ಹಲ್ದವಾನಿ: ಹಿಮಾಲಯದ ಪೂರ್ವ ಕಾರಕೋರಮ್ ಪರ್ವತ ಶ್ರೇಣಿಯಲ್ಲಿರುವ ಸಿಯಾಚಿನ್ ನೀರ್ಗಲ್ಲು ಪ್ರದೇಶದಲ್ಲಿ 38 ವರ್ಷಗಳ ಹಿಂದೆ ನಾಪತ್ತೆಯಾಗಿ ಮೃತಪಟ್ಟಿದ್ದ ಲಾನ್ಸ್ ನಾಯಕ್ ಚಂದ್ರಶೇಖರ್ ಹರ್ಬೋಲಾ ಅವರ ಅಂತಿಮ ಸಂಸ್ಕಾರವನ್ನು ಬುಧವಾರ ಸಕಲ ಸೇನಾ ಗೌರವಗಳೊಂದಿಗೆ ನೆರವೇರಿಸಲಾಗಿದೆ.
ಉತ್ತರಾಖಂಡದ ಹಲ್ದವಾನಿಯಲ್ಲಿ ನಡೆದ ಅಂತಿಮ ಸಂಸ್ಕಾರದಲ್ಲಿ ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಮಿ, ಸೈನಿಕ ಕಲ್ಯಾಣ ಸಚಿವ ಗಣೇಶ್ ಜೋಷಿ, ಮಹಿಳಾ ಸಬಲೀಕರಣ ಖಾತೆ ಸಚಿವೆ ರೇಖಾ ಆರ್ಯ ಮತ್ತು ಲಾನ್ಸ್ ನಾಯಕ್ ಚಂದ್ರಶೇಖರ್ ಹರ್ಬೋಲಾ ಅವರ ಕುಟುಂಬದ ಸದಸ್ಯರು ಭಾಗವಹಿಸಿದ್ದರು.
ಲಾನ್ಸ್ ನಾಯಕ್ ಚಂದ್ರಶೇಖರ್ ಹರ್ಬೋಲಾ 19 ಕುಮಾವುಂ ರೆಜಿಮೆಂಟ್‌ಗೆ ಸೇರಿದ ಯೋಧರಾಗಿದ್ದು, 1984ರಲ್ಲಿ ಪಾಕಿಸ್ತಾನದ ವಿರುದ್ಧ ಹೋರಾಡಲು ಆಪರೇಷನ್ ಮೇಘದೂತ್‌ನ ಭಾಗವಾಗಿ ಅವರನ್ನು ವಿಶ್ವದ ಅತಿ ಎತ್ತರದ ಯುದ್ಧಭೂಮಿಯಾದ ಸಿಯಾಚಿನ್‌ಗೆ ಕಳುಹಿಸಲಾಗಿತ್ತು. ಲಾನ್ಸ್ ನಾಯಕ್ ಚಂದ್ರಶೇಖರ್ ಹರ್ಬೋಲಾ ಅವರಿದ್ದ ಸೇನಾ ತುಕುಡಿಯು ಹಿಮಪಾತಕ್ಕೆ ಸಿಲುಕಿತ್ತು. ಈ ಸಂದರ್ಭದಲ್ಲಿ 15 ಮಂದಿಯ ಮೃತದೇಹ ಪತ್ತೆಯಾಗಿತ್ತು. ಆದರೆ ಚಂದ್ರಶೇಖರ್ ಮೃತದೇಹ ಪತ್ತೆಯಾಗಿರಲಿಲ್ಲ. ಆಗಸ್ಟ್ 13 ರಂದು ಸಿಯಾಚಿನ್‌ನ ಹಳೆಯ ಬಂಕರೊಂದರಲ್ಲಿ ಅವರ ಮೃತದೇಹ ಪತ್ತೆಯಾಗಿದ್ದು, ಎಲ್ಲರಲ್ಲಿಯೂ ಆಶ್ಚರ್ಯ ಮೂಡಿಸಿತ್ತು.
ಸುಮಾರು ೫,೭೦೦ ಮೀಟರ್ ಎತ್ತರದ ಹಾಗೂ ೭೬ ಕಿಲೋಮೀಟರ್ ವ್ಯಾಪ್ತಿಯ ಪ್ರದೇಶದಲ್ಲಿ ಹರಡಿರುವ ರಾಶಿ ರಾಶಿ ಹಿಮವು ದೇಶದ ಯೋಧರ ಮೈ ಕೊರೆಯುತ್ತದೆ. ಇಲ್ಲಿ ಶತ್ರು ಸೈನ್ಯಕ್ಕಿಂತ ಹವಾಮಾನವೇ ಯೋಧರಿಗೆ ದೊಡ್ಡ ಶತ್ರುವಾಗಿದೆ.
ಸೈನಿಕ ಲಾನ್ಸ್ ನಾಯಕ್ ಚಂದ್ರಶೇಖರ್ ಹರ್ಬೋಲಾ ಅಂತಿಮ ಸಂಸ್ಕಾರದ ವೇಳೆ ಮಾತನಾಡಿದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಮಿ, ಅವರ ಬಲಿದಾನವನ್ನು ಸ್ಮರಿಸಿದರಲ್ಲದೆ, ರಾಜ್ಯದ ಜನತೆಯ ಮನದಾಳದಲ್ಲಿ ಅವರ ಹೆಸರು ಎಂದು ಅಚ್ಚಳಿಯದಂತೆ ಉಳಿಯಲಿದೆ ಎಂದರು. ಸೇನೆಯು ಅವರ ಮೇತದೇಹವನ್ನು ಮೆರವಣಿಗೆಯ ಮೂಲಕ ಅಂತಿಮ ಸಂಸ್ಕಾರ ನಡೆಯುವ ಜಾಗಕ್ಕೆ ತರುವ ವೇಳೆ ಸೇರಿದ್ದ ಸ್ಥಳೀಯರು ದೇಶಭಕ್ತಿಯ ಘೋಷಣೆಗಳನ್ನು ಕೂಗಿ, ಚಂದ್ರಶೇಖರ ಹರ್ಬೋಲಾ ಅವರಿಗೆ ಗೌರವ ಸಲ್ಲಿಸಿದರು.
ಸೈನಿಕ ಲಾನ್ಸ್ ನಾಯಕ್ ಚಂದ್ರಶೇಖರ ಹರ್ಬೋಲಾ ಅವರ ಪತ್ನಿ ಶಾಂತಿ ದೇವಿ ಅವರು ಹಲ್ದವಾನಿಯ ಸರಸ್ವತಿ ವಿಹಾರ್ ಕಾಲೋನಿಯಲ್ಲಿ ವಾಸವಿದ್ದಾರೆ. ಸೈನಿಕ ಲಾನ್ಸ್ ನಾಯಕ್ ಚಂದ್ರಶೇಖರ್ 1975ರಲ್ಲಿ ಸೇನೆ ಸೇರಿದ್ದರು.
ಇದನ್ನೂ ಓದಿ| ವಿಸ್ತಾರ Explainer | ಮೈನಸ್ 60 ಡಿಗ್ರಿ ಚಳಿಯಲ್ಲಿ ವಾಸ, 3 ತಿಂಗಳಿಗೊಮ್ಮೆ ಸ್ನಾನ: ಇದು ಸಿಯಾಚಿನ್ ಯೋಧರ ಸ್ಥಿತಿ!