ನವ ದೆಹಲಿ: ಗುಜರಾತ್ ಗಲಭೆ ನಡೆದ ಬಳಿಕ ಅಂದಿನ ಗುಜರಾತ್ ಸರ್ಕಾರವನ್ನು ಪತನಗೊಳಿಸಲು ತೀಸ್ತಾ ಸೆಟಲ್ವಾಡ್ ಪ್ರಯತ್ನಿಸಿದ್ದರು. ಅದಕ್ಕೆ ಹಲವು ಪಿತೂರಿಗಳನ್ನು ನಡೆಸಿದ್ದರು. ಅದೆಲ್ಲವೂ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಆಣತಿಯ ಮೇರೆಗೆ ನಡೆದಿತ್ತು ಎಂಬ ವರದಿಯನ್ನು ಇಂದು ಎಸ್‌ಐಟಿ, ಸೆಷನ್ಸ್ ಕೋರ್ಟ್ ಎದುರು ನೀಡಿದೆ. ಇದೊಂದು ಅಫಿಡಿವಿಟ್ ಈಗ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜಟಾಪಟಿಗೆ ಕಾರಣವಾಗಿದೆ. ʼಪ್ರಧಾನಿ ನರೇಂದ್ರ ಮೋದಿ ದ್ವೇಷದ ರಾಜಕಾರಣಕ್ಕೆ ಇದು ಕೈಗನ್ನಡಿ. ಅವರು ತಮ್ಮ ಲಾಭಕ್ಕಾಗಿ ಈ ಭೂಮಿ ಮೇಲೆ ಇಲ್ಲದವರ ಹೆಸರನ್ನೂ ಬಳಸಿಕೊಳ್ಳುತ್ತಿದ್ದಾರೆʼ ಎಂದು ಕಾಂಗ್ರೆಸ್ ಕಿಡಿಕಾರಿದೆ. ಅದರ ಬೆನ್ನಲ್ಲೇ ಬಿಜೆಪಿ ಪ್ರತಿಕ್ರಿಯೆ ನೀಡಿದೆ. ಅಷ್ಟೇ ಅಲ್ಲ, ಈ ವಿವಾದಕ್ಕೆ ಸೋನಿಯಾ ಗಾಂಧಿಯವರ ಹೆಸರನ್ನೂ ಎಳೆದು ತಂದು, ಉರಿಯುವ ಬೆಂಕಿಗೆ ತುಪ್ಪ ಸುರಿದಿದೆ.
ಇಂದು ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ವಕ್ತಾರ ಸಂಭಿತ್ ಪಾತ್ರಾ, ʼ2002ರ ಗಲಭೆಯನ್ನೇ ಆಧಾರವಾಗಿಟ್ಟುಕೊಂಡು, ಅಂದು ಗುಜರಾತ್‌ನಲ್ಲಿ ಆಡಳಿತದಲ್ಲಿದ್ದ ಬಿಜೆಪಿ ಸರ್ಕಾರವನ್ನು ಪತನಗೊಳಿಸಲು ಕಾಂಗ್ರೆಸ್ಸಿಗರು ಪ್ರಯತ್ನ ಮಾಡಿದ್ದರು. ಅದರಲ್ಲಿ ಅಹ್ಮದ್ ಪಟೇಲ್ ಹೆಸರು ಬಹಿರಂಗವಾಗಿದೆ. ಆದರೆ ಈ ಇಡೀ ಸಂಚಿನ ಶಿಲ್ಪಿ, ಮುಖ್ಯ ಬಾಸ್ ಸೋನಿಯಾ ಗಾಂಧಿ. ಇವರು ತಮ್ಮ ರಾಜಕೀಯ ಸಲಹೆಗಾರರಾಗಿದ್ದ ಅಹ್ಮದ್ ಪಟೇಲ್ ಮೂಲಕ ಗುಜರಾತ್‌ನ ಪ್ರತಿಷ್ಠೆಯನ್ನು ಹರಾಜು ಹಾಕಲು ಯತ್ನಿಸಿದ್ದರು. ಅಂದಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರ ಘನತೆಗೆ ಕುತ್ತು ತರಲು ಇನ್ನಿಲ್ಲದ ಪ್ರಯತ್ನ ಮಾಡಿದ್ದರುʼ ಎಂದು ತಿಳಿಸಿದ್ದಾರೆ.
ಅಷ್ಟೇ ಅಲ್ಲ, ಇದೇ ವಿಷಯವಾಗಿ ಟ್ವೀಟ್ ಮಾಡಿರುವ ಸಂಭಿತ್ ಪಾತ್ರಾ, ʼಅಂದು ಗುಜರಾತ್ ಸರ್ಕಾರವನ್ನು ಅಸ್ಥಿರಗೊಳಿಸಲು ತೀಸ್ತಾ ಸೆಟಲ್ವಾಡ್ ಏನೇ ಪ್ರಯತ್ನ-ಪಿತೂರಿ ಮಾಡಿದ್ದರೂ ಅವೆಲ್ಲವೂ ಕಾಂಗ್ರೆಸ್‌ನ ಇಚ್ಛೆಯ ಮೇರೆಗೆ ಆಗಿದ್ದು. ಕಾಂಗ್ರೆಸ್ ತನ್ನ ರಾಜಕೀಯ ಉದ್ದೇಶಕ್ಕಾಗಿ ನರೇಂದ್ರ ಮೋದಿಯನ್ನು ಗಲಭೆ ಪ್ರಕರಣದಲ್ಲಿ ಆರೋಪಿಯೆಂದು ಸಾಬೀತುಪಡಿಸಲು ಹವಣಿಸುತ್ತಿತ್ತು. ಅದಕ್ಕಾಗಿ ತೀಸ್ತಾಗೆ ಎಲ್ಲ ರೀತಿಯ ಸಹಕಾರ ನೀಡಿದೆ. ಅದಕ್ಕಾಗಿ 30ಲಕ್ಷ ರೂಪಾಯಿಯನ್ನು ಆಕೆಗೆ ಪಾವತಿಸಿತ್ತು. ಹಣ ಮತ್ತು ಅಧಿಕಾರದ ಆಮಿಷ ಒಡ್ಡಿತ್ತು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಗುಜರಾತ್ ಗಲಭೆ: ತೀಸ್ತಾ ಸೆಟಲ್ವಾಡ್ ಪಿತೂರಿಗೆ ಬೆಂಬಲಿಸಿದ್ದು ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ !