ನವ ದೆಹಲಿ: ಶಿವಸೇನೆ ಸಂಸದ ಸಂಜಯ್ ರಾವತ್ ಪತ್ರಾ ಚಾಲ್ ಭೂಹಗರಣ ಪ್ರಕರಣದಲ್ಲಿ ಇಡಿ ಬಂಧಿಸಿರುವ ಬೆನ್ನಲ್ಲೇ ಪಕ್ಷದ ಕಾರ್ಯಕರ್ತರು ದೊಡ್ಡ ಮಟ್ಟದ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಬಂಧಿತ ಸಂಜಯ್ ರಾವತ್ ಮತ್ತು ಬೆನ್ನಿಗೆ ನಾವೆಲ್ಲ ಇದ್ದೇವೆ. ಉದ್ಧವ್ ಠಾಕ್ರೆ ನೇತೃತ್ವದ ಬಣ ಅವರಿಗೆ ಬೆಂಬಲವಾಗಿ ನಿಲ್ಲುತ್ತದೆ. ನಾವೂ ಕಾನೂನು ಹೋರಾಟ ಪ್ರಾರಂಭ ಮಾಡುತ್ತೇವೆ ಎಂದು ಸಂಜಯ್ ಸಹೋದರ, ವಿಕ್ರೋಲಿ ಕ್ಷೇತ್ರದ ಶಾಸಕ ಸುನೀಲ್ ರಾವತ್ ತಿಳಿಸಿದ್ದಾರೆ. ಪತ್ರಾ ಚಾಲ್ ಹಗರಣಕ್ಕೆ ಸಂಬಂಧಪಟ್ಟು ವಿಚಾರಣೆಗೆ ಹಾಜರಾಗುವಂತೆ ಇಡಿ ಎರಡು ಬಾರಿ ಸಮನ್ಸ್ ನೀಡಿದ್ದರೂ ಸಂಜಯ್ ರಾವತ್ ಸ್ಪಂದಿಸಿರಲಿಲ್ಲ. ಒಮ್ಮೆಯೂ ವಿಚಾರಣೆಗೆ ಹೋಗಿರಲಿಲ್ಲ. ಹೀಗಾಗಿ ಭಾನುವಾರ ರಾತ್ರಿ ಅವರನ್ನು ಬಂಧಿಸಲಾಗಿದೆ. ಶಿವಸೇನೆಯ ಉದ್ಧವ್ ಠಾಕ್ರೆ ಬಣ ಇದನ್ನು ತೀವ್ರವಾಗಿ ವಿರೋಧಿಸಿದೆ. ʼಸುಳ್ಳು ದಾಖಲೆಗಳನ್ನು ಸೃಷ್ಟಿಸಿ, ಸಂಜಯ್ ರಾವತ್‌ರನ್ನು ಬಂಧಿಸಲಾಗಿದೆʼ ಎಂದು ಪ್ರತಿಪಾದಿಸಿದೆ.
ಸಂಜಯ್ ರಾವತ್‌ರ ಭಂದೂಪ್‌ನಲ್ಲಿರುವ ಮನೆಯನ್ನು ಶೋಧಿಸಿದ ಇಡಿ ಅಲ್ಲಿ, ದಾಖಲೆಯೇ ಇಲ್ಲದ 11.50 ಲಕ್ಷ ರೂಪಾಯಿ ನಗದು ವಶಪಡಿಸಿಕೊಂಡಿದೆ. ಹಾಗೇ, ಸಂಜಯ್ ರಾವತ್‌ರನ್ನು ಅದೇ ಮನೆಯಲ್ಲಿ ಸುಮಾರು 8 ತಾಸುಗಳ ಕಾಲ ವಿಚಾರಣೆಗೆ ಒಳಪಡಿಸಲಾಗಿತ್ತು. ಅದಾದ ಬಳಿಕ ಅವರನ್ನು ಬಂಧಿಸಿದೆ. ಅಂದಹಾಗೇ, 1034 ಕೋಟಿ ರೂ.ಗಳಷ್ಟು ದೊಡ್ಡ ಮೊತ್ತದ ಪತ್ರಾ ಚಾವಲ್ ಭೂಹಗರಣ ಸಂಜಯ್ ರಾವತ್ ಪತ್ನಿ ವರ್ಷಾ ರಾವತ್‌ಗೆ ನೇರವಾಗಿ ಸಂಬಂಧಪಟ್ಟಿದೆ. ಭೂ ದಾಖಲೆಗಳ ಇತ್ಯರ್ಥದಲ್ಲಿ ನಡೆದ ಗೋಲ್‌ಮಾಲ್ ಇದಾಗಿದ್ದು, ಈಗಾಗಲೇ ವರ್ಷಾಗೆ ಸೇರಿದ 2 ಕೋಟಿ ರೂ.ಮೌಲ್ಯದ ಆಸ್ತಿಯನ್ನೂ ಇಡಿ ಜಪ್ತಿ ಮಾಡಿದೆ.
ಮಲ್ಲಿಕಾರ್ಜುನ್ ಖರ್ಗೆ ವಾಗ್ದಾಳಿ
ಪತ್ರಾ ಚಾಲ್ ಭೂಹಗರಣ ಕೇಸ್‌ನಲ್ಲಿ ಶಿವಸೇನೆ ಸಂಸದ ಸಂಜಯ್ ರಾವತ್‌ರನ್ನು ಬಂಧಿಸಿದ್ದನ್ನು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ತೀವ್ರವಾಗಿ ಖಂಡಿಸಿದ್ದಾರೆ. ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿರುವ ಅವರು ಇಂದು ಕಲಾಪ ಪ್ರಾರಂಭಕ್ಕೂ ಮುನ್ನ ಮಾತನಾಡಿ, ʼಮಹಾರಾಷ್ಟ್ರದ ಶಿವಸೇನೆ ನಾಯಕ ಸಂಜಯ್ ರಾವತ್‌ರನ್ನು ಬಂಧಿಸಿದ್ದು ಬಿಜೆಪಿಯ ಹುನ್ನಾರ. ಸಂಸತ್ತಿನಲ್ಲಿ ಪ್ರತಿಪಕ್ಷವೇ ಇರಬಾರದು ಎಂದು ಬಿಜೆಪಿ ಹೀಗೆ ವಿಪಕ್ಷಗಳ ನಾಯಕರನ್ನು ಟಾರ್ಗೆಟ್ ಮಾಡುತ್ತಿದೆʼ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಇ.ಡಿ ಪಂಜರದಲ್ಲಿ ಶಿವಸೇನಾ ಸಂಸದ ಸಂಜಯ್ ರಾವತ್, ಮನೆಯಲ್ಲೇ ವಶಕ್ಕೆ ಪಡೆದ ಅಧಿಕಾರಿಗಳು