Site icon Vistara News

Congress Plenary Session: ಕಾಂಗ್ರೆಸ್​ ಮಹಾ ಅಧಿವೇಶನದಲ್ಲಿ ಇಂದು ಸೋನಿಯಾ ಗಾಂಧಿ ಭಾಷಣ, ರಾಹುಲ್ ಗಾಂಧಿ ಉಪಸ್ಥಿತಿ

Sonia Gandhi to address Congress 85th plenary session today

#image_title

ರಾಯ್ಪುರ: ಛತ್ತೀಸ್​ಗಢ್​​ನ ರಾಯ್ಪುರದಲ್ಲಿ ನಡೆಯುತ್ತಿರುವ ಕಾಂಗ್ರೆಸ್​ 85ನೇ ಮಹಾ ಅಧಿವೇಶನದ (Congress Plenary Session) ಎರಡನೇ ದಿನವಾದ ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಮತ್ತು ಕಾಂಗ್ರೆಸ್ ಮಾಜಿ ಅಧ್ಯಕ್ಷೆ, ಹಿರಿಯ ನಾಯಕಿ ಸೋನಿಯಾ ಗಾಂಧಿ ಭಾಷಣ ಮಾಡಲಿದ್ದಾರೆ. ಇಂದು ಮಧ್ಯಾಹ್ನ ಅವರು ಪಕ್ಷದ ಪ್ರಮುಖರು, ನಾಯಕರನ್ನು ಉದ್ದೇಶಿಸಿ ಮಾತನಾಡುವರು. ರಾಹುಲ್ ಗಾಂಧಿ ಕೂಡ ಪಾಲ್ಗೊಂಡಿದ್ದಾರೆ. ಹಾಗೇ, ದೇಶದ ರಾಜಕೀಯ, ಆರ್ಥಿಕ, ಅಂತಾರಾಷ್ಟ್ರೀ ವ್ಯವಹಾರಗಳಿಗೆ ಸಂಬಂಧಪಟ್ಟ ಪ್ರಮುಖ ನಿರ್ಣಯಗಳ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚಿಸಲು ಕಾಂಗ್ರೆಸ್​ ನಿರ್ಧರಿಸಿದೆ.

ಕಾಂಗ್ರೆಸ್​ 85ನೇ ಮಹಾಧಿವೇಶನ ಫೆ.24ರಿಂದ ಪ್ರಾರಂಭವಾಗಿದೆ. ಮೊದಲ ದಿನ (ಫೆ.24)ದ ಸಭೆಯಲ್ಲಿ ಸುಮಾರು 15 ಸಾವಿರ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ‘ಕಾಂಗ್ರೆಸ್​​ನ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ)ಗೆ ಚುನಾವಣೆ ನಡೆಸುವುದು ಬೇಡ. 23 ಸದಸ್ಯರ ಆಯ್ಕೆಯ ಸಂಪೂರ್ಣ ಅಧಿಕಾರವನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಅವರಿಗೇ ನೀಡುತ್ತೇವೆ’ ಎಂಬ ನಿರ್ಣಯವನ್ನು ಮೊದಲದಿನದ ಸಭೆಯಲ್ಲಿ ಕೈಗೊಳ್ಳಲಾಯಿತು. ಅಂದಹಾಗೇ, ಮಹಾ ಅಧಿವೇಶನದ ಮೊದಲ ದಿನದ ಸಭೆಯಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಪಾಲ್ಗೊಂಡಿರಲಿಲ್ಲ. ಕಾರ್ಯಕಾರಿ ಸಮಿತಿ ಎಂದರೆ ಕಾಂಗ್ರೆಸ್​​ನಲ್ಲಿ ಉನ್ನತ ನಿರ್ಧಾರಗಳನ್ನು ತೆಗೆದುಕೊಳ್ಳುವ ಕಮಿಟಿ. ಈ ಸಮಿತಿ ಸದ್ಯ ವಿಸರ್ಜನೆಗೊಂಡಿದ್ದು, ಅದರ ಬದಲಿಗೆ ಕಾಂಗ್ರೆಸ್​ ಸ್ಟೀರಿಂಗ್​ ಕಮಿಟಿ ಕಾರ್ಯನಿರ್ವಹಿಸುತ್ತಿದೆ. ಮತ್ತೆ ಕಾರ್ಯಕಾರಿ ಸಮಿತಿ ರಚನೆಗೆ ಚುನಾವಣೆ ಅಗತ್ಯವಿಲ್ಲ ಎಂಬ ಅಚಲ ನಿರ್ಧಾರಕ್ಕೆ ಈ ಸ್ಟೀರಿಂಗ್​ ಕಮಿಟಿ ಬಂದಿದೆ.

ಎರಡನೇ ದಿನವಾದ ಇಂದು ಮಲ್ಲಿಕಾರ್ಜುನ್​ ಖರ್ಗೆ ಒಂದು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಅದಾದ ಬಳಿಕ ಪಕ್ಷದ ಕಾರ್ಯದರ್ಶಿಗಳು ತಮ್ಮ ವರದಿಯನ್ನು ಸಲ್ಲಿಸುವರು. ಸೋನಿಯಾ ಗಾಂಧಿಯವರಿಗೆ ಧನ್ಯವಾದ ಸಲ್ಲಿಸುವ ಭಾಷಣವನ್ನೂ ಇದೇ ಅಧಿವೇಶನದಲ್ಲಿ ಪ್ರಸ್ತುತಪಡಿಸಲಾಗುತ್ತದೆ. ಅದಾದ ಬಳಿಕ ಸೋನಿಯಾ ಗಾಂಧಿ ಭಾಷಣ ಮಾಡಲಿದ್ದಾರೆ ಎಂದು ಹೇಳಲಾಗಿದೆ. ಕಾಂಗ್ರೆಸ್​ನ ಈ ಮಹಾ ಅಧಿವೇಶನ ಫೆ.26ರಂದು ಮುಕ್ತಾಯಗೊಳ್ಳಲಿದೆ.

Exit mobile version