Site icon Vistara News

ಬಿಜೆಪಿಯಿಂದ ಭಯದ ವಾತಾವರಣ ಸೃಷ್ಟಿ, ಕಾಂಗ್ರೆಸ್‌ ಚಿಂತನಾ ಶಿಬಿರದಲ್ಲಿ ಸೋನಿಯಾ

ಉದಯಪುರ: ಭಾರತೀಯ ಜನತಾ ಪಕ್ಷ ಮತ್ತು ಅದರ ಮಿತ್ರ ಪಕ್ಷಗಳು ದೇಶದಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿವೆ ಎಂದು ಕಾಂಗ್ರೆಸ್‌ ಹಂಗಾಮಿ ಅಧ್ಯಕ್ಷರಾದ ಸೋನಿಯಾ ಗಾಂಧಿ ಆಪಾದಿಸಿದ್ದಾರೆ. ರಾಜಸ್ಥಾನದ ಉದಯಪುರದಲ್ಲಿ ಶುಕ್ರವಾರ ಆರಂಭಗೊಂಡ ಕಾಂಗ್ರೆಸ್‌ ಪಕ್ಷದ ಮೂರು ದಿನಗಳ ನವ ಸಂಕಲ್ಪ ಚಿಂತನಾ ಶಿಬಿರದಲ್ಲಿ ಅವರು ಮಾತನಾಡಿದರು.

ಬಿಜೆಪಿ ಮತ್ತು ಮಿತ್ರ ಪಕ್ಷಗಳು `ಗರಿಷ್ಠ ಆಡಳಿತ ಕನಿಷ್ಠ ಸರಕಾರ’ ಎಂಬ ಘೋಷಣೆ ಮಾಡಿವೆ. ಇದರ ನಿಜವಾದ ಅರ್ಥ ದೇಶವನ್ನು ಕಾಯಂ ಆಗಿ ಒಂದು ಕಡೆ ಧ್ರುವೀಕರಣ ಮಾಡುವುದು. ಈ ಧ್ರುವೀಕರಣ ರಾಜಕೀಯದಿಂದಾಗಿ ದೇಶದ ಜನ ಭಯ ಮತ್ತು ಅಸುರಕ್ಷತೆಯ ಆತಂಕದಲ್ಲೇ ಬದುಕುವಂತಾಗಿದೆ. ಅದರಲ್ಲೂ ಅಲ್ಪಸಂಖ್ಯಾತರನ್ನು ನಿರಂತರವಾಗಿ ಟಾರ್ಗೆಟ್‌ ಮಾಡಲಾಗುತ್ತಿದೆ, ಅವರನ್ನು ಬಲಿಪಶುಗಳನ್ನಾಗಿ ಮಾಡಲಾಗುತ್ತಿದೆ. ಅಭದ್ರತೆಯ ಭಾವನೆ ಸೃಷ್ಟಿಸಲಾಗಿದೆ. ನಮ್ಮ ಪ್ರಜಾಪ್ರಭುತ್ವ ದೇಶದ ಸಮಾನ ನಾಗರಿಕರಾದ, ನಮ್ಮ ಸಮಾಜದ ಅವಿಭಾಜ್ಯ ಅಂಗವಾದ ಅವರನ್ನು ಭಯಭೀತಗೊಳಿಸಲಾಗುತ್ತಿದೆ ಎಂದು ಹೇಳಿದರು ಸೋನಿಯಾ.

ಅನೇಕತೆಯಲ್ಲಿ ಏಕತೆ ಎಂಬ ಸುಂದರ ಹೆಣಿಗೆಯಲ್ಲಿ ರೂಪುಗೊಂಡಿರುವ ಭಾರತೀಯ ಸಮಾಜದ ಪರಿಕಲ್ಪನೆಯನ್ನೇ ಬುಡಮೇಲು ಮಾಡಲಾಗುತ್ತಿದೆ. ಬಹುತ್ವವನ್ನು ಮುರಿದು ನಮ್ಮ ನಡುವೆ ವಿಭಜನೆಯ ಪ್ರಯೋಗ ಮಾಡಲಾಗುತ್ತಿದೆ. ರಾಜಕೀಯ ವಿರೋಧಿಗಳಿಗೆ ಬೆದರಿಕೆ ಒಡ್ಡಲಾಗುತ್ತಿದೆ, ಅವರ ಗೌರವಕ್ಕೆ ಮಸಿ ಬಳಿಯಲಾಗುತ್ತಿದೆ, ಯಾವುದೋ ಸಣ್ಣ ಸಣ್ಣ ಕಾರಣಗಳನ್ನು ನೀಡಿ, ತನಿಖಾ ಏಜೆನ್ಸಿಗಳನ್ನು ದುರ್ಬಳಕೆ ಮಾಡಿಕೊಂಡು ನಾಯಕರನ್ನು ಜೈಲಿಗೂ ಕಳುಹಿಸಲಾಗುತ್ತಿದೆ ಎಂದು ಸೋನಿಯಾ ಆರೋಪಿಸಿದರು.

