ನವ ದೆಹಲಿ: ‘ಸ್ಮೃತಿ ಇರಾನಿ ಕೇವಲ ತನ್ನ ಥಳುಕು-ಬಳುಕು (latkas jhatka) ತೋರಿಸಲಷ್ಟೇ ಬಂದವರು’ ಎಂದು ಹೇಳುವ ಮೂಲಕ ಕಾಂಗ್ರೆಸ್ ನಾಯಕ ಅಜಯ್ ರಾಯ್ ವಿರುದ್ಧ ಸ್ವತಃ ಸ್ಮೃತಿ ಇರಾನಿ ಮತ್ತು ಇತರ ಬಿಜೆಪಿ ನಾಯಕರು ತಿರುಗಿಬಿದ್ದಿದ್ದಾರೆ. ‘ಇವರೆಲ್ಲ ಸ್ತ್ರೀಯರನ್ನು ದ್ವೇಷಿಸುವ ಗೂಂಡಾಗಳು’ ಎಂದು ಸ್ಮೃತಿ ಇರಾನಿ ಆರೋಪಿಸಿದ್ದಾರೆ. ಬಿಜೆಪಿ ನಾಯಕರು ಸತತ ವಾಗ್ದಾಳಿ ನಡೆಸುತ್ತಿದ್ದು, ಕ್ಷಮೆಗೆ ಆಗ್ರಹಿಸಿದ್ದಾರೆ. ಇಷ್ಟೆಲ್ಲ ಆದರೂ ‘ನಾನು ಮಾತ್ರ ಯಾವ ಕಾರಣಕ್ಕೂ ಕ್ಷಮೆ ಕೋರುವುದಿಲ್ಲ’ ಎಂದು ಅಜಯ್ ರೈ ಉಡಾಫೆ ಉತ್ತರವನ್ನೇ ಕೊಟ್ಟಿದ್ದಾರೆ.
ಏನಿದು ವಿವಾದ?
2019ರ ಲೋಕಸಭಾ ಚುನಾವಣೆಯಲ್ಲಿ ಅಮೇಠಿ ಲೋಕಸಭಾ ಕ್ಷೇತ್ರದಲ್ಲಿ ಸ್ಮೃತಿ ಇರಾನಿ ವಿರುದ್ಧ ಸೋತಿರುವ ರಾಹುಲ್ ಗಾಂಧಿ, 2024ರ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಅಮೇಠಿಯಿಂದ ಸ್ಪರ್ಧಿಸುತ್ತಾರಾ? ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಜಯ್ ರಾಯ್, ‘ಅಮೇಠಿ ಎಂಬುದು ಗಾಂಧಿ ಕುಟುಂಬಕ್ಕೆ ಸೇರಿದ ವಿಧಾನಸಭಾ ಕ್ಷೇತ್ರ. ಇಲ್ಲಿ ರಾಹುಲ್ ಗಾಂಧಿಯೂ ಗೆದ್ದು ಸಂಸದರಾಗಿದ್ದರು. ಅದಕ್ಕೂ ಮೊದಲು ರಾಜೀವ್ ಗಾಂಧಿ, ಸಂಜಯ್ ಗಾಂಧಿ ಇಲ್ಲಿಂದಲೇ ಗೆದ್ದು ಸ್ಪರ್ಧಿಸಿದ್ದರು’ ಎಂದು ಹೇಳಿದರು.
ಇನ್ನು ಇಷ್ಟಕ್ಕೇ ಸುಮ್ಮನಾಗದೆ, ‘ಅಮೇಠಿಯಲ್ಲಿ ಸ್ಮೃತಿ ಇರಾನಿ ಮಾಡಿದ ಅಭಿವೃದ್ಧಿ ಕೆಲಸಗಳಾದರೂ ಏನು? ಇಲ್ಲಿನ ಬಹುತೇಕ ಕಾರ್ಖಾನೆಗಳು ಬಾಗಿಲು ಮುಚ್ಚುವ ಹಂತಕ್ಕೆ ಬಂದುನಿಂತಿವೆ. ಕೈಗಾರಿಕಾ ಪ್ರದೇಶ ಎನ್ನಿಸಿಕೊಂಡ ಜಗದೀಶ್ಪುರದಲ್ಲಂತೂ ಅರ್ಧಕ್ಕರ್ಧ ಕಾರ್ಖಾನೆಗಳು ಈಗಾಗಲೇ ಸಂಪೂರ್ಣವಾಗಿ ಮುಚ್ಚಿಹೋಗಿವೆ. ಇಲ್ಲಿ ಸ್ಮೃತಿ ಇರಾನಿ ಬಂದಿದ್ದೇ ಥಳುಕು-ಬಳುಕು-ವಯ್ಯಾರ ತೋರಿಸಲು. ಈ ಕಾರಣಕ್ಕಾಗಿಯೇ ಅವರನ್ನು ಬಿಜೆಪಿ ನಾಯಕರು ಇಲ್ಲಿಗೆ ಕರೆದುಕೊಂಡು ಬಂದಿದ್ದಾರೆ ಎಂದು ಹೇಳಿದ್ದರು.
