ಬಿಜೆಪಿ ನಾಯಕಿ, ನಟಿ ಸೋನಾಲಿ ಫೋಗಟ್ ಗೋವಾದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಈಗ ಗೋವಾ ಪೊಲೀಸರು ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಕೊಲೆ ಕೇಸ್ ದಾಖಲಿಸಿ, ಎಫ್ಐಆರ್ ಹಾಕಿದ್ದಾರೆ. ಬಿಜೆಪಿ ನಾಯಕಿ ಸೋನಾಲಿ ಆಗಸ್ಟ್ 22ರ ರಾತ್ರಿ ಗೋವಾದಲ್ಲಿ ಮೃತಪಟ್ಟಿದ್ದರು. ತಮ್ಮ ಬಳಿ ಕೆಲಸ ಮಾಡುವ ಕೆಲವು ಸಿಬ್ಬಂದಿಯೊಂದಿಗೆ ಅಲ್ಲಿಗೆ ತೆರಳಿದ್ದ ಅವರು, ಕಾರ್ಯಕ್ರಮವೊಂದರಲ್ಲಿ ಕೂಡ ಪಾಲ್ಗೊಂಡಿದ್ದರು. ಸೋನಾಲಿ ಸಾವು ಸಹಜ ಎನ್ನಿಸುತ್ತಿಲ್ಲ. ಅವರು ಹೃದಯಾಘಾತದಿಂದ ಸತ್ತಿದ್ದಲ್ಲ ಎಂದು ಅವರ ಕುಟುಂಬದವರು ದೂರು ನೀಡಿದ್ದರು.
ಇಂದು ಸೋನಾಲಿ ಸಂಬಂಧಿ ಅಮಾನ್ ಪೂನಿಯಾ ಮಾಧ್ಯಮಗಳಿಗೆ ಹೇಳಿಕೆ ನೀಡಿ, ‘ಸೋನಾಲಿ ಫೋಗಟ್ದು ಸಹಜ ಸಾವಲ್ಲ. ಆಕೆಯನ್ನು ಹತ್ಯೆ ಮಾಡಲಾಗಿದೆ. ಇದರಲ್ಲಿ ಸೋನಾಲಿ ಬಾಡಿಗಾರ್ಡ್ ಸುಖ್ವಿಂದರ್ ಮತ್ತು ಆಪ್ತ ಸಹಾಯಕ ಸುಧೀರ್ ಕೈವಾಡವಿದೆ’ ಎಂದೂ ಹೇಳಿದ್ದರು. ಹಾಗೇ, ಸೋನಾಲಿ ಸಾಯುವುದಕ್ಕೂ ಮೊದಲು ಸ್ವಲ್ಪ ಹೊತ್ತಿನ ಮುಂಚೆ ನನ್ನ ಜತೆ ಫೋನ್ನಲ್ಲಿ ಮಾತನಾಡಿದ್ದಳು. ಆಕೆ ತುಂಬ ಕ್ಷೋಭೆಗೆ ಒಳಗಾದಂತೆ ಭಾಸವಾಗುತ್ತಿತ್ತು ಎಂದೂ ತಿಳಿಸಿದ್ದಾರೆ.
ಅಷ್ಟೇ ಅಲ್ಲ, ಸುಖ್ವಿಂದರ್ ಮತ್ತು ಸುಧೀರ್ ಸೇರಿ ಸೋನಾಲಿ ಫೋಗಟ್ಗೆ ಎಂಡಿ ಡ್ರಗ್ಸ್ ಕೊಟ್ಟಿದ್ದಾರೆ. ಆಕೆ ಮಿತಿಮೀರಿ ಡ್ರಗ್ಸ್ ಸೇವಿಸಿದ ಕಾರಣ ಅಸ್ವಸ್ಥಳಾಗಿದ್ದಳು. ಅಂಥ ಸ್ಥಿತಿಯಲ್ಲಿ ಸೋನಾಲಿಯನ್ನು ಮೂರು ತಾಸುಗಳ ಕಾಲ ವಾಶ್ ರೂಂನಲ್ಲಿ ಲಾಕ್ ಮಾಡಿಟ್ಟಿದ್ದರು. ಹೀಗೆ ಮಾಡುವ ಬದಲು ಆಕೆಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ಕೊಡಿಸಿದ್ದರೆ ಬದುಕುಳಿಯುತ್ತಿದ್ದಳು. ಸುಖ್ವಿಂದರ್ ಮತ್ತು ಸುಧೀರ್ ಇಬ್ಬರೂ ಸೋನಾಲಿ ಆಸ್ತಿಯ ಮೇಲೆ ಕಣ್ಣಿಟ್ಟಿದ್ದರು. ಅದನ್ನು ಕಬಳಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದರು. ಹಾಗಾಗಿಯೇ ಆಕೆಯನ್ನು ಕೊಂದಿದ್ದಾರೆ ಎಂದು ಅಮಾನ್ ಆರೋಪ ಮಾಡಿದ್ದಾರೆ.
ಪೋಸ್ಟ್ ಮಾರ್ಟಮ್ಗೆ ಒಪ್ಪಿರಲಿಲ್ಲ
ಸೋನಾಲಿ ಫೋಗಟ್ ಮೃತಪಟ್ಟ ಬಳಿಕ ಆಕೆಯ ಮೃತದೇಹವನ್ನು ಪೋಸ್ಟ್ ಮಾರ್ಟಮ್ಗೆ ಕಳಿಸಲು ಪೊಲೀಸರು ಸಿದ್ಧತೆ ನಡೆಸಿದ್ದರು. ಆದರೆ ಕುಟುಂಬದವರು ಒಪ್ಪಿರಲಿಲ್ಲ. ಆಕೆಯ ಸಾವು ಸಹಜವಲ್ಲ. ಹೀಗಾಗಿ ಪೋಸ್ಟ್ ಮಾರ್ಟಮ್ಗೆ ಅವಕಾಶ ಕೊಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಅಂತೂ ಇಂದು ಶವಪರೀಕ್ಷೆಗೆ ಮನೆಯವರು ಸಮ್ಮತಿ ನೀಡಿದ್ದಾರೆ. ಶವ ಪರೀಕ್ಷೆ ಬಳಿಕ ಆಕೆಯ ಮೃತದೇಹವನ್ನು ಪಣಜಿಯಿಂದ ಹರ್ಯಾಣಕ್ಕೆ ತೆಗೆದುಕೊಂಡುಹೋಗಲಾಗುವುದು ಎನ್ನಲಾಗಿದೆ.
ಇದನ್ನೂ ಓದಿ: Sonali Phogat | ಬಿಜೆಪಿ ನಾಯಕಿ, ನಟಿ ಸೋನಾಲಿ ಫೋಗಟ್ ಗೋವಾದಲ್ಲಿ ಸಾವು