ನವ ದೆಹಲಿ: ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ರಾಷ್ಟ್ರಪತ್ನಿ ಎಂದು ಕರೆದಿದ್ದಕ್ಕೆ ಲೋಕಸಭೆಯಲ್ಲಿ ದೊಡ್ಡ ಗಲಾಟೆಯೇ ನಡೆದುಹೋಗಿದೆ. ಜುಲೈ 28ರಂದು ಬಿಜೆಪಿ ಸಚಿವೆಯರಾದ ಸ್ಮೃತಿ ಇರಾನಿ, ನಿರ್ಮಲಾ ಸೀತಾರಾಮನ್ ಸೇರಿ ಹಲವು ಮಹಿಳಾ ಸಂಸದರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಲೋಕಸಭೆಯಲ್ಲಿ ಸ್ಮೃತಿ ಇರಾನಿ ಅಬ್ಬರಿಸಿದ್ದರು. ʼಮಹಿಳಾ ವಿರೋಧಿ ಕಾಂಗ್ರೆಸ್, ಆದಿವಾಸಿ ಜನಾಂಗದ ವಿರೋಧಿ ಕಾಂಗ್ರೆಸ್ʼ ಎಂದು ಆಕ್ರೋಶ ಭರಿತರಾಗಿ ಮಾತನಾಡಿದ್ದರು. ಹಾಗೇ, ಸೋನಿಯಾ ಗಾಂಧಿ ಕ್ಷಮೆ ಕೇಳಬೇಕು ಎಂದೂ ಆಗ್ರಹಿಸಿದ್ದರು. ಇದೇ ವೇಳೆ ಸೋನಿಯಾ ಗಾಂಧಿ, ಸ್ಮೃತಿ ಇರಾನಿಗೆ ಗದರಿದ್ದಾರೆ. ʼನೀವು ನನ್ನ ಬಳಿ ಮಾತನಾಡಲೇಬೇಡಿʼ ಎಂದೂ ಹೇಳಿದ್ದರು. ಇಷ್ಟೆಲ್ಲ ಆದ ಬಳಿಕ ಅಧೀರ್ ಚೌಧರಿ ʼನಾನು ಉದ್ದೇಶ ಪೂರ್ವಕವಾಗಿ ಮಾಡಿಲ್ಲ. ನನ್ನ ಮಾತಿನಿಂದ ದ್ರೌಪದಿ ಮುರ್ಮುಗೆ ನೋವಾಗಿದ್ದರೆ, ವೈಯಕ್ತಿಕವಾಗಿ ಭೇಟಿಯಾಗಿ, ಕ್ಷಮೆ ಕೇಳುತ್ತೇನೆʼ ಎಂದಿದ್ದರು.
ಇಷ್ಟೆಲ್ಲ ಆದ ಮರುದಿನ ಅಂದರೆ ಇಂದು (ಜು.29) ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ದ್ರೌಪದಿ ಮುರ್ಮುರನ್ನು ಭೇಟಿಯಾಗಿದ್ದಾರೆ. ಈ ವೇಳೆ ಅವರೊಂದಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಕೇಂದ್ರ ಇಲಾಖೆ ರಾಜ್ಯ ಸಚಿವ ಮಹೇಂದ್ರ ಮುಂಜ್ಪಾರಾ ಮತ್ತು ಅಲ್ಪಸಂಖ್ಯಾತ ಇಲಾಖೆ ರಾಜ್ಯ ಸಚಿವ ಜಾನ್ ಬರ್ಲಾ ಕೂಡ ಇದ್ದರು. ‘ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗುವ ಸುಯೋಗ ಒದಗಿ ಬಂದಿತ್ತುʼ ಎಂದು ಸ್ಮೃತಿ ಇರಾನಿ ಟ್ವೀಟ್ ಮಾಡಿಕೊಂಡಿದ್ದಾರೆ.
ಅಧೀರ್ ಚೌಧರಿ ಅವರು ಟಿವಿ ಚಾನಲ್‌ವೊಂದಕ್ಕೆ ಸಂದರ್ಶನ ನೀಡುವಾಗ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಎಂದು ಹೇಳುವ ಬದಲು ರಾಷ್ಟ್ರಪತ್ನಿ ಎಂದು ಸಂಬೋಧಿಸಿದ್ದರು. ಆ ವಿಷಯವನ್ನೇ ಬಿಜೆಪಿ ದೊಡ್ಡದು ಮಾಡಿದೆ. ದ್ರೌಪದಿ ಮುರ್ಮುಗೆ ಅವಮಾನ ಮಾಡುವ ಸಲುವಾಗಿಯೇ ಚೌಧರಿ ಆ ಪದ ಪ್ರಯೋಗ ಮಾಡಿದ್ದಾರೆ ಎಂಬುದು ಬಿಜೆಪಿಯ ಆರೋಪ. ಇದೀಗ ದ್ರೌಪದಿ ಮುರ್ಮು ಸುತ್ತಲೂ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಜಟಾಪಟಿ ನಡೆಯುತ್ತಿರುವ ಹೊತ್ತಲ್ಲೇ ಸ್ಮೃತಿ ಇರಾನಿ ರಾಷ್ಟ್ರಪತಿ ದ್ರೌಪದಿ ಮುರ್ಮುರನ್ನು ಭೇಟಿಯಾಗಿದ್ದು ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ರಾಷ್ಟ್ರಪತಿ ದ್ರೌಪದಿ ಮುರ್ಮುರನ್ನು ಭೇಟಿಯಾಗಿ ಕ್ಷಮೆ ಕೇಳಲು ಸಿದ್ಧ ಎಂದ ಅಧೀರ್ ಚೌಧರಿ