Site icon Vistara News

World Wildlife Day: ಇಂದು ವಿಶ್ವ ವನ್ಯಜೀವಿ ದಿನ: ಏನಿದರ ಮಹತ್ವ?

World Wildlife Day

#image_title

ಸುಮಾತ್ರಾದ ಆನೆಗಳು, ಬೊರ್ನಿಯೊ ದ್ವೀಪಗಳ ಒರಾಂಗುಟಾನ್‌ ಮತ್ತು ಕಪ್ಪು ಖಡ್ಗಮೃಗಗಳಲ್ಲಿ ಇರುವ ಸಾಮ್ಯತೆಯೇನು- ಇವೆಲ್ಲ ಪ್ರಾಣಿಗಳೂ ನಾನಾ ಪರಿಸರ ಚಾನೆಲ್‌ಗಳಲ್ಲಿ ಕಾಣಿಸಿಕೊಂಡು ನಮ್ಮ ಕಣ್ತುಂಬುತ್ತವೆ, ಖುಷಿ ಪಡಿಸುತ್ತವೆ ಎನ್ನುವುದನ್ನು ಬಿಟ್ಟರೆ? ಇವೆಲ್ಲಾ ಅಳಿವಿನಂಚಿನಲ್ಲಿರುವ ಪ್ರಭೇದಗಳು. ಹಾಗೆಂದರೆ ಜಗತ್ತಿನ ಉಳಿದೆಲ್ಲ ಪ್ರಾಣಿಗಳು ಕ್ಷೇಮವಾಗಿವೆ ಎಂದರ್ಥವಲ್ಲ. ಪ್ರಾಣಿ-ಪಕ್ಷಿ ಮತ್ತು ಸಸ್ಯಗಳ ಸಾವಿರಾರು ಪ್ರಭೇದಗಳು ಈಗ ಅವಸಾನದತ್ತ ತಲುಪಿವೆ.

ಈ ಕುರಿತು ವಿಶ್ವದೆಲ್ಲೆಡೆ ಜಾಗೃತಿ ಮೂಡಿಸುವ ಉದ್ದೇಶದಿಂದ, ಮಾರ್ಚ್‌ ತಿಂಗಳ 3ನೇ ದಿನವನ್ನು ವಿಶ್ವ ವನ್ಯಜೀವಿ ದಿನವೆಂದು ಆಚರಿಸಲಾಗುತ್ತದೆ. ಜಗತ್ತಿನೆಲ್ಲೆಡೆಯ ಕಾಡುಗಳಲ್ಲಿರುವ ಎಲ್ಲ ರೀತಿಯ ಪ್ರಾಣಿ-ಸಸ್ಯ ಸಂಕುಲಗಳ ಉಳಿವಿಗೆ ಪಣ ತೊಡುವ ದಿನವೆಂದು ವಿಶ್ವಸಂಸ್ಥೆ ಕರೆ ನೀಡಿದೆ. ಭೂಮಿಯ ಉಳಿವಿಗೆ ಅದರ ಒಡಲಲ್ಲಿರುವ ಎಲ್ಲಾ ವನ್ಯಸಂಪತ್ತಿನ ಉಳಿವು ಬಹಳ ಮುಖ್ಯ. ಈ ಸಾಲಿನ ಘೋಷವಾಕ್ಯ, “ವನ್ಯಜೀವಿ ಸಂರಕ್ಷಣೆಗಾಗಿ ಸಹಯೋಗ” (“Partnerships for wildlife conservation”) ಇಡೀ ಪರಿಕಲ್ಪನೆಯನ್ನು ವನ್ಯಜೀವಿಗಳಿಗೆ ಮಾತ್ರ ಸೀಮಿತಗೊಳಿಸದೆ, ಸಾಗರ ಸಂಪತ್ತಿನ ಸಂರಕ್ಷಣೆಗೂ ವಿಸ್ತರಿಸಿಕೊಳ್ಳಲಾಗಿದೆ.

ಅಳಿವಿನಂಚಿನಲ್ಲಿರುವ ವನ್ಯಪ್ರಾಣಿ ಮತ್ತು ಸಸ್ಯಗಳ ಅಂತಾರಾಷ್ಟ್ರೀಯ ವ್ಯಾಪಾರ ಒಪ್ಪಂದಕ್ಕೆ 1973ರ ಮಾರ್ಚ್‌ 3ರಂದು ಸಹಿ ಹಾಕಲಾಗಿತ್ತು. (Convention on International Trade in Endangered Species of Wild Fauna and Flora- CITES) ಹಾಗಾಗಿ 2023ರಿಂದ ಇಂದಿನ ದಿನವನ್ನು ವಿಶ್ವ ವನ್ಯಜೀವಿ ದಿನವೆಂದು ಆಚರಿಸಲಾಗುತ್ತಿದೆ. ಈ ಒಪ್ಪಂದವು ಮುಖ್ಯವಾಗಿ, ದೇಶಗಳ ನಡುವಿನ ವ್ಯಾಪಾರ ಒಪ್ಪಂದದಿಂದ ವನ್ಯಜೀವಿಗಳಿಗೆ ಕಂಟಕ ಆಗದಂತೆ ಜಾಗ್ರತೆ ವಹಿಸುವ ಗುರಿಯನ್ನು ಹೊಂದಿದೆ. ಇದರಲ್ಲಿ ಆಹಾರೋತ್ಪನ್ನಗಳು, ಚರ್ಮದ ಉದ್ದಿಮೆ, ಔಷಧ ಸೇರಿದಂತೆ ಹಲವು ರೀತಿಯ ಸರಕುಗಳ ವ್ಯಾಪಾರವನ್ನು ಸೇರಿಸಿಕೊಳ್ಳಲಾಗಿದೆ. ಭಾರತವೂ ಸೇರಿದಂತೆ ೧೮೪ ದೇಶಗಳು ಈ ಒಪ್ಪಂದದಲ್ಲಿ ಭಾಗೀದಾರರಾಗಿವೆ.

