ನವದೆಹಲಿ: ಭಾರತೀಯ ರೈಲ್ವೆ ಇಲಾಖೆಯು ಹಲವಾರು ಪ್ರವಾಸಿ ಪ್ಯಾಕೇಜ್‌ಗಳನ್ನು ಭಾರತೀಯರಿಗೆ ನೀಡಿದೆ. ಇದೀಗ ಹೊಸದೊಂದು ಪ್ರವಾಸಿ ಪ್ಯಾಕೇಜ್ ಆರಂಭಿಸಲಾಗುತ್ತಿದ್ದು, ಆ ಮೂಲಕ ಭಾರತದ ಅಯೋಧ್ಯೆಯಿಂದ ನೇಪಾಳದ ಜಾನಕ್‌ಪುರದವರೆಗೂ (Shri Ram-Janaki Yatra) ಪ್ರಯಾಣ ಮಾಡುವುದಕ್ಕೆ ಅವಕಾಶ ಮಾಡಿಕೊಡುತ್ತಿದೆ. ಅಂದರೆ ರಾಮನ ಜನ್ಮಸ್ಥಳದಿಂದ ಸೀತೆ ಹುಟ್ಟಿದ ಊರನ್ನು ಕನೆಕ್ಟ್ ಮಾಡುವ ಮಹಾಪ್ರವಾಸ ಇದಾಗಿದೆ.
ಭಾರತ್ ಗೌರವ್ ಡಿಲಕ್ಸ್ ಎಸಿ ಪ್ರವಾಸಿ ರೈಲಿನಲ್ಲಿ ಈ ಪ್ರಯಾಣ ನಡೆಯಲಿದೆ. ʼಶ್ರೀ ರಾಮ-ಜಾನಕಿ ಯಾತ್ರೆʼ ಎಂದು ಹೆಸರಿಡಲಾಗಿರುವ ಈ ಪ್ರವಾಸವು ಫೆ.17ರಿಂದ ಆರಂಭವಾಗಲಿದೆ. ಒಟ್ಟು ಏಳು ದಿನಗಳ ಕಾಲ ಹಲವು ಪ್ರಸಿದ್ಧ ತಾಣಗಳಿಗೆ ಪ್ರವಾಸ ನಡೆಯಲಿದೆ.
ಇದನ್ನೂ ಓದಿ: Delhi Cold Wave | ದೆಹಲಿಯಲ್ಲಿ 1.5 ಡಿಗ್ರಿ ಸೆಲ್ಸಿಯಸ್ಗೆ ಇಳಿದ ಕನಿಷ್ಠ ತಾಪಮಾನ; ರೈಲು-ವಿಮಾನ ಸಂಚಾರಕ್ಕೆ ತೊಡಕು
ದೆಹಲಿಯಿಂದ ಆರಂಭವಾಗುವ ಪ್ರಯಾಣವು ಮೊದಲು ಉತ್ತರ ಪ್ರದೇಶದ ಅಯೋಧ್ಯೆಗೆ ತಲುಪುವುದು. ಅಲ್ಲಿ ರಾಮ ಜನ್ಮಭೂಮಿಯ ದರ್ಶನವಾದ ನಂತರ ಬಿಹಾರದ ಸೀತಾಮಡಿಗೆ ಪ್ರಯಾಣ ಸಾಗಲಿದೆ. ನಂತರ ನೇಪಾಳದ ಜಾನಕ್‌ಪುರಕ್ಕೆ ಕರೆದೊಯ್ಯಲಾಗುವುದು. ಅಲ್ಲಿನ ದರ್ಶನದ ನಂತರ ಪುನಃ ಸೀತಾಮಡಿಗೆ ಬಂದು ಅಲ್ಲಿನ ಪ್ರವಾಸಿ ತಾಣಗಳಿಗೆ ಭೇಟಿ ಕೊಟ್ಟು, ವಾರಾಣಸಿಯತ್ತ ಪ್ರಯಾಣ ಮಾಡಲಿದೆ. ವಾರಾಣಸಿಯಿಂದ ಪ್ರಯಾಗ್‌ರಾಜ್‌ಗೆ ಬಸ್ಸಿನಲ್ಲಿ ಪ್ರಯಾಣಿಸಿ, ಮತ್ತೆ ರೈಲಿನಲ್ಲಿ ದೆಹಲಿಗೆ ಮರಳಲಾಗುವುದು.
ಇದನ್ನೂ ಓದಿ: ರಾಜಸ್ಥಾನದಲ್ಲಿ ಹಳಿ ತಪ್ಪಿದ ರೈಲು; ಕಳಚಿಬಿದ್ದ 8 ಕೋಚ್ಗಳು,10 ಪ್ರಯಾಣಿಕರಿಗೆ ಗಾಯ
ಏನೇನಿದೆ ರೈಲಿನಲ್ಲಿ?
ಈ ರೈಲಿನಲ್ಲಿ ಎರಡು ರೆಸ್ಟೋರೆಂಟ್‌ಗಳು, ಒಂದು ಆಧುನಿಕ ಕಿಚನ್, ಸೆನ್ಸಾರ್ ಆಧರಿತ ಶೌಚಾಲಯಗಳು, ಫುಟ್ ಮಸಾಜರ್ ಸೇರಿ ಎಲ್ಲ ರೀತಿಯ ಸೌಕರ್ಯಗಳಿವೆ. ಪ್ರಯಾಣಿಕರಿಗೆ ಎರಡು ರಾತ್ರಿಗಳನ್ನು ಜಾನಕ್‌ಪುರ ಮತ್ತು ವಾರಾಣಸಿಯ ಹೋಟೆಲ್‌ಗಳಲ್ಲಿ ತಂಗಲು ವ್ಯವಸ್ಥೆ ಮಾಡಲಾಗುತ್ತದೆ.
೩೯,೭೭೫ ರೂ. ಶುಲ್ಕ ಅಷ್ಟೆ!
ಒಟ್ಟಾರೆಯಾಗಿ 2,500 ಕಿ.ಮೀ.ನಷ್ಟು ದೂರ ಕ್ರಮಿಸುವ ಈ ಪ್ರವಾಸಿ ಪ್ಯಾಕೇಜ್‌ಗೆ ಒಬ್ಬರಿಗೆ 39,775 ರೂ. ಶುಲ್ಕವಿದೆ. ವಿಶೇಷವಾಗಿ ರೈಲ್ವೆ ಇಲಾಖೆಯು ಪೇಟಿಎಂ ಒಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಪ್ರಯಾಣಿಕರು ಇಎಂಐ ಮೂಲಕವೂ ಶುಲ್ಕ ಪಾವತಿಸಲು ಅವಕಾಶ ಮಾಡಿಕೊಡಲಾಗಿದೆ. 3, 6, 9, 12, 18 ಮತ್ತು 24 ತಿಂಗಳುಗಳ ಇಎಂಐಗೆ ಅವಕಾಶವಿದೆ.