ಫ್ಲೋರಿಡಾದ ಟಾಂಪಾ ಸಿಟಿಯಿಂದ ನ್ಯೂಜೆರ್ಸಿಯ ನೆವಾರ್ಕ್ ಲಿಬರ್ಟಿ ಇಂಟರ್ನ್ಯಾಷನಲ್ ಏರ್ಪೋರ್ಟ್ಗೆ ಬಂದು ಲ್ಯಾಂಡ್ ಆದ ಯುನೈಟೆಡ್ ಫ್ಲೈಟ್ 2038ರ ‘ಬ್ಯುಸಿನೆಸ್ ಕ್ಲಾಸ್’ ವಿಭಾಗದಲ್ಲಿ ಹಾವು ಕಾಣಿಸಿಕೊಂಡು ಪ್ರಯಾಣಿಕರು ಗಾಬರಿಗೊಳ್ಳುವಂತಾಯಿತು. ಬಳಿಕ ಏರ್ಪೋರ್ಟ್ನ ವನ್ಯಜೀವಿ ಕಾರ್ಯಾಚರಣೆ ಸಿಬ್ಬಂದಿ ಮತ್ತು ಬಂದರು ಪ್ರಾಧಿಕಾರ ಪೊಲೀಸ್ ಅಧಿಕಾರಿಗಳು ಜಂಟಿಯಾಗಿ ವಿಮಾನದ ಒಳಹೊಕ್ಕು, ಹಾವನ್ನು ಹಿಡಿದು, ಸಮೀಪದ ಅರಣ್ಯಕ್ಕೆ ಬಿಟ್ಟಿದ್ದಾರೆ. ಅಷ್ಟಲ್ಲದೆ ಇನ್ನೇನಾದರೂ ಹಾವು, ಸರೀಸೃಪಗಳು ಇವೆಯಾ ಎಂದು ಇಡೀ ವಿಮಾನವನ್ನು ಹುಡುಕಿ, ಏನೂ ಇಲ್ಲವೆಂದು ಖಚಿತಪಡಿಸಿಕೊಂಡಿದ್ದಾರೆ.
ವಿಮಾನದ ಬ್ಯುಸಿನೆಸ್ ಕ್ಲಾಸ್ನಲ್ಲಿ ಕುಳಿತಿದ್ದ ಪ್ರಯಾಣಿಕರಿಗೆ ಹಾವು ಕಂಡಿದ್ದೇ ವಿಮಾನ ಲ್ಯಾಂಡ್ ಆದ ಬಳಿಕ. ಹೀಗೆ ಹಾವು ಕಾಣಿಸುತ್ತಿದ್ದಂತೆ ಅತ್ಯಂತ ಗಾಬರಿಯಿಂದ ತಮ್ಮ ಕಾಲುಗಳನ್ನೆಲ್ಲ ಮೇಲೆತ್ತಿ ಇಟ್ಟುಕೊಂಡು ಕಿರುಚಾಡಿದ್ದಾರೆ. ಗಾಬರಿಯಿಂದ ನಡುಗಿದ್ದಾರೆ. ತಮ್ಮ ಲಗೇಜ್ ಎತ್ತಿಕೊಂಡು ಎದ್ದೆನೋ..ಬಿದ್ದೆನೋ ಎಂದು ಓಡಿದ್ದಾರೆ. ನಂತರ ಏರ್ಪೋರ್ಟ್ ಸಿಬ್ಬಂದಿಗೆ ವಿಷಯ ತಿಳಿಸಲಾಗಿತ್ತು. ಹಾವು ಹಿಡಿಯಲು ಯಾವುದೇ ತೊಂದರೆಯೂ ಆಗಿಲ್ಲ. ಗಲಾಟೆಯಲ್ಲಿ ಯಾರೂ ಗಾಯಗೊಂಡಿಲ್ಲ ಎಂದೂ ಹೇಳಲಾಗಿದೆ.
ಅಂದಹಾಗೇ, ಈಗ ವಿಮಾನದಲ್ಲಿ ಕಂಡುಬಂದ ಗಾರ್ಟರ್ ಹಾವು ಅಷ್ಟೇನೂ ಅಪಾಯಕಾರಿಯಲ್ಲ, ವಿಷಕಾರಿಯೂ ಅಲ್ಲ. ಅಷ್ಟು ಬೇಗ ಕಡಿಯುವುದೂ ಇಲ್ಲ. ಹಾವಿಗೆ ನಾವು ಉದ್ದೇಶಪೂರ್ವಕವಾಗಿ ತೊಂದರೆ ಕೊಟ್ಟರೆ ಮಾತ್ರ ಅದು ತಿರುಗಿ ಕಡಿಯುತ್ತದೆ. ಫ್ಲೋರಿಡಾದಲ್ಲಿ ಅತ್ಯಂತ ಸಾಮಾನ್ಯವಾಗಿ ಕಂಡುಬರುತ್ತದೆ. ಸುಮಾರು 18-26 ಇಂಚುಗಳಷ್ಟು ಉದ್ದ ಇರುತ್ತದೆ ಎಂದು ವಾಷಿಂಗ್ಟನ್ ಟೈಮ್ಸ್ ವರದಿ ಮಾಡಿದೆ.
ಇದನ್ನೂ ಓದಿ: Viral Video | ವಿಮಾನದಲ್ಲಿ ಪರಿಚಾರಕರ ಕೈ ಕಚ್ಚಿದ ಕುಡುಕ ಪೈಲಟ್; ತುರ್ತು ಲ್ಯಾಂಡ್ ಆದ ಫ್ಲೈಟ್