ನವ ದೆಹಲಿ: ಗಾಂಧಿ ಕುಟುಂಬದವರನ್ನು ಹೊರತು ಪಡಿಸಿ, ಬೇರೆ ಯಾರಾದರೂ ಕಾಂಗ್ರೆಸ್ ಅಧ್ಯಕ್ಷರಾಗಬೇಕು ಎಂಬ ಗಟ್ಟಿ ಅಭಿಪ್ರಾಯ ವ್ಯಕ್ತಪಡಿಸುತ್ತಲೇ ಬಂದಿದ್ದ ಶಶಿ ತರೂರ್ ಇದೀಗ ಅಧ್ಯಕ್ಷ ಸ್ಥಾನದ ಆಯ್ಕೆ ಚುನಾವಣೆಯಲ್ಲಿ ತಾವೇ ಸ್ವತಃ ಅಭ್ಯರ್ಥಿ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ, ತಾವು ಸ್ಪರ್ಧಿಸಲು ಸೋನಿಯಾ ಗಾಂಧಿ ಒಪ್ಪಿಗೆಯನ್ನೂ ನೀಡಿದ್ದಾರೆ ಎಂದಿದ್ದಾರೆ. ಸೋನಿಯಾ ಗಾಂಧಿ ಚಿಕಿತ್ಸೆಗೆಂದು ವಿದೇಶಕ್ಕೆ ಹೋಗಿದ್ದರು. ಅಲ್ಲಿಂದ ವಾಪಸ್ ಬಂದ ಅವರನ್ನು ಶಶಿ ತರೂರ್ ದೆಹಲಿಯಲ್ಲಿ ಸೋಮವಾರ ಭೇಟಿಯಾಗಿದ್ದರು. ಈ ವೇಳೆ ಸೋನಿಯಾ ಗಾಂಧಿ ‘ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಾನು ಯಾರ ಹೆಸರನ್ನೂ ಶಿಫಾರಸ್ಸು ಮಾಡುವುದಿಲ್ಲ. ‘ನೀವೇ ಆಗಿ’ ಎಂದು ಯಾರಿಗೂ ಹೇಳುವುದಿಲ್ಲ. ಈ ವಿಚಾರದಲ್ಲಿ ನನ್ನದು ತಟಸ್ಥ ನಿಲುವು’ ಎಂದು ಶಶಿ ತರೂರ್ಗೆ ಹೇಳಿದ್ದಾರೆ ಎಂದು ಕಾಂಗ್ರೆಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಅಕ್ಟೋಬರ್ 17ರಂದು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಸೆಪ್ಟೆಂಬರ್ 24ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಲಿದೆ. ಸದ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಶಶಿ ತರೂರ್ ಮತ್ತು ಅಶೋಲ್ ಗೆಹ್ಲೋಟ್ ಹೆಸರು ಕೇಳಿಬರುತ್ತಿದೆ. ಹಾಗೇ, ರಾಹುಲ್ ಗಾಂಧಿ ಸ್ಪರ್ಧಿಸುವುದೇ ಇಲ್ಲ ಎಂದು ಹೇಳುವ ಸ್ಥಿತಿಯೂ ಅಲ್ಲಿಲ್ಲ. ಯಾರೇ ಬೇಕಾದರೂ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸ್ಲಲಿಸಬಹುದು. ಅದಕ್ಕೆ ಯಾರ ಅಪ್ಪಣೆ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ಹಿರಿಯ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ. ಹಾಗೇ, ‘ನೀವು ಸ್ಪರ್ಧಿಸಿ ಎಂದು ನಾನು ಯಾರಿಗೂ ಹೇಳುವುದಿಲ್ಲ’ ಎಂದು ಸೋನಿಯಾ ಗಾಂಧಿಯೂ ಸ್ಪಷ್ಟಪಡಿಸಿದ್ದಾರೆ.
ಅಂದಹಾಗೇ, ಶಶಿ ತರೂರ್ ತಾವು ಚುನಾವಣೆಯಲ್ಲಿ ಸ್ಪರ್ಧಿಸಲು ಅನುಮತಿ ಕೊಡಿ ಎಂದು ಕೇಳಲು ಸೋನಿಯಾ ಗಾಂಧಿಯನ್ನು ಭೇಟಿಯಾಗಿರಲಿಲ್ಲ. ಬದಲಾಗಿ ಅಕ್ಟೋಬರ್ 17ರಂದು ನಡೆಯಲಿರುವ ಚುನಾವಣೆ ಪಾರದರ್ಶಕವಾಗಿ, ನ್ಯಾಯ ಸಮ್ಮತವಾಗಿ ಇರಲಿ ಎಂಬ ಸಲಹೆಯನ್ನು ಮನವಿ ರೂಪದಲ್ಲಿ ನೀಡಲಷ್ಟೇ ಅವರು ಸೋನಿಯಾ ಗಾಂಧಿಯನ್ನು ಭೇಟಿಯಾಗಿದ್ದರು. ಇದೇ ವೇಳೆ ಶಶಿ ತರೂರ್ ಸ್ಪರ್ಧೆ ಬಗ್ಗೆಯೂ ಮಾತುಕತೆ ನಡೆದಿದೆ. ‘ನಾನೂ ಸ್ಪರ್ಧಿಸುತ್ತೇನೆ’ ಎಂದು ತರೂರ್ ಹೇಳಿದ್ದಕ್ಕೆ, ‘ಖಂಡಿತ ಸ್ಪರ್ಧಿಸಿ. ಎಲ್ಲರಿಗೂ ಮುಕ್ತ ಅವಕಾಶವಿದೆ’ ಎಂದು ಸೋನಿಯಾ ಹೇಳುವ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.
ಶಶಿ ತರೂರ್ ಅವರು ಸೋನಿಯಾ ಗಾಂಧಿಯನ್ನು ಭೇಟಿಯಾದ ವೇಳೆ ಅವರೊಂದಿಗೆ ಹಿರಿಯ ನಾಯಕರಾದ ದೀಪೇಂದರ್ ಹೂಡಾ, ಜೈಪ್ರಕಾಶ್ ಅಗರ್ವಾಲ್, ವಿಜೇಂದ್ರ ಸಿಂಗ್ ಕೂಡ ಇದ್ದರು. ಸೋನಿಯಾ ಗಾಂಧಿ ಜತೆಗಿನ ಮೀಟಿಂಗ್ನಲ್ಲಿ ಏನೆಲ್ಲ ಆಯಿತು ಎಂಬುದರ ಸಂಪೂರ್ಣ ಮಾಹಿತಿ ಲಭ್ಯವಾಗಿಲ್ಲ.
ಇದನ್ನೂ ಓದಿ: Cong Prez Poll | ಯಾರ ಅಪ್ಪಣೆ ಯಾಕೆ?- ಶಶಿ ತರೂರ್ ಹೆಸರು ಮುನ್ನೆಲೆಗೆ ಬರುತ್ತಿದ್ದಂತೆ ಜೈರಾಮ್ ರಮೇಶ್ ಟ್ವೀಟ್