CITES ಕೆಲಸದ ಪರಿಯೇನು?

ಮೂರು ಭಿನ್ನ ಸ್ಥರಗಳಲ್ಲಿ ಈ ಒಪ್ಪಂದ ಕೆಲಸ ಮಾಡುತ್ತದೆ. ಮೊದಲನೇದಾಗಿ, ಅಳಿವಿನಂಚಿನಲ್ಲಿರುವ ಪ್ರಾಣಿ ಮತ್ತು ಸಸ್ಯ ಪ್ರಭೇದಗಳಲ್ಲಿ ಯಾವುದನ್ನೇ ಆದರೂ ದೇಶಗಳ ನಡುವೆ ಯಾವುದೇ ವ್ಯಾಪಾರಕ್ಕೆ ಬಳಸುವಂತಿಲ್ಲ- ವಿಪರೀತದ ಸನ್ನಿವೇಶಗಳ ಹೊರತಾಗಿ. ಉದಾ, ಭಾರತದ ಗೊರಿಲ್ಲಾ ಮತ್ತು ಸಿಂಹಗಳಂತವು. ಎರಡನೇದಾಗಿ, ಅಳಿವಿನಂಚಿನಲ್ಲಿ ಇಲ್ಲದಿದ್ದರೂ, ಅಪಾಯಕ್ಕೆ ಸಿಲುಕಿರುವ ಸಾವಿರಾರು ಪ್ರಾಣಿ-ಸಸ್ಯಾದಿಗಳಿವೆ. ಇವುಗಳನ್ನು ಅತ್ಯಂತ ನಿಯಂತ್ರಣದಲ್ಲಿ ಬಳಸಿಕೊಳ್ಳಬೇಕಿದೆ. ಉದಾ, ನರಿ, ನೀರಾನೆಯಂಥವು. ಮೂರನೆಯದು, ಭೌಗೋಳಿಕವಾಗಿ ಕೆಲವು ಕಡೆಗಳಲ್ಲಿ ಅಪಾಯಕ್ಕೆ ಸಿಲುಕಿರುವ ವನ್ಯಸಂಪತ್ತಿನ ಬಳಕೆಯನ್ನು ಸೀಮಿತಗೊಳಿಸುವಂತೆ ಉಳಿದ ದೇಶಗಳಿಗೆ ಮನವಿ ಮಾಡುವುದು. ಉದಾ, ಭಾರತದಲ್ಲಿರುವ ಬಂಗಾಲದ ನರಿ, ಹೊಂಬಣ್ಣದ ನರಿಯಂಥವು.

