ನವ ದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಇಂದು ಮೂರನೇ ದಿನ ಇ.ಡಿ. ವಿಚಾರಣೆಗೆ ಹಾಜರಾಗಿದ್ದಾರೆ. ಸೋನಿಯಾ ಗಾಂಧಿ ಮೊದಲು ಜುಲೈ 21ರಂದು ಇ ಡಿ ವಿಚಾರಣೆಗೆ ಎದುರಿಸಿದ್ದರು. ಅಂದು ಮೂರು ತಾಸುಗಳಲ್ಲಿ ಅವರಿಗೆ 28 ಪ್ರಶ್ನೆಗಳನ್ನು ಕೇಳಲಾಗಿತ್ತು. ಹಾಗೇ, ಜುಲೈ 25ರಂದು ಎರಡನೇ ಸುತ್ತಿನ ಮತ್ತು ಇಂದು ಮೂರನೇ ಹಂತದ ವಿಚಾರಣೆಗೆ ಒಳಪಟ್ಟಿದ್ದಾರೆ. ಅಂದಹಾಗೇ ಇವರೂ ತಮ್ಮ ಪುತ್ರ ರಾಹುಲ್ ಗಾಂಧಿಯವರಂತೆ ಮೋತಿಲಾಲ್ ವೋರಾ ಹೆಸರನ್ನೇ ಹೇಳಿದ್ದಾರೆ ಎಂದು ಮೂಲಗಳಿಂತ ಮಾಹಿತಿ ಲಭ್ಯವಾಗಿದೆ. ಮೋತಿಲಾಲ್ ವೋರಾ ಎಐಸಿಸಿ ಖಜಾಂಚಿಯಾಗಿದ್ದರು. ಕಳೆದ ವರ್ಷ ಕೊವಿಡ್ 19ನಿಂದ ಮೃತಪಟ್ಟಿದ್ದಾರೆ. ಜೂನ್ ತಿಂಗಳಲ್ಲಿ ರಾಹುಲ್ ಗಾಂಧಿಯನ್ನು ಇ ಡಿ ವಿಚಾರಣೆಗೆ ಒಳಪಡಿಸಿದಾಗ ಅವರು ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಅಸೋಸಿಯೇಟೆಡ್ ಜರ್ನಲ್ ಲಿಮಿಟೆಡ್‌ನಿಂದ (AJL) ಯಂಗ್ ಇಂಡಿಯಾಕ್ಕೆ ಹಸ್ತಾಂತರ ಮಾಡುವಾಗ ನಡೆದ ಎಲ್ಲ ವ್ಯವಹಾರ-ವಹಿವಾಟುಗಳ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದು ಮೋತಿಲಾಲ್ ವೋರಾ ಎಂದೇ ಹೇಳಿದ್ದರು.
ಸೋನಿಯಾ ಗಾಂಧಿಯವರಿಗೆ ಕಳೆದ ಎರಡು ಹಂತದ ವಿಚಾರಣೆಯಲ್ಲಿ, ಅಸೋಸಿಯೇಟೆಡ್ ಜರ್ನಲ್ ಲಿಮಿಟೆಡ್ ಮತ್ತು ಯಂಗ್ ಇಂಡಿಯನ್ ಪ್ರವೇಟ್ ಲಿಮಿಟೆಡ್ ನಡುವಿನ ಹಣಕಾಸು ವರ್ಗಾವಣೆ ಬಗ್ಗೆಯೇ ಪ್ರಶ್ನೆ ಕೇಳಿದ್ದಾರೆ. ಆಗ ಸೋನಿಯಾ ಗಾಂಧಿ ತಮ್ಮ ಮಗ ಕೊಟ್ಟ ಉತ್ತರವನ್ನೇ ಕೊಟ್ಟಿದ್ದಾರೆ. ಅಂದರೆ, ನ್ಯಾಷನಲ್ ಹೆರಾಲ್ಡ್ ಪತ್ರಿಕೆ ವರ್ಗಾವಣೆ, ಉಸ್ತುವಾರಿಗೆ ಸಂಬಂಧಪಟ್ಟ ಎಲ್ಲ ಹಣಕಾಸು ನಿರ್ವಹಣೆ ನೋಡಿಕೊಂಡವರು ಮೋತಿಲಾಲ್ ವೋರಾ ಎಂದೇ ಹೇಳಿದ್ದಾರೆ ಎಂದು ಇ ಡಿ ತಿಳಿಸಿದ್ದಾಗಿ ಇಂಡಿಯಾ ಟುಡೆ ಮಾಧ್ಯಮ ವರದಿ ಮಾಡಿದೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮಾತ್ರವಲ್ಲ, ಇದೇ ಕೇಸ್ನಲ್ಲಿ ಈ ಹಿಂದೆ ಇ ಡಿಯಿಂದ ವಿಚಾರಣೆಗೆ ಒಳಪಟ್ಟ ಮಲ್ಲಿಕಾರ್ಜುನ್ ಖರ್ಗೆ, ಪವನ್ ಕುಮಾರ್ ಬನ್ಸಾಲ್ ಕೂಡ ಮೋತಿಲಾಲ್ ವೋರಾ ಅವರೇ ಜವಾಬ್ದಾರಿ ಹೊತ್ತಿದ್ದಾಗಿ ಹೇಳಿದ್ದಾರೆ.
ಯಾರು ಈ ಮೋತಿಲಾಲ್ ವೋರಾ?
ಮೋತಿಲಾಲ್ ವೋರಾ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದರು ಮತ್ತು ನೆಹರೂ ಕುಟುಂಬಕ್ಕೆ ಆಪ್ತರಾಗಿದ್ದವರು. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದು, ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ಅಲ್ಪಾವಧಿಗೆ ಆರೋಗ್ಯ ಮತ್ತು ನಾಗರಿಕ ವಿಮಾನಯಾನ ಇಲಾಖೆಯ ಸಚಿವರೂ ಆಗಿದ್ದರು. 1985-1989ರವರೆಗೆ ಮಧ್ಯಪ್ರದೇಶ ಮುಖ್ಯಮಂತ್ರಿಯೂ ಆಗಿ ಸೇವೆ ಸಲ್ಲಿದ್ದರು. ಇಂದಿರಾಗಾಂಧಿ, ರಾಜೀವ್ ಗಾಂಧಿ ಮತ್ತು ಆ ಬಳಿಕ ಸೋನಿಯಾ ಗಾಂಧಿಯವರ ಜತೆಗೇ ಮೋತಿಲಾಲ್ ವೋರಾ ಹೆಜ್ಜೆ ಹಾಕುತ್ತಿದ್ದರು. ಆ ಮಟ್ಟಿಗೆ ಅವರು ಗಾಂಧಿ ಕುಟುಂಬಕ್ಕೆ ತೀರಾ ಹತ್ತಿರದವರು. 2020ರಲ್ಲಿ ಕೋವಿಡ್ 19 ಸೋಂಕಿನಿಂದ ವೋರಾ ಮೃತಪಟ್ಟಿದ್ದಾರೆ. ಅವರ ಹೆಸರನ್ನು ಈಗ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಇ.ಡಿ ಎದುರು ಹೇಳಿದ್ದಾರೆ.
ಇದನ್ನೂ ಓದಿ:3ನೇ ದಿನದ ಇ.ಡಿ ವಿಚಾರಣೆಗೆ ಆಗಮಿಸಿದ ಸೋನಿಯಾ ಗಾಂಧಿ, ಇಂದೇ ಮುಗಿಯುತ್ತಾ ಪ್ರಶ್ನಾವಳಿ?