ಮುಂಬೈ: ಮಹಾರಾಷ್ಟ್ರದಲ್ಲಿ ಶಿವಸೇನೆ ಕಾರ್ಯಕರ್ತರ ಆಕ್ರೋಶ ಭುಗಿಲೆದ್ದಿದೆ. ಬಂಡಾಯವೆದ್ದು ಅಸ್ಸಾಂನ ಗುವಾಹಟಿ ಸೇರಿಕೊಂಡಿರುವ ಶಾಸಕರ ಮುಂಬೈ, ಪುಣೆಯಲ್ಲಿರುವ ಕಚೇರಿಗಳನ್ನು ಧ್ವಂಸ ಮಾಡಲಾಗುತ್ತಿದೆ. ರೆಬೆಲ್ ಎಂಎಲ್‌ಎ ತಾನಾಜಿ ಸಾವಂತ್ ಅವರ ಪುಣೆಯಲ್ಲಿರುವ ಕಚೇರಿಯನ್ನು ಶಿವಸೇನೆ ಕಾರ್ಯಕರ್ತರು ಧ್ವಂಸಗೊಳಿಸಿದ ವಿಡಿಯೋ ಕೂಡ ವೈರಲ್ ಆಗುತ್ತಿದೆ. ನಮ್ಮ ಶಿವಸೇನೆ ಕಾರ್ಯಕರ್ತರು ಇಂದು ತಾನಾಜಿ ಸಾವಂತ್ ಕಚೇರಿ ಮೇಲೆ ದಾಳಿ ಮಾಡಿದ್ದಾರೆ. ನಮ್ಮ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರಿಗೆ ತೊಂದರೆಕೊಟ್ಟ ದೇಶದ್ರೋಹಿಗಳು, ರೆಬಲ್ ಶಾಸಕರೆಲ್ಲರೂ ಇದೇ ಮಾದರಿಯ ಶಿಕ್ಷೆ ಅನುಭವಿಸಲಿದ್ದಾರೆ. ನಾವ್ಯಾರನ್ನೂ ಬಿಡುವುದಿಲ್ಲ ಎಂದು ಶಿವಸೇನೆಯ ಪುಣೆ ಮುಖ್ಯಸ್ಥ ಸಂಜಯ್ ಮೋರ್ ತಿಳಿಸಿದ್ದಾರೆ.
ಶುಕ್ರವಾರವೂ ಸಹ ಶಿವಸೇನೆ ಕಾರ್ಯಕರ್ತರು ಇದೇ ಮಾದರಿಯ ದಾಳಿ ನಡೆಸಿದ್ದರು. ಮುಂಬೈನ ಕುರ್ಲಾ ಏರಿಯಾದಲ್ಲಿರುವ ಶಾಸಕ ಮಂಗೇಶ್ ಕುಡಲ್ಕರ್ ಕಚೇರಿ ಮೇಲೆ ದಾಳಿ ಮಾಡಿದ್ದರು. ಹಾಗೇ, ಶಾಸಕ ದಿಲೀಪ್ ಲಂಡೆ ಅವರ ಪೋಸ್ಟರ್‌ಗೆ ಕಪ್ಪುಮಸಿ ಬಳಿದಿದ್ದರು. ಇಂದು ಕೂಡ ಇವರಿಬ್ಬರ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಮಹಾರಾಷ್ಟ್ರ ಪೊಲೀಸರೂ ಕೂಡ ಹೈಅಲರ್ಟ್ ಆಗಿದ್ದು, ಬಿಗಿ ಬಂದೋಬಸ್ತ್ ಮಾಡಿದ್ದಾರೆ. ಬಂಡಾಯ ಶಾಸಕರ ನಾಯಕ ಏಕನಾಥ್ ಶಿಂಧೆಯ ಥಾಣೆಯಲ್ಲಿರುವ ನಿವಾಸ-ಕಚೇರಿ ಎದರೂ ಪೊಲೀಸ್ ಕಾವಲಿದೆ. ಥಾಣೆ ಮತ್ತು ಮುಂಬೈನಲ್ಲಿ ಸೆಕ್ಷನ್ ೧೪೪ ಜಾರಿಯಾಗಿದೆ.
ಇದನ್ನೂ ಓದಿ: ಬಂಡಾಯ ಶಾಸಕರು ಶಿವಸೇನೆ ಬಿಟ್ಟು ಎಷ್ಟು ದೂರ ಓಡುತ್ತಾರೆ ನೋಡುತ್ತೇನೆ; ಸಿಎಂ ಉದ್ಧವ್ ಠಾಕ್ರೆ