ನವ ದೆಹಲಿ: ಶ್ರದ್ಧಾ ವಾಳ್ಕರ್ ಹತ್ಯೆಯ ಕೇಸ್ ತನಿಖೆ ನಡೆಯುತ್ತಿದ್ದು, ಆಕೆಯನ್ನು ಬರ್ಬರವಾಗಿ ಕೊಲೆ ಮಾಡಿದ ಲಿವ್ ಇನ್ ಸಂಗಾತಿ ಅಫ್ತಾಬ್ ಪೂನಾವಾಲಾನನ್ನು ದೆಹಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಮಧ್ಯೆ 2020ರಲ್ಲಿ ಶ್ರದ್ಧಾ ವಾಳ್ಕರ್ ಮಹಾರಾಷ್ಟ್ರದ ವಸೈನಲ್ಲಿ ನೆಲೆಸಿದ್ದಾಗ ಅಫ್ತಾಬ್ ಪೂನಾವಾಲಾ ವಿರುದ್ಧ ತುಲುಂಜ್ ಪೊಲೀಸ್ ಸ್ಟೇಶನ್ಗೆ ಒಂದು ದೂರಿನ ಪತ್ರ ನೀಡಿದ್ದಳು.
‘ಅಫ್ತಾಬ್ ನನಗೆ ನಿರಂತರವಾಗಿ ಥಳಿಸುತ್ತಿದ್ದಾನೆ. ಆರು ತಿಂಗಳಿಂದಲೂ ಹೊಡೆಯುತ್ತಿದ್ದಾನೆ. ತುಂಡುತುಂಡಾಗಿ ಕತ್ತರಿಸುವುದಾಗಿ ಬೆದರಿಕೆ ಹಾಕುತ್ತಿದ್ದಾನೆ. ಇದು ಆತನ ತಂದೆ-ತಾಯಿಗೂ ಗೊತ್ತು. ನಾವಿಬ್ಬರೂ ಮದುವೆ ಆಗುವವರೆಗೂ ಅವನೊಂದಿಗೆ ಇರಲು ನಿರ್ಧರಿಸಿದ್ದೆ. ಆದರೆ ಇನ್ನುಮುಂದೆ ನಾನು ಅವನ ಜತೆ ಇರಲು ಸಾಧ್ಯವಿಲ್ಲ. ಆತ ನನಗೆ ಪದೇಪದೆ ಬೆದರಿಕೆ ಒಡ್ಡುತ್ತಿದ್ದಾನೆ. ಹಾಗಾಗಿ ಮುಂದೆ ಅವನಿಂದ ಏನೇ ಅಪಾಯ ಆದರೂ ಇದೇ ಪತ್ರವನ್ನೇ ದೂರು ಎಂದು ಪರಿಗಣಿಸಬೇಕು’ ಎಂದು ಶ್ರದ್ಧಾ ಪತ್ರದಲ್ಲಿ ಉಲ್ಲೇಖಿಸಿದ್ದಳು. 2020ರ ನವೆಂಬರ್ 23ರಂದು ಬರೆದ ಪತ್ರವನ್ನು ಈಗ ಅಂದು ಶ್ರದ್ಧಾಳ ನೆರೆಮನೆಯಲ್ಲಿ ಇದ್ದವರೊಬ್ಬರು ಮಹಾರಾಷ್ಟ್ರ ಪೊಲೀಸರಿಗೆ ನೀಡಿದ್ದರು.