ಈಗ ಪಕ್ಷಕ್ಕೆ ಮರುಪಾವತಿಸುವ ಕಾಲ

ಪಕ್ಷವನ್ನು ಒಗ್ಗಟ್ಟಾಗಿ ಉಳಿಸಿಕೊಳ್ಳುವ ಅನಿವಾರ್ಯತೆಯನ್ನು ಪ್ರತಿಪಾದಿಸಿರುವ ಸೋನಿಯಾ ಗಾಂಧಿ, ಕಾಂಗ್ರೆಸ್‌ ಪಕ್ಷ ನಮಗೆ ಸಾಕಷ್ಟು ಸ್ಥಾನಮಾನಗಳನ್ನು, ಗೌರವವನ್ನು ಕೊಟ್ಟಿದೆ. ಈಗ ಮರುಪಾವತಿಸುವ ಕಾಲ ಎಂದು ಹೇಳಿದರು. ನಾವು ನಮ್ಮ ಮಹತ್ವಾಕಾಂಕ್ಷೆಗಳಿಗಿಂತಲೂ ಪಕ್ಷದ ಒಳಿತು ಮುಖ್ಯ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಚಿಂತನಾ ಶಿಬಿರದಲ್ಲಿ ಎಲ್ಲರೂ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹೇಳುವಂತೆ ವಿನಂತಿಸಿದ ಸೋನಿಯಾ, ಅದರ ಜತೆಗೇ ಅಂತಿಮವಾಗಿ ಒಗ್ಗಟ್ಟಿನ ಪ್ರಬಲ ಸಂದೇಶವೊಂದು ದೇಶಕ್ಕೆ ಹೋಗಬೇಕು ಎಂದಿದ್ದಾರೆ.’

ಕಾರ್ಯ ವಿಧಾನ ಬದಲಾಗಲಿ
ಕಾಂಗ್ರೆಸ್‌ ಪಕ್ಷದಲ್ಲಿ ಸಾಕಷ್ಟು ಬದಲಾವಣೆಗಳು ಆಗಬೇಕಾಗಿದೆ. ಇದು ಕಾಲದ ಅಗತ್ಯ. ನಾವು ಕೆಲಸ ಮಾಡುವ ರೀತಿ ಬದಲಾಗಬೇಕಾಗಿದೆ ಎಂದು ಹೇಳಿದರು. ರಾಷ್ಟ್ರೀಯ ವಿಷಯಗಳಿಗೆ ಸಂಬಂಧಿಸಿ ಪಕ್ಷ ನಿಲುವಿನ ಆತ್ಮಶೋಧನೆ ನಡೆಯಬೇಕು ಎಂದರು. ಇದರ ಜತೆಗೆ ಪಕ್ಷದೊಳಗೂ ಆತ್ಮಚಿಂತನೆಯ ಅಗತ್ಯವನ್ನು ಪ್ರತಿಪಾದಿಸಿದರು.

ಮೂರು ದಿನಗಳ ಶಿಬಿರ

ರಾಜಸ್ಥಾನದ ಉದಯಪುರದಲ್ಲಿ ಮೂರು ದಿನಗಳ ಕಾಲ ನಡೆಯುವ ಈ ಚಿಂತನಾ ಶಿಬಿರದಲ್ಲಿ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಕಾಂಗ್ರೆಸ್‌ನ 400ಕ್ಕೂ ಅಧಿಕ ಮಂದಿ ಭಾಗವಹಿಸಿದ್ದಾರೆ. ಪಂಚ ರಾಜ್ಯ ಚುನಾವಣೆಯಲ್ಲಿ ಭಾರಿ ಹಿನ್ನಡೆ ಕಂಡ ಹಿನ್ನೆಲೆಯಲ್ಲಿ ನಡೆಯುತ್ತಿರುವ ಈ ಆತ್ಮಚಿಂತನೆಯ ವೇಳೆ ದೊಡ್ಡ ಬದಲಾವಣೆಗೆ ನಡೆಯುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್‌ ನಾಯಕ ಅಜಯ್‌ ಮಾಕೆನ್‌ ಹೇಳಿದ್ದರು.

ಟಿಕೆಟ್‌ ನೀಡುವಲ್ಲಿನ ಗರಿಷ್ಠ ವಯೋಮಿತಿಯ ಚರ್ಚೆ ನಡೆಯುವ ಸಾಧ್ಯತೆ ಇದೆ. ಜತೆಗೆ ಒಂದು ಕುಟುಂಬಕ್ಕೆ ಒಂದೇ ಟಿಕೆಟ್‌ ಎಂಬ ನೀತಿಯೂ ಜಾರಿಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ, ಅದರಿಂದ ಗಾಂಧಿ ಕುಟುಂಬಕ್ಕೆ ವಿನಾಯಿತಿ ನೀಡುವ ಚರ್ಚೆಯೂ ನಡೆದಿದೆ. ಯಾರೇ ಆಗಲಿ ಒಂದು ಹುದ್ದೆಯಲ್ಲಿ ಐದು ವರ್ಷ ಮಾತ್ರ ಇರಬೇಕು ಎನ್ನುವ ನಿಯಮದ ಚರ್ಚೆಯೂ ನಡೆಯಲಿದೆ.

Exit mobile version