ನವದೆಹಲಿ: ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್ನ ವಾಸ್ತವಿಕ ಗಡಿ ನಿಯಂತ್ರಣಾ ರೇಖೆ ಬಳಿ ಸದ್ಯ ಪರಿಸ್ಥಿತಿ ಸ್ಥಿರ-ಸಮತೋಲಿತವಾಗಿದೆ ಎಂದು ಚೀನಾ ಹೇಳಿದ್ದಾಗಿ ಎಪಿಎಫ್ ವರದಿ ಮಾಡಿದೆ. ತವಾಂಗ್ ಸೆಕ್ಟರ್ನ ಯಾಂಗ್ಟ್ಸ ಎಂಬಲ್ಲಿ ಡಿಸೆಂಬರ್ 9ರಂದು ಭಾರತ-ಚೀನಾ ಸೈನಿಕರ ನಡುವೆ ಭಾರಿ ಹೊಡೆದಾಟ ಆಗಿದೆ. ಅಂದು ಚೀನಾ ಸೈನಿಕರು ಭಾರತ ಭೂಭಾಗ ಅತಿಕ್ರಮಿಸಲು ಮುಂದಾದಾಗ ಭಾರತೀಯ ಯೋಧರು ಅವರನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಲೋಕಸಭೆಯಲ್ಲಿ ಹೇಳಿದ್ದಾರೆ.
ಇನ್ನೊಂದೆಡೆ ಚೀನಾದಿಂದಲೂ ಈ ಬಗ್ಗೆ ಪ್ರತಿಕ್ರಿಯೆ ಬಂದಿದ್ದು, ‘ಭಾರತ-ಚೀನಾ ಗಡಿಯಲ್ಲೀಗ ಪರಿಸ್ಥಿತಿ ಸ್ಥಿರವಾಗಿದೆ. ಭಾರತ ಮತ್ತು ಚೀನಾ ದೇಶಗಳು ಈ ಗಡಿ ಸಮಸ್ಯೆ ಬಗ್ಗೆ ರಾಜತಾಂತ್ರಿಕವಾಗಿ ಮತ್ತು ಸೇನಾ ಮಟ್ಟದಲ್ಲಿ ಮಾತುಕತೆ ನಡೆಸಿದ್ದಾವೆ ಎಂದು ಚೀನಾ ವಿದೇಶಾಂಗ ಇಲಾಖೆ ವಕ್ತಾರ ವಾಂಗ್ ವೆನ್ಬಿನ್ ತಿಳಿಸಿದ್ದಾರೆ.
ಡಿಸೆಂಬರ್ 9ರಂದು ಅರುಣಾಚಲದ ವಾಸ್ತವ ಗಡಿ ರೇಖೆ(ಎಲ್ಎಸಿ) ಬಳಿಯ ತವಾಂಗ್ ಪ್ರದೇಶದ ಯಾಂಗತ್ಸೆ ಎಂಬಲ್ಲಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್ಎ)ಯ 300ರಿಂದ 400 ಸೈನಿಕರು ಮತ್ತು ಭಾರತದ ಸೈನಿಕರು ಗಡಿಯಲ್ಲಿ ಹೊಡೆದಾಡಿಕೊಂಡಿದ್ದಾರೆ. ಈ ಸಂಘರ್ಷದಲ್ಲಿ ಎರಡೂ ಕಡೆ ಯೋಧರಿಗೂ ಸಣ್ಣಮಟ್ಟದ ಗಾಯಗಳಾಗಿವೆ. ಯಾರದ್ದೂ ಜೀವ ಹಾನಿಯಾಗಿಲ್ಲ ಎಂದು ವರದಿಯಾಗಿದೆ. ಈಗಾಗಲೇ ತಾವಂಗ್ ವಲಯದಲ್ಲಿರುವ ಎರಡೂ ಸೇನೆಗಳ ನಡುವೆ ಮಿಲಿಟರಿ ಮಟ್ಟದ ಮಾತುಕತೆ ನಡೆದಿದೆ ಎಂದೂ ಹೇಳಲಾಗಿದೆ.
ಇದನ್ನೂ ಓದಿ: ವಿಸ್ತಾರ Explainer | ಭಾರತದ ಜತೆ ಚೀನಾ ಗಡಿ ಕಿರಿಕ್; ಏನಿದರ ಹಿನ್ನೆಲೆ?