Site icon Vistara News

ಮಲ್ಲಿಕಾರ್ಜುನ ಖರ್ಗೆಗೆ ತಮ್ಮ ನಿವಾಸದಲ್ಲಿ ಭೇಟಿಗೆ ಅವಕಾಶ ಕೊಡದ ಸೋನಿಯಾ ಗಾಂಧಿ; ಶಿಷ್ಟಾಚಾರ ಪಾಲಿಸಿದ ಮಾಜಿ ಅಧ್ಯಕ್ಷೆ

ನವ ದೆಹಲಿ: ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ‌ ಆಯ್ಕೆಯಾಗುತ್ತಿದ್ದಂತೆ ಮಲ್ಲಿಕಾರ್ಜುನ ಖರ್ಗೆ ಮೊಟ್ಟಮೊದಲು ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿದ್ದಾರೆ. ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರು ಮಲ್ಲಿಕಾರ್ಜುನ ಖರ್ಗೆ ದೆಹಲಿ ನಿವಾಸಕ್ಕೆ ಆಗಮಿಸಿ ಅವರಿಗೆ ಶುಭಾಶಯ ಕೋರಿದರು. ಆದರೆ ಅದಕ್ಕೂ ಮೊದಲು ಖರ್ಗೆಯವರು ಸೋನಿಯಾ ಗಾಂಧಿಯವರನ್ನು ಅವರ ಮನೆಯಲ್ಲೇ ಭೇಟಿಯಾಗಲು ಅವಕಾಶ ಕೇಳಿದ್ದರಂತೆ. ಆದರೆ ಸೋನಿಯಾ ಗಾಂಧಿ ಒಪ್ಪಿಗೆ ಸಿಕ್ಕಿರಲಿಲ್ಲವಂತೆ..

ಜನಪಥ ಮಾರ್ಗ್ ನಲ್ಲಿರುವ ಸೋನಿಯಾ ಗಾಂಧಿ ನಿವಾಸಕ್ಕೇ ತೆರಳಿ ಅವರನ್ನು ಭೇಟಿ ಮಾಡುವುದು ಖರ್ಗೆ ಇಂಗಿತವಾಗಿತ್ತು. ಅದಕ್ಕಾಗಿ ಅಪಾಯಿಂಟ್ ಮೆಂಟ್ ಕೂಡ ಕೇಳಿದ್ದರು. ಆದರೆ ತಾಸುಗಳಾದರೂ ಖರ್ಗೆಗೆ ಅನುಮತಿ ಸಿಕ್ಕಿರಲಿಲ್ಲ. ಕಾರಣ ಇತ್ತ ಸೋನಿಯಾ ಗಾಂಧಿ ಬೇರೆಯದ್ದೇ ಪ್ಲ್ಯಾನ್ ಮಾಡುತ್ತಿದ್ದರು. ಖರ್ಗೆಯವರನ್ನು ಭೇಟಿಯಾಗಬಹುದಾದ ಸ್ಥಳದ ಬಗ್ಗೆ ಕೆಲವು ನಾಯಕರ ಬಳಿ ಸುಮಾರು 30 ನಿಮಿಷ ಚರ್ಚಿಸಿದ ನಂತರ ಸೋನಿಯಾ ಗಾಂಧಿಯೇ ಖುದ್ದು ಖರ್ಗೆ ನಿವಾಸಕ್ಕೆ, ಹೂವಿನ ಬೊಕ್ಕೆ ಹಿಡಿದು ಹೊರಟಿದ್ದರು. ಎಐಸಿಸಿ ಅಧ್ಯಕ್ಷರನ್ನು ತಮ್ಮ ಮನೆಗೆ ಕರೆಸಿಕೊಂಡು ಮಾತಾಡುವುದಕ್ಕಿಂತಲೂ, ತಾವೇ ಅವರ ನಿವಾಸಕ್ಕೆ ಹೋಗಿ ಶುಭಕೋರುವುದೇ ಶಿಷ್ಟಾಚಾರ ಎಂಬ ಕಾರಣಕ್ಕೆ ಸೋನಿಯಾ ಗಾಂಧಿ ಈ ನಿರ್ಧಾರ ಮಾಡಿದ್ದರು. ಹಾಗೇ, ಎಐಸಿಸಿಗೆ ಇನ್ನು ಖರ್ಗೆ ಮುಖ್ಯಸ್ಥ ಎಂಬ ಸಂದೇಶವನ್ನು ಅವರು ಈ ಮೂಲಕ ಸಾರಿದರು.

ಸಾಮಾನ್ಯವಾಗಿ ಎಐಸಿಸಿ ಅಧ್ಯಕ್ಷರು ಪಕ್ಷದ ಇತರ ನಾಯಕರು, ಸದಸ್ಯರ ನಿವಾಸಕ್ಕೆಲ್ಲ ಹೋಗುವುದಿಲ್ಲ. ಇಷ್ಟು ವರ್ಷಗಳಲ್ಲಿ ಕೂಡ ಕಾಂಗ್ರೆಸ್ ಅಧ್ಯಕ್ಷರು ಇನ್ನೊಬ್ಬರ ನಿವಾಸಕ್ಕೆ ತೆರಳಿ, ಅಲ್ಲಿ ಅವರೊಂದಿಗೆ ಮಾತುಕತೆ ನಡೆಸಿದ್ದು ಅಪರೂಪ. ಕಲ್ಲಿದ್ದಲು ಹಗರಣ ಪ್ರಕರಣದಡಿ ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​ ಅವರಿಗೆ 2015ರಲ್ಲಿ ಸಿಬಿಐ ಸಮನ್ಸ್​ ನೀಡಿದ್ದ ವೇಳೆ, ಅವರಲ್ಲಿ ಧೈರ್ಯ ತುಂಬಿ, ಮನಮೋಹನ್​ ಸಿಂಗ್​ ಜತೆಗೆ ನಾವೆಲ್ಲ ಇದ್ದೇವೆ ಎಂಬ ಸಂದೇಶ ಕೊಡುವ ಸಲುವಾಗಿ ಅಂದು ಎಐಸಿಸಿ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ, ಮನಮೋಹನ್​ ಸಿಂಗ್​ ನಿವಾಸಕ್ಕೆ ಭೇಟಿ ಕೊಟ್ಟಿದ್ದರು. ಅದು ಬಿಟ್ಟರೆ, ಇನ್ನುಳಿದ ಯಾವುದೇ ಸಂದರ್ಭದಲ್ಲೂ ಇಂಥದ್ದೊಂದು ಸನ್ನಿವೇಶ ಬಂದಿಲ್ಲ.

ಇದನ್ನೂ ಓದಿ: Kharge Congress President | ಮಲ್ಲಿಕಾರ್ಜುನ ಖರ್ಗೆಗೆ ಶುಭಾಶಯಗಳ ಸುರಿಮಳೆ! ಯಾರು, ಏನು ಹೇಳಿದರು?

Exit mobile version