ಪಂಜಾಬಿ ಗಾಯಕ, ಬಾಲಿವುಡ್ ನಲ್ಲಿ ಸಖತ್ ಖ್ಯಾತಿ ಗಳಿಸಿರುವ ಗಾಯಕ ಹನಿ ಸಿಂಗ್ (ಯೋ ಯೋ ಹನಿ ಸಿಂಗ್-Honey Singh) ಈಗ ಭಯದಲ್ಲಿದ್ದಾರೆ. ಅವರಿಗೆ ಜೀವ ಬೆದರಿಕೆ ಕರೆ ಬಂದಿದ್ದು, ರಕ್ಷಣೆಗಾಗಿ ದೆಹಲಿ ಪೋಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ. ‘ಫೋನ್ ಮಾಡಿದವನು ತಾನು ಗ್ಯಾಂಗ್ಸ್ಟರ್ ಗೋಲ್ಡಿ ಬ್ರಾರ್ ಎಂದು ಹೇಳಿಕೊಂಡಿದ್ದಾನೆ. ಕೊಲೆ ಮಾಡುವುದಾಗಿ ಬೆದರಿಸಿದ್ದಾನೆ’ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಅವರು ತಿಳಿಸಿದ್ದಾರೆ.
ಈ ಗೋಲ್ಡಿ ಬ್ರಾರ್ ಒಬ್ಬ ಕುಖ್ಯಾತ ಗ್ಯಾಂಗ್ಸ್ಟರ್. 2022ರ ಮೇ ತಿಂಗಳಲ್ಲಿ ನಡೆದ ಪಂಜಾಬ್ ಖ್ಯಾತ ಗಾಯಕ ಸಿಧು ಮೂಸೆವಾಲಾ ಹತ್ಯೆಯ ಪ್ರಮುಖ ರೂವಾರಿ. ಈತ ಕೆನಡಾದಲ್ಲಿ ಇದ್ದುಕೊಂಡು ಕೊಲೆ, ಕ್ರೈಂಗಳಿಗೆ ಯೋಜನೆ ಹೆಣೆಯುತ್ತಾನೆ. ಪಂಜಾಬ್ ನ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ನ ಸದಸ್ಯ. ಇದೀಗ ಹನಿ ಸಿಂಗ್ ಅವರಿಗೆ ಕರೆ ಮಾಡಿ, ಸಿಧು ಮೂಸೆವಾಲಾ ಹತ್ಯೆ ಮಾದರಿಯಲ್ಲೇ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ವರದಿಯಾಗಿದೆ.
ಗೋಲ್ಡಿ ಬ್ರಾರ್ ಎಂದು ಹೇಳಿಕೊಂಡು ಕರೆ ಮಾಡಿದ ವ್ಯಕ್ತಿ ಹನಿ ಸಿಂಗ್ ಜತೆ ನೇರವಾಗಿ ಮಾತಾಡಲಿಲ್ಲ. ಬದಲಾಗಿ ಅವರ ಮ್ಯಾನೇಜರ್ ರೋಹಿತ್ ಚಾಬ್ರಾ ಕರೆ ಸ್ವೀಕರಿಸಿದ್ದಾರೆ. ಮೊದಲ ಬಾರಿ ಫೋನ್ ಮಾಡಿದಾಗ ಆತ 50 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾನೆ. ಬಳಿಕ ಪದೇಪದೇ ರೋಹಿತ್ಗೆ ಕರೆ, ವೈಸ್ ಮೆಸೇಜ್ ಮಾಡುತ್ತಲೇ ಇದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಟೀಂ ಲೀಡರ್ ಮೇಲಿನ ಕೋಪಕ್ಕೆ ಹುಸಿ ಬಾಂಬ್ ಬೆದರಿಕೆ ಕರೆ ಮಾಡಿ ಜೈಲು ಸೇರಿದ!
ಇನ್ನು ದೂರು ಕೊಟ್ಟ ಬಳಿಕ ಮಾಧ್ಯಮಗಳ ಜತೆ ಮಾತಾಡಿದ ಗಾಯಕ ಹನಿ ಸಿಂಗ್, ‘ನಾನು ಎಲ್ಲೇ ಹೋಗಲಿ ಜನರಿಂದ ಬರೀ ಪ್ರೀತಿಯನ್ನೇ ಪಡೆದಿದ್ದೇನೆ. ನನಗೆ ಯಾರೊಂದಿಗೂ ಶತ್ರುತ್ವ ಇಲ್ಲ. ಇದೇ ಮೊದಲ ಬಾರಿಗೆ ಇಂಥ ಬೆದರಿಕೆ ಕರೆ ಬಂದಿದೆ. ನಾನು ಗಾಬರಿಗೊಂಡಿದ್ದೇನೆ. ನನ್ನ ಇಡೀ ಕುಟುಂಬಕ್ಕೆ ಭಯವಾಗಿದೆ. ಹೀಗಾಗಿ ದೆಹಲಿ ಪೊಲೀಸರಿಂದ ರಕ್ಷಣೆ ಕೇಳಿದ್ದೇನೆ ಎಂದು ಹೇಳಿದ್ದಾರೆ. ಕಳೆದ ವರ್ಷ ಸಿಧು ಮೂಸೆವಾಲಾ ಹತ್ಯೆ ದೇಶವನ್ನೇ ಬೆಚ್ಚಿಬೀಳಿಸಿತ್ತು. ಆಗ ಇದೇ ಗೋಲ್ಡಿ ಬ್ರಾರ್, ಈ ಕೊಲೆಯ ಹಿಂದಿನ ಮಾಸ್ಟರ್ ಮೈಂಡ್ ಗಳು ನಾನು ಮತ್ತು ಲಾರೆನ್ಸ್ ಬಿಷ್ಣೋಯಿ ಎಂದು ವಿಡಿಯೊ ಮೂಲಕ ಹೇಳಿದ್ದ. ಬ್ರಾರ್ ತಲೆಗೆ ನಗದು ಬಹುಮಾನ ಘೋಷಣೆಯಾಗಿದ್ದು, ಅವನ ಪತ್ತೆಕಾರ್ಯ ನಡೆಯುತ್ತಿದೆ.