ನವ ದೆಹಲಿ: ಜುಲೈ 25 (ನಾಳೆ) ದ್ರೌಪದಿ ಮುರ್ಮು ಭಾರತದ 15ನೇ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ದ್ರೌಪದಿ ಮುರ್ಮು ಒಡಿಶಾ ಮೂಲದವರಾಗಿದ್ದು ಸಂತಾಲ್ ಎಂಬ ಬುಡಕಟ್ಟು ಜನಾಂಗಕ್ಕೆ ಸೇರಿದವರು. ಇದೇ ಮೊದಲ ಬಾರಿಗೆ ಬುಡಕಟ್ಟು ಜನಾಂಗದ ಮಹಿಳೆಯೊಬ್ಬರು ರಾಷ್ಟ್ರದ ರಾಷ್ಟ್ರಪತಿ ಹುದ್ದೆಗೆ ಏರುತ್ತಿರುವುದು ಇಡೀ ಬುಡಕಟ್ಟು ಸಮುದಾಯಕ್ಕೆ ಖುಷಿ ತಂದಿದೆ. ಅದರಲ್ಲೂ ದ್ರೌಪದಿ ಮುರ್ಮು ಬಳಗದಲ್ಲಂತೂ ಥೇಟ್ ಹಬ್ಬದ ವಾತಾವರಣ ಮೂಡಿದೆ.
ನಾಳೆ ದೆಹಲಿಯಲ್ಲಿ ನಡೆಯಲಿರುವ ಪ್ರಮಾಣವಚನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ದ್ರೌಪದಿ ಮುರ್ಮು ತಮ್ಮ ತರಣಿಸೆನ್ ತುಡು ಮತ್ತು ಅವರ ಪತ್ನಿ ಸುಕ್ರಿ ತುಡು ಈಗಾಗಲೇ ಪ್ರಯಾಣ ಬೆಳೆಸಿದ್ದಾರೆ. ಸುಕ್ರಿ ತುಡು ತಮ್ಮ ಅತ್ತಿಗೆ ದ್ರೌಪದಿ ಮುರ್ಮು ಅವರಿಗಾಗಿ ಒಂದು ವಿಶೇಷವಾದ ಸಂತಾಲಿ ಸೀರೆಯನ್ನು ಖರೀದಿಸಿ, ದೆಹಲಿಗೆ ಕೊಂಡೊಯ್ಯುತ್ತಿದ್ದಾರೆ. ಈ ಸೀರೆ ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ಸೀರೆಯಾಗಿದ್ದು ನಾಳಿನ ಪ್ರಮಾಣವಚನ ಕಾರ್ಯಕ್ರಮದಲ್ಲಿ ಇದೇ ಸೀರೆಯನ್ನೇ ಮುರ್ಮು ಉಡಲಿದ್ದಾರೆ ಎಂದು ಹೇಳಲಾಗಿದೆ.
ಈ ಬಗ್ಗೆ ರಾಷ್ಟ್ರೀಯ ಮಾಧ್ಯಮವೊಂದರ ಜತೆ ಮಾತನಾಡಿದ ಸುಕ್ರಿ, ʼನಾನು ನನ್ನ ದೀದಿಗಾಗಿ ಸಂತಾಲಿ ಸಾಂಪ್ರದಾಯಿಕ ಸೀರೆಯನ್ನು ಖರೀದಿಸಿದ್ದೇನೆ. ಅದನ್ನೇ ಉಡಲಿ ಎಂದು ನಾನು ಬಯಸುತ್ತೇನೆ. ನನಗೆ ನಿಜಕ್ಕೂ ದ್ರೌಪದಿ ಮುರ್ಮು ಯಾವ ರೀತಿಯ ಉಡುಗೆ ಧರಿಸುತ್ತಾರೆ ಎಂಬುದುರ ಬಗ್ಗೆ ಗೊತ್ತಿಲ್ಲ. ರಾಷ್ಟ್ರಪತಿ ಭವನವೇ ಅವರ ಉಡುಪನ್ನು ನಿರ್ಧರಿಸಬಹುದುʼ ಎಂದು ಹೇಳಿದ್ದಾರೆ. ಸುಕ್ರಿ ಮತ್ತು ಅವರ ಪತಿ ತರಣಿಸೆನ್ ತುಡು ಅವರೆಲ್ಲ ಮಯೂರ್‌ಭಂಜ್ ಜಿಲ್ಲೆಯ ರಾಯ್‌ರಂಗಪುರದ ಸಮೀಪ ಇರುವ ಉಪಾರ್ಬೇಡಾ ಗ್ರಾಮದಲ್ಲಿಯೇ ನೆಲೆಸಿದ್ದಾರೆ. ಇವರೀಗ ಮುರ್ಮುಗಾಗಿ ಒಂದಷ್ಟು ಸಿಹಿಯನ್ನೂ ತಯಾರಿಸಿಕೊಂಡು ತೆಗೆದುಕೊಂಡು ಹೋಗುತ್ತಿದ್ದಾರೆ.
ಇದನ್ನೂ ಓದಿ: ಸಂತಾಲ್‌ಗಳೆಂದರೆ ಯಾರು? ದ್ರೌಪದಿ ಮುರ್ಮು ಅವರ ಬುಡಕಟ್ಟು ಸಮುದಾಯದ ಪರಿಚಯ ಇಲ್ಲಿದೆ