2020ರಲ್ಲಿ ಅಂದರೆ ಎರಡು ವರ್ಷಗಳ ಹಿಂದೆಯೇ ಅಫ್ತಾಬ್ ಪೂನಾವಾಲಾ ಶ್ರದ್ಧಾಳ ಮೇಲೆ ಹಲ್ಲೆ ನಡೆಸಿದ್ದ, ಪೀಸ್ಪೀಸ್ ಮಾಡುವುದಾಗಿ ಬೆದರಿಕೆ ಹಾಕಿದ್ದ. ಅಂದು ಶ್ರದ್ಧಾ ಈ ಬಗ್ಗೆ ದೂರು ನೀಡಿದ್ದರೂ ಮಹಾರಾಷ್ಟ್ರ ಪೊಲೀಸರು ಕ್ರಮ ಕೈಗೊಳ್ಳಲಿಲ್ಲವಾ? ಎಂಬ ಪ್ರಶ್ನೆಯೊಂದು ಉದ್ಭವ ಆಗಿದೆ. ಹೀಗಾಗಿ ಮಹಾರಾಷ್ಟ್ರ ಪೊಲೀಸರು ಪ್ರತಿಕ್ರಿಯೆ ನೀಡಿದ್ದು, ‘2020ರಲ್ಲಿ ಶ್ರದ್ಧಾ ದೂರಿನ ಪತ್ರ ನೀಡುತ್ತಿದ್ದಂತೆಯೇ ತನಿಖೆ ಪ್ರಾರಂಭವಾಗಿತ್ತು. ಆದರೆ ಸ್ವಲ್ಪ ದಿನ ಬಿಟ್ಟು ಮತ್ತೆ ಠಾಣೆಗೆ ಬಂದ ಶ್ರದ್ಧಾ, ‘ನಾನು ಅಫ್ತಾಬ್ ವಿರುದ್ಧ ದಾಖಲಿಸಿದ್ದ ದೂರನ್ನು ಹಿಂಪಡೆಯುತ್ತೇನೆ. ನಮ್ಮಿಬ್ಬರ ಮಧ್ಯೆ ಇದ್ದ ಜಗಳ, ಮನಸ್ತಾಪಗಳೆಲ್ಲ ಈಗ ಸರಿಯಾಗಿದೆ. ನಾವಿಬ್ಬರೂ ರಾಜಿ ಆಗಿದ್ದೇವೆ’ ಎಂದು ಲಿಖಿತವಾಗಿ ಹೇಳಿಕೆ ಕೊಟ್ಟರು. ಹಾಗಾಗಿ ಆ ಕೇಸ್ ತನಿಖೆಯನ್ನು ಅಲ್ಲಿಗೇ ನಿಲ್ಲಿಸಬೇಕಾಯಿತು ಎಂದು ಮೀರಾ ಭಯಂದರ್-ವಸಾಯಿ ವಿರಾರ್ (MBVV) ಕಮಿಷನರೇಟ್ನ ಡಿಸಿಪಿ ಸುಹಾಸ್ ಬವಾಚೆ ತಿಳಿಸಿದ್ದಾರೆ.
‘ಅಂದು ಶ್ರದ್ಧಾ ವಾಳ್ಕರ್ ದೂರು ಕೊಟ್ಟಾಗ ಏನೇನೆಲ್ಲ ಕ್ರಮ ಕೈಗೊಳ್ಳಬೇಕಿತ್ತೋ, ತನಿಖೆ ನಡೆಸಬೇಕಿತ್ತೋ, ಅದನ್ನೆಲ್ಲವನ್ನೂ ಮಾಡಿದ್ದೇವೆ. ಆದರೆ ಮತ್ತೆ ಅವರೇ ಬಂದು ಕೇಸ್ ವಾಪಸ್ ತೆಗೆದುಕೊಂಡರು. ಅಫ್ತಾಬ್ ಪೋಷಕರು, ಆಕೆಯ ಸ್ನೇಹಿತರೆಲ್ಲ ಅವಳಿಗೆ ಹೇಳಿದ್ದರಿಂದಲೇ ದೂರು ಹಿಂಪಡೆದಿದ್ದಳು. ದೂರುದಾರರೇ ದೂರು ವಾಪಸ್ ಪಡೆದಾಗ ನಾವು ಕೇಸ್ ಕ್ಲೋಸ್ ಮಾಡಬೇಕಾಯಿತು’ ಎಂದು ಸುಹಾಸ್ ತಿಳಿಸಿದ್ದಾರೆ.