ನವ ದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಮತ್ತೆ ಕೊರೊನಾ ಸೋಂಕು ತಗುಲಿದೆ. ಕಳೆದ ಎರಡೂವರೆ ತಿಂಗಳಲ್ಲಿ ಎರಡನೇ ಬಾರಿಗೆ ಅವರು ಕೊರೊನಾಕ್ಕೆ ಒಳಗಾಗುತ್ತಿದ್ದಾರೆ. ಸದ್ಯ ಅವರು ಮನೆಯಲ್ಲೇ ಐಸೋಲೇಟ್ ಆಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮಾಹಿತಿ ನೀಡಿದ್ದಾರೆ. ಬಿಹಾರದಲ್ಲಿ ಜೆಡಿಯು-ಕಾಂಗ್ರೆಸ್-ಆರ್ಜೆಡಿ ನೇತೃತ್ವದ ಮಹಾ ಘಟ್ ಬಂಧನ್ ರಚನೆಯಾಗಿದ್ದು, ಸಂಪುಟ ವಿಸ್ತರಣೆ ಚರ್ಚೆ ಜೋರಾಗಿ ನಡೆಯುತ್ತಿದೆ. ಆಗಸ್ಟ್ 12ರಂದು ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಸೋನಿಯಾ ಗಾಂಧಿಯವರನ್ನು ಅವರ ನಿವಾಸಕ್ಕೇ ತೆರಳಿ ಭೇಟಿ ಮಾಡಿದ್ದರು. ಇಂದು ಅವರಲ್ಲಿ ಸೋಂಕು ದೃಢಪಟ್ಟಿದೆ.
ಸೋನಿಯಾ ಗಾಂಧಿಗೆ ಇದೇ ವರ್ಷ ಜೂನ್ ತಿಂಗಳಲ್ಲಿ ಕೊರೊನಾ ಸೋಂಕು ತಗುಲಿತ್ತು. ಪ್ರಾರಂಭದಲ್ಲಿ ಸಣ್ಣ ಜ್ವರ, ಸೌಮ್ಯ ಲಕ್ಷಣಗಳು ಕಾಣಿಸಿಕೊಂಡಿದ್ದವು. ಬಳಿಕ ಆರೋಗ್ಯ ಸಮಸ್ಯೆ ಹೆಚ್ಚಾಗಿ ಜೂನ್ 12ರಂದು ಗಂಗಾ ರಾಮ್ ಆಸ್ಪತ್ರೆಗೆ ದಾಖಲಾಗಿದ್ದರು. ಸುಮಾರು 8ದಿನಗಳ ಚಿಕಿತ್ಸೆ ಪಡೆದು ಜೂನ್ 20ಕ್ಕೆ ಡಿಸ್ಚಾರ್ಜ್ ಆಗಿದ್ದರು. ಇದೀಗ ಮತ್ತೆ ಕೊರೊನಾ ತಗುಲಿದೆ. ಕಾಂಗ್ರೆಸ್ ನಾಯಕರಾದ ಪ್ರಿಯಾಂಕಾ ಗಾಂಧಿ ವಾದ್ರಾ, ಕೆ.ಸಿ.ವೇಣುಗೋಪಾಲ್ರಿಗೂ ಕೊರೊನಾ ದೃಢಪಟ್ಟಿದೆ. ಸೋನಿಯಾ ಗಾಂಧಿಗೆ ಮತ್ತೆ ಕೊರೊನಾ ದೃಢಪಟ್ಟ ಬೆನ್ನಲ್ಲೇ ಕಾಂಗ್ರೆಸ್ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕಳವಳ ವ್ಯಕ್ತಪಡಿಸಿದ್ದಾರೆ. ಸೋನಿಯಾ ಗಾಂಧಿ ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.
ಇದನ್ನೂ ಓದಿ: ನಿತೀಶ್ ಸಂಪುಟದಲ್ಲಿ ನಾನು ಸಚಿವನಾಗಲೇಬೇಕು; ಸೋನಿಯಾ ಗಾಂಧಿಗೆ ಪತ್ರ ಬರೆದ ಕಾಂಗ್ರೆಸ್ ಶಾಸಕ