Site icon Vistara News

Shiva Temple | ಈ ದೇವರಿಗೆ ಜೀವಂತ ಏಡಿಗಳೇ ನೈವೇದ್ಯ! ಸೂರತ್‌ನ ವಿಶೇಷ ದೇಗುಲವಿದು

ಸೂರತ್‌: ದೇವರಿಗೆ ಹೂವು, ಹಣ್ಣು, ಹಾಲು, ಅನ್ನ ನೈವೇದ್ಯ ಮಾಡುವುದನ್ನು ನೋಡಿರುತ್ತೀರಿ. ಆದರೆ ಗುಜರಾತ್‌ನ ಸೂರತ್‌ನಲ್ಲಿರುವ ಈ ದೇಗುಲದಲ್ಲಿ (Shiva Temple) ದೇವರಿಗೆ ಜೀವಂತ ಏಡಿಗಳನ್ನೇ ನೈವೇದ್ಯದ ರೂಪದಲ್ಲಿ ಸಮರ್ಪಿಸಲಾಗುತ್ತದೆ!

ಇದನ್ನೂ ಓದಿ: Viral Video: ಅಯ್ಯೋ ಕೋತಿಗಳಿಗೂ ಮೊಬೈಲ್​ ಗೀಳು ಹಿಡೀತಲ್ಲ!; ಅದೆಂಥಾ ಕುತೂಹಲ ನೋಡಿ ಈ ವಾನರಗಳಿಗೆ

ಹೌದು. ಸೂರತ್‌ನ ರಾಮ್‌ನಾಥ್‌ ಶಿವ ಘೇಲಾ ದೇಗುಲದಲ್ಲಿ ಇಂಥದ್ದೊಂದು ವಿಚಿತ್ರ ಪದ್ಧತಿ ಜಾರಿಯಲ್ಲಿದೆ. ಪ್ರತಿ ವರ್ಷ ಏಕಾದಶಿ ದಿನದಂದು ಇಲ್ಲಿ ಭಕ್ತರು ಜೀವಂತ ಏಡಿಗಳನ್ನೇ ಶಿವನ ಲಿಂಗಕ್ಕೆ ಸಮರ್ಪಿಸುತ್ತಾರೆ. ಸ್ವತಃ ಭಕ್ತಾದಿಗಳೇ ಶಿವಲಿಂಗದ ಬಳಿ ನಿಂತು, ಲಿಂಗದ ಮೇಲೆ ಏಡಿಗಳನ್ನು ಬಿಡುತ್ತಾರೆ. ಈ ರೀತಿ ಏಡಿ ನೈವೇದ್ಯ ಮಾಡುವುದರಿಂದ ಕಿವಿಗೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ ಎನ್ನುವುದು ಅಲ್ಲಿನ ಜನರ ನಂಬಿಕೆಯಾಗಿದೆ.

ಈ ರೀತಿ ಏಡಿ ನೈವೇದ್ಯ ಮಾಡುವ ವಿಡಿಯೊವನ್ನು ಎಎನ್‌ಐ ವಾಹಿನಿ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದೆ. ನೆಟ್ಟಿಗರೆಲ್ಲರು ಈ ವಿಡಿಯೋ ನೋಡಿ, ಈ ವಿಚಿತ್ರ ಆಚರಣೆಯ ಬಗ್ಗೆ ಚರ್ಚೆ ನಡೆಸಲಾರಂಭಿಸಿದ್ದಾರೆ.


ಈ ದೇಗುಲದಲ್ಲಿ ಏಡಿಗಳಿಗೆ ಯಾವುದೇ ರೂಪದಲ್ಲಿ ಹಾನಿ ಮಾಡಲಾಗುವುದಿಲ್ಲ. ಪೂಜಾ ಕೈಂಕರ್ಯಗಳು ಮುಗಿದ ನಂತರ ದೇಗುಲದ ಆಡಳಿತ ಮಂಡಳಿಯು ಎಲ್ಲ ಏಡಿಗಳನ್ನು ಸಂಗ್ರಹಿಸಿಕೊಂಡು ಹತ್ತಿರವಿರುವ ತಾಪಿ ನದಿಗೆ ಬಿಡುತ್ತಾರೆ ಎಂದೂ ವರದಿಯಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ದೇಗುಲದ ಪುರೋಹಿತರು ಮಾಹಿತಿ ಕೊಟ್ಟಿದ್ದು, “ರಾಮಾಯಣ ಕಾಲದಲ್ಲಿ ಶ್ರೀ ರಾಮ ಈ ದೇಗುಲವನ್ನು ನಿರ್ಮಿಸಿದರು. ಈ ದೇಗುಲದಲ್ಲಿ ಮಹಾದೇವನಿಗೆ ಯಾರು ಏಡಿ ನೈವೇದ್ಯ ಮಾಡುತ್ತಾರೋ ಅವರ ಎಲ್ಲ ಬಯಕೆಗಳು ಈಡೇರಲಿ ಎಂದು ಅವರು ಆಶೀರ್ವದಿಸಿದರು. ಅಂದಿನಿಂದ ಇಲ್ಲಿಯವರೆಗೂ ಈ ರೀತಿ ವರ್ಷಕ್ಕೆ ಒಮ್ಮೆ ಏಡಿ ನೈವೇದ್ಯ ಸಂಪ್ರದಾಯ ಜಾರಿಯಲ್ಲಿದೆ” ಎಂದು ತಿಳಿಸಿದ್ದಾರೆ.

Exit mobile version