ನವ ದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿಯವರು ತಮ್ಮ ಟ್ವಿಟರ್ನಲ್ಲಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರತಿ ಮಾಡುತ್ತಿರುವ ಫೋಟೋವನ್ನು ತಲೆಕೆಳಗಾಗಿ ಶೇರ್ ಮಾಡಿಕೊಂಡಿದ್ದಾರೆ. ಆ ಫೋಟೋಕ್ಕೆ ‘ಓಂ ನಮಃ ಶಿವಾಯ’ ಎಂದು ಕ್ಯಾಪ್ಷನ್ ಬರೆದಿದ್ದಾರೆ.
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಸದ್ಯ ಮಧ್ಯಪ್ರದೇಶದಲ್ಲಿದೆ. ಇಲ್ಲಿ ನಡೆಯುತ್ತಿರುವ ಪಾದಯಾತ್ರೆಗೆ ಕೈ ನಾಯಕಿ, ರಾಹುಲ್ ಸೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಸೇರಿಕೊಂಡಿದ್ದಾರೆ. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಇಬ್ಬರೂ ಸೇರಿ ಖಾರ್ಗೋನ್ನಲ್ಲಿರುವ ನರ್ಮದಾ ಘಾಟ್ನಲ್ಲಿ ಆರತಿ ನೆರವೇರಿಸಿದ್ದರು. ಈ ವೇಳೆ ರಾಹುಲ್ ಗಾಂಧಿ ಒಂದು ಕೇಸರಿ ಶಾಲು ಧರಿಸಿದ್ದು, ಅದರ ಮೇಲೆ ಓಂ ಎಂದು ಬರೆದುಕೊಂಡಿದೆ. ಆದರೆ ರಾಹುಲ್ ಗಾಂಧಿ ಶಾಲನ್ನು ಉಲ್ಟಾ ಧರಿಸಿದ್ದರಿಂದ ಓಂ ಪದವೂ ಉಲ್ಟಾ ಕಾಣುತ್ತಿದೆ. ಈ ಓಂ ಶಬ್ದ ಸರಿಯಾಗಿ ಕಾಣಿಸಬೇಕು ಎಂಬ ಕಾರಣಕ್ಕೆ ಸ್ಮೃತಿ ಇರಾನಿಯವರು ರಾಹುಲ್ ಗಾಂಧಿ ಫೋಟೋನ್ನು ಉಲ್ಟಾ ಶೇರ್ ಮಾಡಿಕೊಂಡಿದ್ದಾರೆ. ಸ್ಮತಿ ಇರಾನಿ ಶೇರ್ ಮಾಡಿಕೊಂಡಿರುವ ಫೋಟೋದಲ್ಲಿ ರಾಹುಲ್ ಗಾಂಧಿ ಉಲ್ಟಾ ಕಾಣಿಸುತ್ತಿದ್ದರೂ ಅವರ ಮೈಮೇಲೆ ಇರುವ ಶಾಲಿನ ಮೇಲಿನ ಓಂ ಸರಿಯಾಗಿ ಗೋಚರಿಸುತ್ತಿದೆ.
ಕಾಂಗ್ರೆಸ್ನ ಭದ್ರಕೋಟೆ ಎನ್ನಿಸಿದ್ದ ಅಮೇಠಿಯಲ್ಲಿ, 2019ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ವಿರುದ್ಧ ಸ್ಮೃತಿ ಇರಾನಿ ಗೆಲುವು ಸಾಧಿಸಿದ್ದರು. ಆಗ ರಾಹುಲ್ ಗಾಂಧಿಯವರೇ ಎಐಸಿಸಿ ಅಧ್ಯಕ್ಷರೂ ಆಗಿದ್ದರು. ಅಮೇಠಿ ಎಂದರೆ ಕಾಂಗ್ರೆಸ್ ಗೆಲುವು ಪಕ್ಕಾ ಎಂದೇ ಆಗಿತ್ತು. ಹೀಗಿರುವಾಗ ಸ್ಮೃತಿ ಇರಾನಿ ಗೆದ್ದು ಒಂದು ಇತಿಹಾಸವನ್ನೇ ಸೃಷ್ಟಿಸಿದ್ದರು. ಅದಾದ ಮೇಲೆ ಕೂಡ ಸ್ಮೃತಿ ಇರಾನಿ ರಾಹುಲ್ ಗಾಂಧಿ ಮತ್ತು ಅವರ ಕುಟುಂಬದ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸಿಕೊಂಡೇ ಬಂದಿದ್ದಾರೆ. ಈಗ ರಾಹುಲ್ ಗಾಂಧಿಯವರ ಲೋಕಸಭಾ ಕ್ಷೇತ್ರವಾದ ಕೇರಳದ ವಯಾನಾಡಿಗೂ ಅವರು ಭೇಟಿ ಕೊಟ್ಟಿದ್ದರು.
ಇದನ್ನೂ ಓದಿ: Fact Check | ಮದ್ಯ ಸೇವಿಸುತ್ತ ರಾಹುಲ್ ಗಾಂಧಿ ವಿಡಿಯೊ ವೀಕ್ಷಿಸಿದರೇ ಸ್ಮೃತಿ ಇರಾನಿ?