Site icon Vistara News

ಸಿಧು ಮೂಸೆ ವಾಲಾ ಹಂತಕರ ಎನ್‌ಕೌಂಟರ್‌; ಪಂಜಾಬ್‌ ಪೊಲೀಸರಿಂದ ಇಬ್ಬರ ಹತ್ಯೆ

Punjab

ಅಮೃತ್‌ಸರ್‌: ಪಂಜಾಬ್‌ ಖ್ಯಾತ ಗಾಯಕ, ರಾಜಕಾರಣಿ ಸಿಧು ಮೂಸೆ ವಾಲಾ ಹತ್ಯೆಯಲ್ಲಿ ಭಾಗಿಯಾಗಿದ್ದ ಇಬ್ಬರು ಗ್ಯಾಂಗ್‌ಸ್ಟರ್‌ಗಳನ್ನು ಇಂದು ಪೊಲೀಸರು ಅಮೃತ್‌ಸರ್‌ನ ಚೀಚಾ ಭಕ್ನಾ ಎಂಬ ಹಳ್ಳಿಯ ಬಳಿ ಎನ್‌ಕೌಂಟರ್‌ ಮಾಡಿದ್ದಾರೆ. ಈ ಪ್ರದೇಶ ಅಟ್ಟಾರಿ ಗಡಿ ಬಳಿಯೇ ಇದ್ದು, ಗ್ಯಾಂಗ್‌ಸ್ಟರ್‌ಗಳು ಮತ್ತು ಪಂಜಾಬ್‌ ಗ್ಯಾಂಗ್‌ಸ್ಟರ್‌ ನಿಗ್ರಹ ದಳದ ಡಿಎಸ್‌ಪಿ ಬಿಕ್ರಮ್‌ ಬ್ರಾರ್‌ ಮತ್ತು ಇನ್ಸ್‌ಪೆಕ್ಟರ್‌ ಶಿವಕುಮಾರ್‌ ನೇತೃತ್ವದ ಪೊಲೀಸ್‌ ತಂಡದ ನಡುವೆ ಸುಮಾರು 4 ತಾಸುಗಳ ಕಾಲ ಗುಂಡಿನ ಕಾಳಗ ನಡೆದಿತ್ತು. ಸ್ಥಳದಲ್ಲಿ ಪೊಲೀಸ್‌ ಕಾರ್ಯಾಚರಣೆ ತೀವ್ರಗೊಂಡ ಬೆನ್ನಲ್ಲೇ ಪಂಜಾಬ್‌ ಡಿಜಿಪಿ ಗೌರವ್‌ ಯಾದವ್‌ ಕೂಡ ಅಲ್ಲಿಗೆ ಭೇಟಿ ಕೊಟ್ಟಿದ್ದರು.

ಪೊಲೀಸರ ಎನ್‌ಕೌಂಟರ್‌ನಲ್ಲಿ ಬಲಿಯಾದವರಲ್ಲಿ ಜಗರೂಪ್‌ ಸಿಂಗ್‌ ಅಲಿಯಾಸ್‌ ರೂಪಾ ಮತ್ತು ಮನ್‌ಪ್ರೀತ್‌ ಸಿಂಗ್‌ ಅಲಿಯಾಸ್‌ ಮನ್ನು ಕುಸಾ ಸೇರಿದ್ದಾರೆ. ಸಿಧುಗೆ ಮೊದಲಿಗೆ ಗುಂಡು ಹಾರಿಸಿದ್ದು ಮನ್ನು ಕುಸಾ ಎಂದು ಪೊಲೀಸರು ಹೇಳಿದ್ದರು. ಅವನೀಗ ಮೃತಪಟ್ಟಿದ್ದಾನೆ. ಎನ್‌ಕೌಂಟರ್‌ ಶುರುವಾದ ಕೆಲವೇ ಹೊತ್ತಲ್ಲಿ ರೂಪಾ ಸತ್ತಿದ್ದ. ಈತ ಮೃತಪಟ್ಟಿದ್ದರೂ ಕುಸಾ ಹೋರಾಟ ನಿಲ್ಲಿಸಿರಲಿಲ್ಲ. ಪೊಲೀಸರ ಮೇಲೆ ನಿರಂತರವಾಗಿ ಗುಂಡಿನ ದಾಳಿ ನಡೆಸುತ್ತಲೇ ಇದ್ದ. ಈ ಎನ್‌ಕೌಂಟರ್‌ನಲ್ಲಿ ಮೂವರು ಪೊಲೀಸ್‌ ಸಿಬ್ಬಂದಿ ಗಾಯಗೊಂಡಿದ್ದಾರೆ. ಎನ್‌ಕೌಂಟರ್‌ ನಡೆಯುತ್ತಿರುವ ಸ್ಥಳದಲ್ಲಿ ಪೊಲೀಸ್‌ ಬಿಗಿ ಬಂದೋಬಸ್ತ್‌ ಇದೆ. ಅಲ್ಲಿ ಆಂಬುಲೆನ್ಸ್‌ಗಳೂ ಇವೆ. ಪಾಕಿಸ್ತಾನದ ಗಡಿಯಿಂದ ಕೇವಲ 10 ಕಿಮೀ ದೂರದಲ್ಲಿ ಘಟನೆ ನಡೆದಿದ್ದು, ಸ್ಥಳೀಯರು ಬೆಳಗ್ಗೆಯಿಂದಲೂ ಮನೆಯ ಒಳಗೇ ಇದ್ದರು.