ಸ್ಮೃತಿ ಇರಾನಿ ಪ್ರತಿಕ್ರಿಯೆ
ಅಜಯ್ ರಾಯ್ ಹೇಳಿಕೆಗೆ ಸ್ಮೃತಿ ಇರಾನಿ ‘ರಾಹುಲ್ ಗಾಂಧಿ’ಯನ್ನು ಎಳೆದು ತಂದು ತಿರುಗೇಟು ಕೊಟ್ಟಿದ್ದಾರೆ. ‘ರಾಹುಲ್ ಗಾಂಧಿಯವರೇ ನೀವು 2024ರ ಲೋಕಸಭಾ ಚುನಾವಣೆಯಲ್ಲಿ ಅಮೇಠಿಯಿಂದ ಸ್ಪರ್ಧಿಸುತ್ತೀರಿ ಎಂಬುದನ್ನು ನಿಮ್ಮದೇ ಪಕ್ಷದ ನಾಯಕನೊಬ್ಬನ ಬಾಯಿಯಿಂದ ಅತ್ಯಂತ ಅಸಭ್ಯ-ಅಯೋಗ್ಯ ರೀತಿಯಲ್ಲಿ ಘೋಷಿಸಿದ್ದೀರಿ. ನೀವು ಅಮೇಠಿಯಿಂದ ಮಾತ್ರ ಸ್ಪರ್ಧಿಸುತ್ತೀರಾ? ಇನ್ನೊಂದು ಕ್ಷೇತ್ರದಿಂದ ಸ್ಪರ್ಧೆಗೆ ಇಳಿಯುವುದಿಲ್ಲವಾ?, ನಿಮಗೆ ಯಾವುದೇ ಭಯವೂ ಇಲ್ಲವೇ? ಎಂದು ಅತ್ಯಂತ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ ‘ನೀವು ಮತ್ತು ನಿಮ್ಮಮ್ಮ ಇಬ್ಬರೂ ಒಂದು ಕೆಲಸ ಮಾಡಬೇಕು. ನಿಮ್ಮೊಂದಿಗೆ ಇರುವ ಸ್ತ್ರೀದ್ವೇಷಿ ಗೂಂಡಾಗಳಿಗೆ ಭಾಷಣ ಬರೆದುಕೊಡಲು, ಹೊಸಬರನ್ನೊಬ್ಬರನ್ನು ನೇಮಕ ಮಾಡಿಕೊಳ್ಳಬೇಕು’ ಎಂದು ವಿಶೇಷ ಸೂಚನೆಯೊಂದನ್ನೂ ಕೊಟ್ಟಿದ್ದಾರೆ.
ನಾನು ಕ್ಷಮೆ ಕೇಳೋದಿಲ್ಲ
ಸ್ಮೃತಿ ಇರಾನಿ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ ಅಜಯ್ ರಾಯ್ ವಿರುದ್ಧ ಬಿಜೆಪಿಯ ಹಲವು ನಾಯಕರು ತಿರುಗಿಬಿದ್ದಿದ್ದಾರೆ. ಇಡೀ ಕಾಂಗ್ರೆಸ್ ಪಕ್ಷಕ್ಕೆ ಹಿಗ್ಗಾಮುಗ್ಗಾ ಬೈಯುತ್ತಿದ್ದಾರೆ. ಕಾಂಗ್ರೆಸ್ನ ತತ್ವ, ಸಿದ್ಧಾಂತ ಹೇಳಿಕೆಗಳೆಲ್ಲ ಮಹಿಳಾ ವಿರೋಧಿಯಾಗಿಯೇ ಇರುತ್ತವೆ ಎಂದು ವಕ್ತಾರರಾದ ಅನಿಲಾ ಸಿಂಗ್, ಆನಂದ್ ದುಬೆ ಆರೋಪಿಸಿದ್ದಾರೆ. ಕೇಂದ್ರ ಮಾಜಿ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ, ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್, ಕೇಂದ್ರ ಸಚಿವ ರಾಮದಾಸ್ ಅಠಾವಳೆ ಸೇರಿ ಹಲವರು ಅಜಯ್ ರಾಯ್ ಕ್ಷಮೆಕೇಳಬೇಕು ಎಂದು ಆಗ್ರಹಿಸಿದ್ದಾರೆ.
ಆದರೆ ಅಜಯ್ ರಾಯ್ ತಾವು ಕ್ಷಮೆ ಯಾಚಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಇದು ಅಮೇಠಿಯಲ್ಲಿ ಸಾಮಾನ್ಯವಾಗಿ ಮಾತನಾಡುವ ರೀತಿ. ನಾನು ಅಸಂಸದೀಯ ಶಬ್ದವನ್ನು ಎಲ್ಲಿಯೂ ಬಳಕೆ ಮಾಡಿಲ್ಲ. ಯಾರನ್ನೂ ನೋಯಿಸುವ ಉದ್ದೇಶವೂ ನನಗೆ ಇರಲಿಲ್ಲ. ಅತ್ಯಂತ ಸಾಮಾನ್ಯವಾಗಿ ನಾನು ಮಾತನಾಡಿದ್ದೇನೆ. ಹೀಗಿದ್ದ ಮೇಲೆ ನಾನ್ಯಾಕೆ ಕ್ಷಮೆ ಕೇಳಲಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: Viral Video | ಪಠಾಣ್ ‘ಕೇಸರಿ ಬಿಕಿನಿ’ ವಿವಾದದ ಬೆನ್ನಲ್ಲೇ ವೈರಲ್ ಆಯ್ತು ಸ್ಮೃತಿ ಇರಾನಿ ‘ಕೇಸರಿ ತುಂಡುಡುಗೆ’ ವಿಡಿಯೊ