ಥಾಣೆ: ನಿರ್ಮಾಣದ ಹಂತದ ಕಟ್ಟಡದ (Under Construction Building) ಲಿಫ್ಟ್ (Lift Collapses) ಕುಸಿದು, 6 ಜನರು ಮೃತಪಟ್ಟ ಕೆಲವರು ಗಾಯಗೊಂಡ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ (Thane) ನಡೆದಿದೆ. ಭಾನುವಾರ ಸಂಜೆ 5:30 ರ ಸುಮಾರಿಗೆ 40 ಅಂತಸ್ತಿನ ಕಟ್ಟಡದಿಂದ ಕಾರ್ಮಿಕರು ಟೆರೇಸ್‌ನಲ್ಲಿ ವಾಟರ್‌ಫ್ರೂಫಿಂಗ್ ಕೆಲಸ ಮುಗಿಸಿ ಇಳಿಯುತ್ತಿದ್ದಾಗ ಈ ಅವಘಡ ಸಂಭವಿಸಿದೆ ಎಂದು ಥಾಣೆ ಮಹಾನಗರ ಪಾಲಿಕೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಮೃತಪಟ್ಟವರು ಮತ್ತು ಗಾಯಗೊಂಡವರೆಲ್ಲರೂ ಕಾರ್ಮಿಕರಾಗಿದ್ದಾರೆ. ಪ್ರಾದೇಶಿಕ ವಿಪತ್ತು ನಿರ್ವಹಣಾ ಕೋಶ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿತು. ಅಲ್ಲದೇ, ನೆಲಮಾಳಿಗೆಯ ಪಾರ್ಕಿಂಗ್‌ನಿಂದ ಕಾರ್ಮಿಕರನ್ನು ರಕ್ಷಣೆ ಮಾಡಿತು. ಮೃತರನ್ನ ಮಹೇಂದ್ರ ಚೌಪಾಲ್(32), ರೂಪೇಶ್ ಕುಮಾರ್ ದಾಸ್(21), ಹರುಣ್ ಶೇಖ್(47), ಮಿಥಲೇಶ್(35), ಕರಿದಾಸ್(38) ಎಂದು ಗುರುತಿಸಲಾಗಿದೆ. ಇನ್ನೂಬ್ಬ ಮೃತಪಟ್ಟವರು ಗುರುತು ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.
ನಿರ್ಮಾಣ ಹಂತದ ಕಟ್ಟಡದ ಲಿಫ್ಟ್‌ನ ಸಪೋರ್ಟಿಂಗ್ ಕೇಬಲ್‌ಗಳಲ್ಲಿ ಒಂದು ತುಂಡಾದ ಪರಿಣಾಮ ಲಿಫ್ಟ್ ಕುಸಿತ ಕಂಡಿದೆ. ಆದರೆ, ಲಿಫ್ಟ್ ಕೇಬಲ್ ತುಂಡಾಗಿದ್ದು ಹೇಗೆ ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ ಎಂದು ಎಂದು ಥಾಣೆಯ ವಿಪತ್ತು ನಿರ್ವಹಣಾ ಕೋಶದ ಮುಖ್ಯಸ್ಥ ಯಾಸಿನ್ ತದ್ವಿ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Lift Collapses | ಗುಜರಾತ್ನಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಲಿಫ್ಟ್ ಕುಸಿತ; 7 ಕಾರ್ಮಿಕರು ಸಾವು
ನೋಯ್ಡಾದಲ್ಲಿ ಕಳೆದ ತಿಂಗಳು ಇದೇ ರೀತಿಯ ಘಟನೆ ನಡೆದಿತ್ತು. ನೋಯ್ಡಾದ ಹೌಸಿಂಗ್ ಕಾಂಪ್ಲೆಕ್ಸ್‌ನ ಲಿಫ್ಟ್ ಕುಸಿದ ಪರಿಣಾಮ, ಆಘಾತದಿಂದ ಹಿರಿಯಮ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಕೇಬಲ್ ತುಂಡಾದ ಪರಿಣಾಮ ಲಿಫ್ಟ್ ಕುಸಿತವಾಗಿತ್ತು ಎಂದು ಪೊಲೀಸರು ತಿಳಿಸಿದ್ದರು. ಮೃತ ಮಹಿಳೆಯನ್ನು 73 ವರ್ಷದ ಸುಶೀಲಾ ದೇವಿ ಎಂದು ಗುರುತಿಸಲಾಗಿತ್ತು.