ಕೇಂದ್ರ ಸಚಿವೆ ಸ್ಮೃತಿ ಇರಾನಿ ಪುತ್ರಿ (Smriti Irani) ಶನೆಲ್ಲೆ ಇರಾನಿ ವಿವಾಹ ಅರ್ಜುನ್ ಭಲ್ಲಾ (Shanelle Irani Wedding With Arjun Bhalla) ಜತೆ ಗುರುವಾರ ರಾಜಸ್ಥಾನದ ಖಿಮ್ಸರ್ ಕೋಟೆಯಲ್ಲಿ ಅದ್ಧೂರಿಯಾಗಿ ನಡೆಯಿತು. ಶನೆಲ್ಲೆ ಇರಾನಿ ವೃತ್ತಿಯಲ್ಲಿ ವಕೀಲೆಯಾಗಿದ್ದು, ಅವರ ಪತಿ ಅರ್ಜುನ್ ಭಲ್ಲಾ ಕೂಡ ಕೆನಡಾ ಮೂಲದ ವಕೀಲರೇ ಆಗಿದ್ದಾರೆ. ಇವರಿಬ್ಬರ ನಿಶ್ಚಿತಾರ್ಥ 2021ರ ಡಿಸೆಂಬರ್ ತಿಂಗಳಲ್ಲಿ ನಡೆದಿತ್ತು. ಶನೆಲ್ಲಾ ಮತ್ತು ಅರ್ಜುನ್ ಭಲ್ಲಾ ವಿವಾಹ ಸಮಾರಂಭ ಫೆ.7ರಿಂದ ಪ್ರಾರಂಭವಾಗಿತ್ತು. ಮೊದಲ ದಿನ ಅರಿಶಿಣ ಶಾಸ್ತ್ರ, ಮೆಹಂದಿ, ಸಂಗೀತ ಕಾರ್ಯಕ್ರಮಗಳೊಂದಿಗೆ ಮೂರು ದಿನ ಅದ್ಧೂರಿ-ಸಂಭ್ರಮದಿಂದ ಮದುವೆ ಸಮಾರಂಭ ನಡೆದಿದೆ. ಇದರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಸ್ಮೃತಿ ಇರಾನಿ ಕೆಂಪು ಸೀರೆಯಲ್ಲಿ ಮಿಂಚಿದ್ದನ್ನು ನೋಡಬಹುದು.
ಅಂದಹಾಗೆ, ಶನೆಲ್ಲೆ ಇರಾನಿ ಅವರು ಸ್ಮೃತಿ ಇರಾನಿ ಪತಿ ಜುಬಿನ್ ಇರಾನಿಗೆ ಮೊದಲ ಪತ್ನಿ ಮೋನಾ ಇರಾನಿಯಲ್ಲಿ ಹುಟ್ಟಿದ ಮಗಳು. ಬಳಿಕ ಜುಬಿನ್ ಅವರು ಮೋನಾಗೆ ವಿಚ್ಛೇದನ ಕೊಟ್ಟು, ಸ್ಮೃತಿ ಇರಾನಿಯವರನ್ನು 2001ರಲ್ಲಿ ವಿವಾಹವಾಗಿದ್ದಾರೆ. ಇವರಿಬ್ಬರಿಗೆ ಹುಟ್ಟಿದ ಮಕ್ಕಳ ಹೆಸರು ಜೋಯಿಶ್ ಇರಾನಿ ಮತ್ತು ಜೋರ್ ಇರಾನಿ. ಸ್ಮೃತಿ ಇರಾನಿಯವರು ಶನೆಲ್ಲೆ ಇರಾನಿಯನ್ನೂ ತನ್ನ ಸ್ವಂತಮಗಳಂತೆ ಪ್ರೀತಿಸುತ್ತಾರೆ. ಈ ಹಿಂದೆ 2021ರಲ್ಲಿ ಶನೆಲ್ಲೆ ನಿಶ್ಚಿತಾರ್ಥವಾದಾಗಿನ ಫೋಟೋವನ್ನು ಸ್ಮೃತಿ ಇರಾನಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದರು. ‘ನಮ್ಮೆಲ್ಲರ ಹೃದಯಕ್ಕೆ (ಶನೆಲ್ಲೆ) ವಾರಸುದಾರನಾದ ಅರ್ಜುನ್ ಭಲ್ಲಾಗೆ ನಮ್ಮ ಕುಟುಂಬಕ್ಕೆ ಸ್ವಾಗತ’ ಎಂದಿದ್ದರು. ಶನೆಲ್ಲೆ ಇರಾನಿ ಮುಂಬಯಿಯ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಓದಿ, ಬಳಿಕ ವಾಷಿಂಗ್ಟನ್ ಡಿಸಿಯ ಜಾರ್ಜ್ಟೌನ್ ಯೂನಿವರ್ಸಿಟಿ ಕಾನೂನು ಕೇಂದ್ರದಲ್ಲಿ ಎಲ್ಎಲ್ಎಂ ಪದವಿ ಪಡೆದಿದ್ದಾರೆ.
ಇದನ್ನೂ ಓದಿ: ಸ್ಮೃತಿ ಇರಾನಿ ಥಳುಕು-ಬಳುಕು ತೋರಿಸಲು ಬಂದವರು ಎಂದ ಕಾಂಗ್ರೆಸ್ ನಾಯಕ; ರಾಹುಲ್ ಗಾಂಧಿಯನ್ನು ವ್ಯಂಗ್ಯ ಮಾಡಿದ ಸಚಿವೆ