ನವ ದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿಯಾಗಲಿ, ಅವರ ಪುತ್ರಿ ಝೊಯಿಶ್ ಅವರಾಗಲೀ ಗೋವಾ ಬಾರ್ ಆ್ಯಂಡ್ ರೆಸ್ಟೋರೆಂಟ್ನ ಮಾಲೀಕರಲ್ಲ. ಅವರು ಯಾವುದೇ ಲೈಸೆನ್ಸ್ಗೂ ಅರ್ಜಿ ಸಲ್ಲಿಸಿರಲಿಲ್ಲ. ಅವರಿಗೆ ಅನುಕೂಲವಾಗುವಂತೆ ಯಾವುದೇ ಪರವಾನಗಿಯನ್ನೂ ನೀಡಲಾಗಿಲ್ಲ ಮತ್ತು ಆ ಭೂಮಿಯೂ ಅವರಿಗೆ ಸೇರಿದ್ದಲ್ಲ ಎಂಬುದು ಕೋರ್ಟ್ಗೆ ಸಲ್ಲಿಸಲಾದ ದಾಖಲೆಗಳಿಂದ ಸ್ಪಷ್ಟವಾಗುತ್ತಿದೆ ಎಂದು ದೆಹಲಿ ಹೈಕೋರ್ಟ್ ಹೇಳಿದೆ.
ಸ್ಮೃತಿ ಇರಾನಿ ಪುತ್ರಿ ಝೋಯಿಶ್ ಗೋವಾದಲ್ಲಿ ಬಾರ್ & ರೆಸ್ಟೋರೆಂಟ್‌ವೊಂದನ್ನು ನಡೆಸುತ್ತಿದ್ದು, ಅದರ ಪರವಾನಗಿ ನಕಲಿ ಎಂದು ಕಾಂಗ್ರೆಸ್ ನಾಯಕರಾದ ಜೈರಾಮ್ ರಮೇಶ್, ಪವನ್ ಖೇರಾ, ನೆಟ್ಟಾ ಡಿಸೋಜಾ ಆರೋಪ ಮಾಡಿದ್ದರು. ಅಲ್ಲದೆ, ಕೆಲವು ದಾಖಲೆಯ ಪ್ರತಿಯನ್ನು ಅವರು ಪೋಸ್ಟ್ ಮಾಡಿದ್ದರು. ಹೀಗೆ ಆರೋಪ ಮಾಡಿದ್ದ ಕಾಂಗ್ರೆಸ್ ನಾಯಕರ ವಿರುದ್ಧ ಸ್ಮೃತಿ ಇರಾನಿ ಕೋರ್ಟ್ ಮೆಟ್ಟಿಲೇರಿದ್ದರು. 2 ಕೋಟಿ ರೂಪಾಯಿಯ ಸಿವಿಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು.
ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದ್ದ ಹೈಕೋರ್ಟ್ ನ್ಯಾಯಮೂರ್ತಿ ಮಿನಿ ಪುಷ್ಕರಣ ನೇತೃತ್ವದ ಪೀಠ, ಜುಲೈ 29ರಂದು ಮೂವರು ಕಾಂಗ್ರೆಸ್ ನಾಯಕರಿಗೆ ಸಮನ್ಸ್ ನೀಡಿತ್ತು. ಜೊಯಿಶ್ ವಿರುದ್ಧ ಹಾಕಿರುವ ಎಲ್ಲ ರೀತಿಯ ಸೋಷಿಯಲ್ ಮೀಡಿಯಾ ಪೋಸ್ಟ್ಗಳನ್ನೂ 24ಗಂಟೆಯೊಳಗೆ ತೆಗೆಯುವಂತೆ ಸೂಚಿಸಿತ್ತು. ಹಾಗೇ, ಕಾಂಗ್ರೆಸ್ ನಾಯಕರು ಸಲ್ಲಿಸಿದ ದಾಖಲೆಗಳು ಮತ್ತು ಸುದ್ದಿಗೋಷ್ಠಿಯಲ್ಲಿ ತೋರಿಸಿದ ಆಯ್ದ ಭಾಗಗಳನ್ನು ನಾವು ಪರಿಶೀಲನೆ ಮಾಡಿದ್ದೇವೆ. ಹೀಗೆ ಆರೋಪ ಮಾಡಿದವರು ವಾಸ್ತವ ಸಂಗತಿಗಳನ್ನು ಸರಿಯಾಗಿ ಪರಿಶೀಲಿಸದೆ, ಫಿರ್ಯಾದಿದಾರರ (ಸ್ಮೃತಿ ಇರಾನಿ) ವಿರುದ್ಧ ವೃಥಾ ಆರೋಪ ಮಾಡಿದ್ದು ಸ್ಪಷ್ಟವಾಗುತ್ತದೆ. ಹಾಗೇ, ಇವರೆಲ್ಲ ಮಾಡಿದ ಟ್ವೀಟ್-ರೀಟ್ವೀಟ್ಗಳಿಂದ ಫಿರ್ಯಾದಿದಾರರ ಘನತೆಗೆ ದಕ್ಕೆ ಆಗಿದೆ’ ಎಂದು ಹೇಳಿತ್ತು.
