ನವ ದೆಹಲಿ: ಓಮನ್ ದೇಶದ ಮಸ್ಕತ್ ಏರ್ಪೋರ್ಟ್ ರನ್ ವೇದಲ್ಲಿ ಏರ್ ಇಂಡಿಯಾ ವಿಮಾನದಲ್ಲಿ ತೀವ್ರ ಸ್ವರೂಪದ ಹೊಗೆ ಕಾಣಿಸಿಕೊಂಡಿದ್ದು, ತಕ್ಷಣವೇ ಅದರಲ್ಲಿದ್ದ ಮೂರು ನವಜಾತ ಶಿಶುಗಳು ಸೇರಿ, 145 ಪ್ರಯಾಣಿಕರನ್ನೆಲ್ಲ ಸ್ಥಳಾಂತರ ಮಾಡಲಾಗಿದೆ. ಹಾಗಿದ್ದಾಗ್ಯೂ ಸುಮಾರು 14 ಪ್ರಯಾಣಿಕರು ಗಾಯಗೊಂಡಿದ್ದಾರೆ. ಈ ಏರ್ ಇಂಡಿಯಾ ವಿಮಾನ ಕೇರಳದ ಕೊಚ್ಚಿಯಿಂದ ಮಸ್ಕತ್ಗೆ ಹೋಗಿತ್ತು. ಅಲ್ಲಿಂದ ಮತ್ತೆ ವಾಪಸ್ ಬರಬೇಕಿತ್ತು. ಇನ್ನೇನು ಕೆಲವೇ ಹೊತ್ತಲ್ಲಿ ಟೇಕ್ ಆಫ್ ಆಗಬೇಕು.. ಅಷ್ಟರಲ್ಲಿ ವಿಮಾನದ ಎಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ದಟ್ಟವಾದ ಹೊಗೆಯೂ ಎದ್ದು ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಹೀಗೆ ಎಂಜಿನ್ ದೋಷಕ್ಕೆ ಒಳಗಾಗಿದ್ದು ಏರ್ ಇಂಡಿಯಾದ IX-442, VT-AXZ ವಿಮಾನ. ಮಸ್ಕತ್ ರನ್ ವೇದಲ್ಲಿ ಹೊರಡಲು ಸಿದ್ಧವಾಗಿ ನಿಂತಿತ್ತು. ಪ್ರಯಾಣಿಕರೂ ಸಹ ಹತ್ತಿ ಕುಳಿತಿದ್ದರು. ಆಗ ಎಂಜಿನ್ನಲ್ಲಿ ಒಮ್ಮಲೇ ಹೊಗೆ ಕಾಣಿಸಿಕೊಂಡಿದೆ. ವಿಮಾನದ ಹಿಂಬದಿಯ ಸ್ಲೈಡ್ನಿಂದ ಪ್ರಯಾಣಿಕರನ್ನು ಕೆಳಗೆ ಇಳಿಸಲಾಗಿದೆ. ಪ್ರಯಾಣಿಕರು ಫ್ಲೈಟ್ನಿಂದ ಇಳಿದು ಏರ್ಪೋರ್ಟ್ನತ್ತ ಓಡುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಒಮ್ಮೆ ಏನಾದರೂ ವಿಮಾನ ಟೇಕ್ ಆಫ್ ಆದಾಗ ಹೀಗೆ ಒಮ್ಮಿಂದೊಮ್ಮೆಲೆ ಬೆಂಕಿ ಕಾಣಿಸಿಕೊಂಡಿದ್ದರೆ ದೊಡ್ಡಮಟ್ಟದ ಅಪಾಯ ಎದುರಾಗುತ್ತಿತ್ತು.
ಇತ್ತೀಚೆಗೆ ಏರ್ ಇಂಡಿಯಾ ಸೇರಿ ಭಾರತದ ಪ್ರಮುಖ ಏರ್ಲೈನ್ಸ್ಗಳ ವಿಮಾನಗಳಲ್ಲಿ ಪದೇಪದೆ ತಾಂತ್ರಿಕ ದೋಷ ಕಾಣಿಸುತ್ತಿದೆ. ಹೋಗಬೇಕಾದಲ್ಲಿ ಹೋಗಲು ಸಾಧ್ಯವಾಗದೆ ತುರ್ತು ಭೂಸ್ಪರ್ಶ ಕಾಣುತ್ತಿರುವ ವಿಮಾನಗಳ ಸಂಖ್ಯೆ ಹೆಚ್ಚಿದೆ. ಎರಡು ತಿಂಗಳ ಹಿಂದೆ ಕೇರಳದ ಕೊಯಿಕ್ಕೋಡ್ನಿಂದ ದುಬೈಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ದಲ್ಲಿ ಕೂಡ ಅದೇನೋ ಸುಟ್ಟು ಹೋದ ವಾಸನೆ ಬಂದ ಬಳಿಕ ಅದನ್ನು ಮಸ್ಕತ್ ಏರ್ಪೋರ್ಟ್ನಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿತ್ತು. ಅದಕ್ಕೂ ಮೊದಲು ಮೇ ತಿಂಗಳಲ್ಲಿ ಮುಂಬೈನಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ವಿಮಾನ ಕೂಡ ಎಂಜಿನ್ನಲ್ಲಿ ದೋಷ ಕಂಡುಬಂದ ಬಳಿಕ ವಾಪಸ್ ಮುಂಬೈಗೆ ಹೋಗಿ ಲ್ಯಾಂಡ್ ಆಗಿತ್ತು.
ಇದನ್ನೂ ಓದಿ: ಮುಂಬಯಿನಿಂದ ಬೆಂಗಳೂರಿಗೆ ಹೊರಟಿದ್ದ ಏರ್ ಇಂಡಿಯಾ ತುರ್ತು ಭೂಸ್ಪರ್ಶ