Site icon Vistara News

ಸೋನಿಯಾ ಗಾಂಧಿ ಇ ಡಿ ವಿಚಾರಣೆ ಮುಕ್ತಾಯ; ಜು.25ಕ್ಕೆ ಮತ್ತೆ ಹಾಜರಾಗಲು ಸೂಚನೆ

Sonia Gandhi ED Office

ನವ ದೆಹಲಿ: ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಇಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ೨ ತಾಸುಗಳ ಕಾಲ ವಿಚಾರಣೆಗೆ ಒಳಪಡಿಸಿದ್ದಾರೆ. ಮಧ್ಯಾಹ್ನ 12ಗಂಟೆಯಿಂದ ವಿಚಾರಣೆ ಪ್ರಾರಂಭವಾಗಿತ್ತು. ಸೋನಿಯಾ ಗಾಂಧಿ ಆರೋಗ್ಯ ಸ್ಥಿತಿಯನ್ನು ಪರಿಗಣಿಸಿ ಕಡಿಮೆ ಅವಧಿಯ ವಿಚಾರಣೆ ನಡೆಸಲಾಗಿದೆ. ಜುಲೈ 25ಕ್ಕೆ ಮತ್ತೆ ಹಾಜರಾಗುವಂತೆ ಅವರಿಗೆ ಇ.ಡಿ. ಅಧಿಕಾರಿಗಳು ಸೂಚಿಸಿದ್ದಾರೆ. ಸೋನಿಯಾ ಗಾಂಧಿ ತಮ್ಮ ಪುತ್ರಿ ಪ್ರಿಯಾಂಕಾ ಗಾಂಧಿಯವರೊಂದಿಗೆ ಇ.ಡಿ.ಕಚೇರಿಯಿಂದ ತೆರಳಿದ್ದಾರೆ.

ಕಾಂಗ್ರೆಸ್‌ ಪ್ರತಿಭಟನೆ, ಹಿರಿಯ ನಾಯಕರ ಬಂಧನ
ಇಂದು ಇಡಿ ಕಚೇರಿಯಲ್ಲಿ ಕಾಂಗ್ರೆಸ್‌ ಮುಖ್ಯಸ್ಥೆ ಸೋನಿಯಾ ಗಾಂಧಿ ವಿಚಾರಣೆ ನಡೆಯುತ್ತಿದ್ದರೆ, ಇನ್ನೊಂದೆಡೆ ದೇಶಾದ್ಯಂತ ಕಾಂಗ್ರೆಸ್‌ ಕಾರ್ಯಕರ್ತರು, ಪ್ರಮುಖರ ಪ್ರತಿಭಟನೆಯೂ ತೀವ್ರಗೊಂಡಿತ್ತು. ದೆಹಲಿಯ ಎಐಸಿಸಿ ಪ್ರಧಾನ ಕಚೇರಿ, ಸಂಸತ್ತು, ರಾಜಭವನ, ಇಡಿ ಕಚೇರಿ ಹೊರಭಾಗದಲ್ಲೆಲ್ಲ ಕಾಂಗ್ರೆಸ್ಸಿಗರ ಪ್ರತಿಭಟನೆ ಮಿತಿಮೀರಿತ್ತು. ಕಾಂಗ್ರೆಸ್‌ ಹಿರಿಯ ನಾಯಕರಾದ ಶಶಿ ತರೂರ್‌, ಸಚಿನ್‌ ಪೈಲಟ್‌, ಪವಾರ್‌ ಖೇರಾ, ಪಿ.ಚಿದಂಬರಂ, ಅಜಯ್‌ ಮಾಕೆನ್‌ ಸೇರಿ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಂಚಾರ ಅಸ್ತವ್ಯಸ್ತ
ದೆಹಲಿಯ ಬಹುತೇಕ ರಸ್ತೆಗಳಲ್ಲೆಲ್ಲ ಇಂದು ಕಾಂಗ್ರೆಸ್ಸಿಗರು ಪ್ರತಿಭಟನೆಗೆ ಇಳಿದಿದ್ದಾರೆ. ಪೊಲೀಸರು ಹಾಕಿದ ಬ್ಯಾರಿಕೇಡ್‌ಗಳನ್ನೂ ದಾಟಿ ಇ.ಡಿ.ಕಚೇರಿಗೆ ನುಗ್ಗಲು ಅವರು ಪ್ರಯತ್ನಿಸಿದರು. ಈ ವೇಳೆ ಅವರನ್ನು ನಿಯಂತ್ರಿಸಲು ಪೊಲೀಸರು ಜಲ ಫಿರಂಗಿ ಪ್ರಯೋಗವನ್ನೂ ಮಾಡಬೇಕಾಯಿತು. ದೆಹಲಿಯ ಶಿವಾಜಿ ಬ್ರಿಜ್‌ನ ರೈಲ್ವೆ ಸ್ಟೇಶನ್‌ ಬಳಿ ರೈಲ್ವೆ ಹಳಿಯ ಮೇಲೆ ಪ್ರತಿಭಟನೆ ನಡೆಸಿ, ರೈಲು ಸಂಚಾರಕ್ಕೆ ಅಡ್ಡಿಯಾಗಿದ್ದಾರೆ. ಇದರಿಂದಾಗಿ ಮೂರು ರೈಲುಗಳು ಇಂದು ಸಂಚಾರ ಮಾಡಲಿಲ್ಲ.

ಬರೀ ದೆಹಲಿಯಲ್ಲಷ್ಟೇ ಅಲ್ಲದೆ, ದೇಶದ ವಿವಿಧ ಭಾಗಗಳಲ್ಲಿ ಕಾಂಗ್ರೆಸ್‌ ಪ್ರತಿಭಟನೆ ಇಂದು ನಡೆದಿದೆ. ಉತ್ತರಾಖಂಡ್‌ನಲ್ಲಿ ಇ.ಡಿ. ಕಚೇರಿ ಹೊರಭಾಗದಲ್ಲಿ ತೀವ್ರ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಕರಣ್‌ ಮಹ್ರಾ, ಕಾಂಗ್ರೆಸ್‌ ನಾಯಕರಾದ ಯಶಪಾಲ್‌ ಆರ್ಯಾ, ಭುವನ್‌ ಕಪ್ರಿ ಮತ್ತಿತರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನಲ್ಲಿ ಎರಡು ಕಡೆ ಕಾರುಗಳಿಗೆ ಬೆಂಕಿ ಹಚ್ಚಿದ್ದಾರೆ. ಶಿಮ್ಲಾ ಸೇರಿ ಹಲವು ಕಡೆಗಳಲ್ಲಿ ಕೈ ನಾಯಕರ ಹೋರಾಟ ನಡೆದಿದೆ.

ಇದನ್ನೂ ಓದಿ: ದೆಹಲಿಯಲ್ಲಿ ಇ.ಡಿ. ವಿಚಾರಣೆ ವಿರೋಧಿಸಿ ಬೆಂಗಳೂರಿನಲ್ಲಿ ಕಾಂಗ್ರೆಸ್‌ ಪ್ರತಿಭಟನೆ

Exit mobile version