ಕಾಂಗ್ರೆಸ್ ಮಾಡಿದ ಆರೋಪ ಏನು?
ಕಾಂಗ್ರೆಸ್ ವಕ್ತಾರ ಪವನ್ ಖೇರಾ ಮತ್ತು ಜೈರಾಮ್ ರಮೇಶ್ ಅವರು ಇತ್ತೀಚೆಗೆ ಒಂದು ಪತ್ರಿಕಾಗೋಷ್ಠಿ ನಡೆಸಿ, ಇರಾನಿ ಕುಟುಂಬದ ವಿರುದ್ಧ ಭ್ರಷ್ಟಾಚಾರ ಆರೋಪ ಹೊರಿಸಿದರು. ಸ್ಮೃತಿ ಇರಾನಿ ಅವರ ಮಗಳು ಗೋವಾದಲ್ಲಿ ನಡೆಸುತ್ತಿರುವ ರೆಸ್ಟೋರೆಂಟ್ ನಕಲಿ ಲೈಸೆನ್ಸ್ ಹೊಂದಿದೆ. ಇದು ಗಂಭೀರವಾದ ಅಪರಾಧವಾಗಿದ್ದು, ಈ ಭ್ರಷ್ಟಾಚಾರದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಸಚಿವೆ ಸ್ಮೃತಿ ಇರಾನಿಯ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದರು.
ತಮ್ಮ ಮಾತಿಗೆ ಪೂರಕವಾಗಿ ಅವರು ಒಂದು ಶೋಕಾಸ್ ನೋಟೀಸ್‌ನ ಪ್ರತಿಯನ್ನು ಪ್ರದರ್ಶಿಸಿದರು. ಇದು ಗೋವಾದ ಎಕ್ಸೈಸ್ ಕಮಿಷನರ್ ನಾರಾಯಣ ಎಂ. ಗಾಡ್ ಎಂಬವರು ಜುಲೈ 21ರಂದು ರೆಸ್ಟೋರೆಂಟ್‌ಗೆ ನೀಡಿದ್ದ ಶೋಕಾಸ್ ನೋಟೀಸ್. ಐರೆಸ್ ರೋಡ್ರಿಗಸ್ ಎಂಬ ವಕೀಲರು ಕೊಟ್ಟ ದೂರಿನ ಮೇರೆಗೆ ನೀಡಲಾದ ಶೋಕಾಸ್ ನೋಟೀಸ್ ಅದಾಗಿತ್ತು.
ಇದನ್ನೂ ಓದಿ: ಪುತ್ರಿ ವಿರುದ್ಧದ ಹೇಳಿಕೆ ನೀಡಿದ ಕಾಂಗ್ರೆಸ್ ನಾಯಕರಿಗೆ ಸ್ಮೃತಿ ಇರಾನಿ ನೋಟಿಸ್