ಈ ಸಾಲಿನಲ್ಲಿ CITES ಒಪ್ಪಂದಕ್ಕೆ 50 ವರ್ಷಗಳು ಪೂರ್ಣಗೊಂಡಿವೆ. ಈ ಅರ್ಧ ಶತಮಾನದ ಸಾಧನೆಯೇನು ಎಂಬುದನ್ನು ಗಮನಿಸಿದರೆ, ಈ ಹಿಂದೆ ಹೇಳಿದ ಕಪ್ಪು ಖಡ್ಗಮೃಗಗಳು ಜಗತ್ತಿನಲ್ಲಿ ೨,೫೦೦ ರಷ್ಟು ಉಳಿದಿವೆ. ರಷ್ಯಾದ ಅಮೂರ್‌ ಚಿರತೆಗಳಂತೂ ಬಹುತೇಕ ಅಳಿದಿದ್ದು, ೪೦ ಮಾತ್ರ ಉಳಿದಿವೆ. ಬೊರ್ನಿಯೊದ ಒರಾಂಗುಟಾನ್‌ಗಳು ಕಳೆದ 50 ವರ್ಷಗಳಲ್ಲಿ ಶೇ. 50ರಷ್ಟು ಕ್ಷೀಣಿಸಿದ್ದು, ಅವುಗಳ ಆವಾಸಸ್ಥಾನ ಸುಮಾಋಉ ಶೇ. 60ರಷ್ಟು ನಶಿಸಿದೆ. ಇಂಡೋನೇಷ್ಯಾದ ಸುಮಾತ್ರಾ ದ್ವೀಪಗಳ ಹುಲಿಗಳ ಸಂಖ್ಯೆ 400 ಮೀರುವುದಿಲ್ಲ. ಕ್ಯಾಲಿಫೋರ್ನಿಯದ ಕೊಲ್ಲಿಗಳಲ್ಲಿ ಬದುಕುವ ವಕೀಟ ಎಂಬ ಅಪರೂಪದ ಸಸ್ತನಿ ಮೀನುಗಳು 30ರಷ್ಟಿದ್ದು, ಇನ್ನೆಷ್ಟು ದಿನಗಳಲ್ಲಿ ಕಾಲಗರ್ಭ ಸೇರಲಿವೆಯೋ ಗೊತ್ತಿಲ್ಲ. ಕಾಂಗೊದಲ್ಲಿರುವ ಗೊರಿಲ್ಲಾ ಪ್ರಭೇದದ ಪ್ರಾಣಿಗಳ ಸಂಖ್ಯೆ ಸುಮಾರು 800 ಇದ್ದರೆ, ಸುಮಾತ್ರಾ ಆನೆಗಳ ಸಂಖ್ಯೆ ಆಘಾತಕಾರಿಯಾಗಿ ಶೇ. 80ರಷ್ಟು ಅಳಿದಿದೆ. ಡೈನೋಸಾರಸ್‌, ಡೊಡೊಗಳಂತೆ ಇನ್ನೆಷ್ಟು ಪ್ರಾಣಿಗಳು ಸಿನೆಮಾ ಗ್ರಾಫಿಕ್‌ಗಳಲ್ಲಿ ಮಾತ್ರವೇ ಉಳಿಯುವವೋ ಎಂಬ ಆತಂಕ ಹೆಚ್ಚಿದೆ. ಹಾಗೆಂದು CITES ಒಪ್ಪಂದದಿಂದ ಕೆಲವು ಬೆರಳೆಣಿಕೆಯ ಪ್ರಭೇದದ ಪ್ರಾಣಿಗಳಿಗೆ ಅನುಕೂಲವಾಗಿರುವುದನ್ನು ಮರೆಯುವಂತಿಲ್ಲ. ದಕ್ಷಿಣ ಅಮೆರಿಕದ ಒಂದು ಸಣ್ಣ ಒಂಟೆಯ ಪ್ರಭೇದಗಳು ಮತ್ತು ನೈಲ್‌ ನದಿಯ ಮೊಸಳೆಗಳ ಸಂಖ್ಯೆಯಲ್ಲಿ ವೃದ್ಧಿಯಾಗಿದೆ.

ಇದನ್ನೂ ಓದಿ: Supreme Court: ವನ್ಯಜೀವಿ ತಾಣಗಳಲ್ಲಿ ನಿರ್ಮಾಣ ಕಾಮಗಾರಿಗಳಿಗೆ ನಿರ್ಬಂಧ, ಸುಪ್ರೀಂ ಮಹತ್ವದ ಆದೇಶ

ವಿಶ್ವದ ಬಿಲಿಯನ್‌ಗಟ್ಟಲೆ ಜನರ ಅಗತ್ಯಗಳನ್ನು ಪೂರೈಸುವುದು ಪ್ರಪಂಚದ 50000 ಪ್ರಾಣಿ ಪ್ರಭೇದಗಳು ಮಾತ್ರ. ಅಂದರೆ, ಜಗತ್ತಿನ ಐವರಲ್ಲಿ ಒಬ್ಬರು ತಮ್ಮ ದೈನಂದಿನ ಅಗತ್ಯಗಳಿಗೆ ನಂಬಿರುವುದು ವನ್ಯ ಸಂಪತ್ತನ್ನು. ಆಹಾರ, ಉರುವಲು, ಉದ್ದಿಮೆ, ಉತ್ಪಾದನೆ, ಆರ್ಥಿಕತೆ- ಹೀಗೆ ಬದುಕಿನ ಬಹಳಷ್ಟು ಕವಲುಗಳು ಆರಂಭವಾಗಿ, ಮುಂದುವರಿದು, ಕೊನೆ ತಲುಪುವುದು ಕಾಡಿನ ದಾರಿಗಳಲ್ಲಿ. ಜಗತ್ತಿನ 2.4 ಬಿಲಿಯನ್‌ ಜನ ಇಂದಿಗೂ ಉರುವಲಿಗೆ ಕಾಡನ್ನೇ ನಂಬಿಕೊಂಡಿದ್ದಾರೆ. ಹಲವಾರು ಜಾತಿಯ ಕ್ಯಾಕ್ಟಸ್‌ಗಳು, ಓಕ್‌ ಮರಗಳು ಸೇರಿದಂತೆ ಸಾವಿರಾರು ಪ್ರಭೇದದ ಸಸ್ಯಗಳು ಮಿಣುಕು ದೀಪದಂತಾಗಿವೆ.

Exit mobile version