ಇದನ್ನೂ ಓದಿ: ಸಿಧು ಮೂಸೆ ವಾಲಾ ಹತ್ಯೆ ಕೇಸ್‌: ಇಬ್ಬರು ಶೂಟರ್‌ಗಳ ಮೇಲೆ ಪೊಲೀಸ್‌ ಫೈರಿಂಗ್‌, ಒಬ್ಬನ ಹತ್ಯೆ

ಪಂಜಾಬ್‌ನಲ್ಲಿ ಆಪ್‌ ಸರ್ಕಾರ ಆಡಳಿತಕ್ಕೆ ಬಂದ ಬೆನ್ನಲ್ಲೇ ಸಿಧು ಮೂಸೆ ವಾಲಾಗೆ ಇದ್ದ ಭದ್ರತೆಯನ್ನು ಹಿಂಪಡೆದಿತ್ತು. ಭದ್ರತೆ ವಾಪಸ್‌ ಪಡೆದಿದ್ದ ಮರು ದಿನವೇ ಅವರನ್ನು ಹತ್ಯೆ ಮಾಡಲಾಗಿತ್ತು. ಈ ಹತ್ಯೆಯ ಮಾಸ್ಟರ್‌ ಮೈಂಡ್‌ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯಿ ಎಂದು ಹೇಳಲಾಗಿದೆ. ಹಾಗೇ, ಕೊಲೆ ನಡೆದಿದ್ದು ಕೆನಡಾ ಮೂಲದ ಗ್ಯಾಂಗ್‌ಸ್ಟರ್‌ ಗೋಲ್ಡಿ ಬ್ರಾರ್‌ ನಿರ್ದೇಶನದಂತೆ. ಲಾರೆನ್ಸ್‌ ಈಗಾಗಲೇ ಜೈಲಿನಲ್ಲಿದ್ದಾನೆ. ಗೋಲ್ಡಿ ಇನ್ನೂ ಎರಡು ಕೇಸ್‌ನಲ್ಲಿ ಆರೋಪಿಯಾಗಿದ್ದು, ಈತನ ಪತ್ತೆ ಕಾರ್ಯಾಚರಣೆ ನಡೆಯುತ್ತಿದೆ. ಇವನು ದೇಶಬಿಟ್ಟು ಹೋಗದಂತೆ ತಡೆಯಲು ರೆಡ್‌ ಕಾರ್ನರ್‌ ನೋಟಿಸ್‌ ಕೂಡ ಜಾರಿಯಾಗಿದೆ.

ಇದನ್ನೂ ಓದಿ: ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆಗೆ ಬಳಸಿದ AN-94 ರೈಫಲ್‌, AK-47ಕ್ಕಿಂತ ಅಪಾಯಕಾರಿ

Exit mobile version