ನವದೆಹಲಿ: ಕಾಂಗ್ರೆಸ್ ನಾಯಕಿ, ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ (76) (Sonia Gandhi) ಅವರ ಆರೋಗ್ಯದಲ್ಲಿ ದಿಢೀರ್ ಏರುಪೇರಾಗಿದ್ದು, ದೆಹಲಿಯಲ್ಲಿರುವ ಸರ್ ಗಂಗಾರಾಮ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಲಘು ಜ್ವರ ಕಾಣಿಸಿಕೊಂಡಿದ್ದು, ಸ್ವಲ್ಪ ಎದೆ ನೋವು ಕೂಡ ಇದ್ದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಕೂಲಂಕಷ ತಪಾಸಣೆ ಮಾಡಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
ಆಗಸ್ಟ್ 31 ಹಾಗೂ ಸೆಪ್ಟೆಂಬರ್ 1ರಂದು ಮುಂಬೈನಲ್ಲಿ ನಡೆದ ಪ್ರತಿಪಕ್ಷಗಳ ಒಕ್ಕೂಟವಾದ ಇಂಡಿಯಾ ಸಭೆಯಲ್ಲಿ ಸೋನಿಯಾ ಗಾಂಧಿ ಪಾಲ್ಗೊಂಡಿದ್ದರು. ಇದಾದ ಬಳಿಕ ಅವರು ಜಮ್ಮು-ಕಾಶ್ಮೀರ ಪ್ರವಾಸ ಕೈಗೊಂಡಿದ್ದರು. ಕಾಶ್ಮೀರ ಪ್ರವಾಸ ಮುಗಿಸಿಕೊಂಡು ದೆಹಲಿಗೆ ಬರುತ್ತಲೇ ಅವರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಸರ್ ಗಂಗಾರಾಮ್ ಆಸ್ಪತ್ರೆಯಲ್ಲಿ ವೈದ್ಯರು ತಪಾಸಣೆ ಮಾಡಿದ ವೈದ್ಯರು ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿದ್ದಾರೆ. ಆದಾಗ್ಯೂ, ಅವರನ್ನು ನಿಗಾದಲ್ಲಿ ಇರಿಸಲಾಗಿದೆ ಎಂದು ತಿಳಿದುಬಂದಿದೆ. ಪ್ರಸಕ್ತ ವರ್ಷದಲ್ಲಿಯೇ ಸೋನಿಯಾ ಗಾಂಧಿ ಅವರು ಮೂರನೇ ಬಾರಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇದನ್ನೂ ಓದಿ: Narendra Modi: ಅಧಿವೇಶನಕ್ಕೂ ಮೊದಲು ಸೋನಿಯಾ ಗಾಂಧಿ ಬಳಿ ತೆರಳಿ ಆರೋಗ್ಯ ವಿಚಾರಿಸಿದ ಮೋದಿ
ವೈರಲ್ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಅವರು 2023ರ ಜನವರಿ 12ರಂದು ಸರ್ ಗಂಗಾರಾಮ್ ಆಸ್ಪತ್ರೆಗೆ ದಾಖಲಾಗಿದ್ದರು. ಜನವರಿ 17ರಂದು ಅವರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆಗಿದ್ದರು. ಮತ್ತೆ ಜ್ವರ ಕಾಣಿಸಿಕೊಂಡ ಕಾರಣ ಮಾರ್ಚ್ 2ರಂದು ಅವರು ಆಸ್ಪತ್ರೆಗೆ ದಾಖಲಾಗಿದ್ದರು.