ಭೋಪಾಲ್: ಮಧ್ಯಪ್ರದೇಶದ ಮೊರೆನಾದಲ್ಲಿ ಇಂದು ಒಂದೇ ಕುಟುಂಬದ ಆರು ಮಂದಿಯನ್ನು ಹತ್ಯೆ ಮಾಡಲಾಗಿದೆ (Six Of Family Killed). ಇನ್ನಿಬ್ಬರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಲೆಪಾ ಎಂಬ ಹಳ್ಳಿಯಲ್ಲಿ ಈ ದುರ್ಘಟನೆ ನಡೆದಿದೆ. ಲೇಪಾದಲ್ಲಿ ಮನೆಯೊಂದಕ್ಕೆ ಬಂದ ಒಂದಷ್ಟು ಮಂದಿ, ಮೊದಲು ಆ ಮನೆಯವರನ್ನು ಕೋಲಿನಿಂದ ಥಳಿಸಿದ್ದಾರೆ. ಬಳಿಕ ರೈಫಲ್ನಿಂದ ಗುಂಡು ಹೊಡೆದಿದ್ದಾರೆ. ಈ ವಿಡಿಯೊಗಳೆಲ್ಲ ವೈರಲ್ ಆಗುತ್ತಿವೆ.
ಧೀರ್ ಸಿಂಗ್ ತೋಮರ್ ಮತ್ತು ಗಜೇಂದ್ರ ಸಿಂಗ್ ತೋಮರ್ ಕುಟುಂಬಗಳ ಮಧ್ಯೆ ಭೂಮಿಗೆ ಸಂಬಂಧಪಟ್ಟಂತೆ ಮೊದಲಿನಿಂದಲೂ ವಿವಾದ ಇತ್ತು. 2013ರಿಂದಲೂ ಈ ಕುಟುಂಬಗಳು ಪರಸ್ಪರೆಡೆಗೆ ದ್ವೇಷ ಕಾರುತ್ತಿದ್ದವು. 2013ರಲ್ಲಿ ಧೀರ್ ಸಿಂಗ್ ತೋಮರ್ ಕುಟುಂಬದ ಇಬ್ಬರನ್ನು ಗಜೇಂದ್ರ ಸಿಂಗ್ ಕುಟುಂಬದವರು ಕೊಂದಿದ್ದರು. ಬಳಿಕ ಹಳ್ಳಿಯಿಂದಲೇ ಓಡಿ ಹೋಗಿದ್ದರು. ಕೋರ್ಟ್ನಲ್ಲಿ ಈ ಕೇಸ್ ನಡೆದು, ಎರಡೂ ಕುಟುಂಬಗಳ ಮಧ್ಯೆ ರಾಜಿ ಸಂಧಾನವಾಗಿತ್ತು. ಹೀಗಾಗಿ ಇಂದು ಗಜೇಂದ್ರ ತೋಮರ್ ಕುಟುಂಬದವರು ವಾಪಸ್ ಹಳ್ಳಿಗೆ ಆಗಮಿಸಿದ್ದರು. ಆದರೆ ರಾಜಿಯಾದ ಮರುಕ್ಷಣವೇ ಮತ್ತೆ ಗುಂಡಿನ ಶಬ್ದ ಮೊಳಗಿದೆ.
ಇದನ್ನೂ ಓದಿ: ದೆಹಲಿಯಲ್ಲಿ ಬಿಜೆಪಿ ಮುಖಂಡನ ಹತ್ಯೆ; ಕಚೇರಿಗೆ ನುಗ್ಗಿ ಒಂದೇ ಸಮನೆ ಗುಂಡು ಹಾರಿಸಿದ ಇಬ್ಬರು ದುಷ್ಕರ್ಮಿಗಳು
ಆದರೆ ಧೀರ್ ಸಿಂಗ್ ತೋಮರ್ ಕುಟುಂಬದವರು ಹಳೇ ದ್ವೇಷವನ್ನು ಮರೆತಿರಲಿಲ್ಲ. ತಮ್ಮ ಕುಟುಂಬದ ಇಬ್ಬರನ್ನು ಹತ್ಯೆ ಮಾಡಿದ ಗಜೇಂದ್ರ ಸಿಂಗ್ ತೋಮರ್ ಮತ್ತು ಆತನ ಕುಟುಂಬದವರನ್ನು ಟಾರ್ಗೆಟ್ ಮಾಡಿತು. ಇಂದು ಅವರ ಮನೆಗೇ ಹೋಗಿ ಒಟ್ಟು ಆರು ಮಂದಿಯನ್ನು ಕೊಂದಿದ್ದಾರೆ. ಧೀರ್ ಸಿಂಗ್ ತೋಮರ್ ಕುಟುಂಬದವರ ಹಲ್ಲೆಗೆ, ಗಜೇಂದ್ರ ಸಿಂಗ್ ತೋಮರ್ ಮತ್ತು ಆತನ ಇಬ್ಬರು ಮಕ್ಕಳು, ಅವರ ಮನೆಯ ಮೂವರು ಮಹಿಳೆಯರು ಮೃತಪಟ್ಟಿದ್ದಾರೆ. ಇನ್ನಿಬ್ಬರೂ ಬದುಕುಳಿಯುವುದು ಕಷ್ಟವಿದೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಟ್ಟು 8ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.