೆ ಆಗಸ್ಟ್‌ 4ರವರೆಗೆ ಇಡಿ ಕಸ್ಟಡಿ ಸಾಕು ಎಂದು ನನ್ನ ಅಭಿಪ್ರಾಯʼ ಎಂದು ಜಡ್ಜ್‌ ಹೇಳಿದರು.

ಇಂದು ಸಂಜಯ್‌ ರಾವತ್‌ ಪರ ವಕೀಲರಾದ ಅಶೋಕ್‌ ಮುಂಡರಗಿ ವಾದ ಮಂಡಿಸಿದರು. ʼಸಂಜಯ್‌ ರಾವತ್‌ ವಿರುದ್ಧ ದ್ವೇಷದ ರಾಜಕಾರಣ ಮಾಡಲಾಗುತ್ತಿದೆ. ಸೂಕ್ತ ದಾಖಲೆಗಳೇ ಇಲ್ಲದೆ ಇದ್ದರೂ ಅವರನ್ನು ಬಂಧಿಸಲಾಗಿದೆ. ನನ್ನ ಕಕ್ಷಿದಾರರು ಹಾರ್ಟ್‌ ಪೇಶೆಂಟ್‌. ಅವರಿಗೆ ಆರು ಸ್ಟೆಂಟ್‌ಗಳನ್ನು ಅಳವಡಿಸಲಾಗಿದೆ. ಸಂಜಯ್‌ ರಾವತ್‌ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಅವರನ್ನು ತಡರಾತ್ರಿವರೆಗೆ ವಿಚಾರಣೆಗೆ ಒಳಪಡಿಸದಂತೆ ಇಡಿಗೆ ನಿರ್ದೇಶಿಸಬೇಕು ಎಂದೂ ಹೇಳಿದ್ದರು. ಕೋರ್ಟ್‌ ಈ ಮನವಿಯನ್ನೂ ಮಾನ್ಯ ಮಾಡಿದೆ.

ಸಂಜಯ್‌ ರಾವತ್‌ರನ್ನು ಎಂಟು ದಿನಗಳ ಕಾಲ ನಮ್ಮ ಕಸ್ಟಡಿಗೆ ಕೊಡಬೇಕು. ರಾವತ್‌ ಅವರು ಸಾಕ್ಷ್ಯಗಳನ್ನು ತಿರುಚುತ್ತಿದ್ದಾರೆ ಮತ್ತು ಹಲವು ನಿರ್ಣಾಯಕ ಸಾಕ್ಷ್ಯಗಳ ಮೇಲೆ ಪ್ರಭಾವ ಬೀರಿ ಪಾರಾಗುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಇವರ ಆಪ್ತ ಪ್ರವೀಣ್‌ ರಾವತ್‌ 112 ಕೋಟಿ ರೂಪಾಯಿ ಗಳಿಸಿದ್ದಾರೆ. ಇಲ್ಲಿಯವರೆಗೆ ನಾವು 1.06 ಕೋಟಿ ರೂ.ಗಳಷ್ಟೇ ಪತ್ತೆಯಾಗಿದೆ ಎಂದು ಇಡಿ ಕೋರ್ಟ್‌ಗೆ ತಿಳಿಸಿತ್ತು.

ಇದನ್ನೂ ಓದಿ: ಶಿವಸೇನಾ ಸಂಸದ ಸಂಜಯ್‌ ರಾವತ್‌ ಅರೆಸ್ಟ್‌, ಇಂದು ಕೋರ್ಟ್‌ಗೆ ಹಾಜರುಪಡಿಸುವ ಸಾಧ್ಯತೆ

Exit mobile version