ನವ ದೆಹಲಿ: ಪಂಜಾಬ್ ಗಾಯಕ, ರಾಜಕಾರಣಿ ಸಿಧು ಮೂಸೆ ವಾಲಾರಿಗೆ ಗುಂಡು ಹಾರಿಸಿದ ಗ್ಯಾಂಗ್ನ ಮುಖ್ಯ ಶೂಟರ್ ದೀಪಕ್ ಅಲಿಯಾಸ್ ಮುಂಡಿಯನ್ನು ಇಂದು ಪಶ್ಚಿಮ ಬಂಗಾಳ-ನೇಪಾಳ ಗಡಿಯಲ್ಲಿ ದೆಹಲಿ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಪಂಜಾಬ್ ಪೊಲೀಸ್ ಮಹಾ ನಿರ್ದೇಶಕ ಗೌರವ್ ಯಾದವ್ ಮಾಹಿತಿ ನೀಡಿದ್ದಾರೆ. ಹಾಗೇ, ಕೇಂದ್ರೀಯ ಸಶಸ್ತ್ರ ಪಡೆಗಳು ಮತ್ತು ದೆಹಲಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ದೀಪಕ್ನನ್ನು ಬಂಧಿಸಿದ್ದಾರೆ. ಈ ಕೇಸ್‌ನಲ್ಲಿ ಸಿಕ್ಕ ಮತ್ತೊಂದು ಬಹುದೊಡ್ಡ ಯಶಸ್ಸು ಎಂದೂ ಹೇಳಿದ್ದಾರೆ. ದೀಪಕ್ ಮಾತ್ರವಲ್ಲ, ಆತನ ಸಹಚರರಾದ ಕಪಿಲ್ ಪಂಡಿತ್ ಮತ್ತು ರಜೀಂದರ್ ಎಂಬುವರನ್ನೂ ಅರೆಸ್ಟ್ ಮಾಡಲಾಗಿದೆ.
ಸಿಧು ಮೂಸೆ ವಾಲಾ ಕಾಂಗ್ರೆಸ್ ನಾಯಕನಾಗಿದ್ದರು. ಪಂಜಾಬ್ನಲ್ಲಿ ಈ ಸಲ ಆಪ್ ಸರ್ಕಾರ ಆಡಳಿತಕ್ಕೆ ಬರುತ್ತಿದ್ದಂತೆ, ಮೂಸೆವಾಲಾ ಸೇರಿ ಸುಮಾರು 400 ನಾಯಕರಿಗೆ ನೀಡಲಾಗಿದ್ದ ವಿಐಪಿ ಭದ್ರತೆಯನ್ನು ವಾಪಸ್ ಪಡೆದಿತ್ತು. ಹೀಗೆ ಭದ್ರತೆ ಹಿಂತೆಗೆತ ಆಗುತ್ತಿದ್ದಂತೆ ಮೇ 29ರಂದು ಸಿಧು ಮೂಸೆ ವಾಲಾರನ್ನು ಆರು ಮಂದಿ ಸೇರಿ ಶೂಟ್ ಮಾಡಿ ಹತ್ಯೆ ಮಾಡಿದ್ದರು. ಇವರಲ್ಲಿ ಇಬ್ಬರನ್ನು ಪೊಲೀಸರು ಜುಲೈನಲ್ಲಿ ಎನ್‌ಕೌಂಟರ್ ಮಾಡಿದ್ದಾರೆ. ಅಮೃತ್‌ಸರ್‌ನ ಚೀಚಾ ಭಕ್ನಾ ಎಂಬ ಹಳ್ಳಿಯ ಬಳಿ ನಡೆದ ಎನ್‌ಕೌಂಟರ್‌ನಲ್ಲಿ ಬಲಿಯಾದವರು ಶೂಟರ್ಗಳಾದ ಜಗರೂಪ್ ಸಿಂಗ್ ಅಲಿಯಾಸ್ ರೂಪಾ ಮತ್ತು ಮನ್‌ಪ್ರೀತ್ ಸಿಂಗ್ ಅಲಿಯಾಸ್ ಮನ್ನು ಕುಸಾ. ಹಾಗೇ, ಆರೋಪಿಗಳಾದ ಪ್ರಿಯವ್ರತ್ ಫೌಜಿ, ಕಾಶಿಶ್ ಮತ್ತು ಅಂಕಿತ್ ಸೆರ್ಸಾ ಎಂಬುವರನ್ನೂ ಈಗಾಗಲೇ ಬಂಧಿಸಲಾಗಿದೆ. ಇಂದು ಬಂಧಿತನಾದ ದೀಪಕ್ ಆರನೇ ಮತ್ತು ಮುಖ್ಯ ಶೂಟರ್.
ಇನ್ನು ಗಾಯಕ ಸಿಧು ಮೂಸೆ ವಾಲಾ ಹತ್ಯೆಯ ಮಾಸ್ಟರ್ ಮೈಂಡ್ ಲಾರೆನ್ಸ್ ಬಿಷ್ಣೋಯಿ. ಮತ್ತು ಈ ಕೊಲೆ ನಡೆದಿದ್ದು ಕೆನಡಾ ಮೂಲದ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್ ನಿರ್ದೇಶನದಂತೆ. ಲಾರೆನ್ಸ್ ಈಗಾಗಲೇ ಜೈಲಿನಲ್ಲಿದ್ದಾನೆ. ಗೋಲ್ಡಿ ಇನ್ನೂ ಎರಡು ಕೇಸ್‌ನಲ್ಲಿ ಆರೋಪಿಯಾಗಿದ್ದು, ಈತನ ಪತ್ತೆ ಕಾರ್ಯಾಚರಣೆ ನಡೆಯುತ್ತಿದೆ. ಇವನು ದೇಶಬಿಟ್ಟು ಹೋಗದಂತೆ ತಡೆಯಲು ರೆಡ್ ಕಾರ್ನರ್ ನೋಟಿಸ್ ಕೂಡ ಜಾರಿಯಾಗಿದೆ.
ಇದನ್ನೂ ಓದಿ: ಸಿಧು ಮೂಸೆ ವಾಲಾ ಹಂತಕರ ಎನ್‌ಕೌಂಟರ್; ಪಂಜಾಬ್ ಪೊಲೀಸರಿಂದ ಇಬ್ಬರ ಹತ್ಯೆ