ನವ ದೆಹಲಿ: ನ್ಯಾಷನಲ್ ಹೆರಾಲ್ಡ್ ಕೇಸ್‌ನಲ್ಲಿ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಪಡೆದಿರುವ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಜೂ.8ಕ್ಕೆ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ಕೊವಿಡ್ 19 ಸೋಂಕಿತರಾಗಿ ಚಿಕಿತ್ಸೆ ಪಡೆಯುತ್ತಿರುವ ಅವರು ಬುಧವಾರ ಇ.ಡಿ. ವಿಚಾರಣೆಗೆ ಹಾಜರಾಗೋದಿಲ್ಲ ಎಂದು ಮೂಲಗಳು ತಿಳಿಸಿವೆ. ಸೋನಿಯಾ ಗಾಂಧಿಯವರಲ್ಲಿ ಜೂ.2ರಂದು ಕೊರೊನಾ ಸೋಂಕು ದೃಢಪಟ್ಟಿತ್ತು. ಅವರಲ್ಲಿ ಕೊರೊನಾದ ಸೌಮ್ಯ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಮನೆಯಲ್ಲೇ ಐಸೋಲೇಟ್ ಆಗಿದ್ದಾರೆ. ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೂ.2ರಂದು ಹೇಳಿಕೆ ಬಿಡುಗಡೆ ಮಾಡಿದ್ದ ಕಾಂಗ್ರೆಸ್, ಸೋನಿಯಾ ಗಾಂಧಿ ಜೂ.8ಕ್ಕೆ ಇಡಿ ವಿಚಾರಣೆಗೆ ಹಾಜರಾಗುವ ವಿಚಾರದಲ್ಲಿ ಯಾವುದೇ ಬದಲಾವಣೆಯಿಲ್ಲ. ಈ ಬಗ್ಗೆ ಮುಂದಿನ ದಿನಗಳಲ್ಲಿ ಹೇಳುತ್ತೇವೆ ಎಂದಿತ್ತು. ಆದರೆ ಈಗ ಬಂದಿರುವ ಮಾಹಿತಿ ಪ್ರಕಾರ, ಸೋನಿಯಾ ಗಾಂಧಿಗೆ ವೈದ್ಯರಿಂದ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ.
ಕಾಂಗ್ರೆಸ್ ಒಡೆತನದ ಯಂಗ್ ಇಂಡಿಯಾ ಈ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಮಾಲೀಕತ್ವ ಹೊಂದಿದೆ. ಆದರೆ ಪತ್ರಿಕೆ ಮಾಲೀಕತ್ವ ಹೊಂದಿರುವ ಯಂಗ್ ಇಂಡಿಯಾದಲ್ಲಿ ಅಕ್ರಮ ಹಣಕಾಸು ವ್ಯವಹಾರ ನಡೆದಿದೆ ಎಂಬ ಆರೋಪದ ತನಿಖೆಯನ್ನು ಹಲವು ವರ್ಷಗಳಿಂದಲೂ ಜಾರಿ ನಿರ್ದೇಶನಾಲಯ ನಡೆಸುತ್ತಿದೆ. ಪ್ರಸ್ತುತ ಕೇಸ್‌ಗೆ ಸಂಬಂಧಿಸಿದಂತೆ ಕಾಂಗ್ರೆಸ್ ಹಿರಿಯ ನಾಯಕರಾದ ಮಲ್ಲಿಕಾರ್ಜುನ್ ಖರ್ಗೆ ಮತ್ತು ಪವನ್ ಬನ್ಸಾಲ್‌ರನ್ನೂ ಇತ್ತೀಚೆಗೆ ಇ ಡಿ ವಿಚಾರಣೆಗೆ ಒಳಪಡಿಸಿತ್ತು. ಜೂನ್ 1ರಂದು ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದೆ. ಅದರಲ್ಲಿ ರಾಹುಲ್ ಗಾಂಧಿ ಜೂ.13ಕ್ಕೆ ಇ ಡಿ ಎದುರು ವಿಚಾರಣೆಗೆ ಹಾಜರಾಗಬೇಕಿದೆ.
ಇದನ್ನೂ ಓದಿ: ಕಾಂಗ್ರೆಸ್ ತೊರೆದ ಬ್ರಿಜೇಶ್ ಕಾಳಪ್ಪ, ಸೋನಿಯಾ ಗಾಂಧಿಗೆ ರಾಜೀನಾಮೆ ಸಲ್ಲಿಕೆ
ದಶಕಗಳಿಂದ ಈ ನ್ಯಾಷನಲ್ ಹೆರಾಲ್ಡ್ ಎಂಬುದು ಕಾಂಗ್ರೆಸ್‌ಗೆ ಸುತ್ತಿಕೊಂಡಿದೆ. ಪತ್ರಿಕೆಯನ್ನು ಅಸೋಸಿಯೇಟೆಡ್ ಜರ್ನಲ್ ಲಿಮಿಟೆಡ್‌ನಿಂದ ಯಂಗ್ ಇಂಡಿಯಾಕ್ಕೆ ಹಸ್ತಾಂತರ ಪ್ರಕ್ರಿಯೆ ಕಾನೂನು ಬದ್ಧವಾಗಿ ನಡೆದಿಲ್ಲ. ಷೇರುದಾರರ ನಡುವಿನ ವಹಿವಾಟಿನಲ್ಲಿ 2 ಸಾವಿರ ಕೋಟಿ ರೂ.ಗೂ ಅಧಿಕ ಮೊತ್ತದ ಅವ್ಯವಹಾರವಾಗಿದೆ ಎಂಬ ಆರೋಪ ಇದೆ. ಮೊದಲು ಈ ಕೇಸ್ ತನಿಖೆ ಕೈಗೆತ್ತಿಕೊಂಡಿದ್ದು ಸಿಬಿಐ. 2015ರಿಂದ ಇ.ಡಿ. ತನಿಖೆಯೂ ನಡೆಯುತ್ತಿದೆ. ಈ ಮಧ್ಯೆ ಕಾಂಗ್ರೆಸ್ ನಾಯಕರು ತಮ್ಮ ಮೇಲಿನ ಆರೋಪ ತಳ್ಳಿ ಹಾಕಿದ್ದಾರೆ. ಯಾವುದೇ ಅವ್ಯವಹಾರ ನಡೆದಿಲ್ಲ. ಇದು ಬಿಜೆಪಿ ನಡೆಸುತ್ತಿರುವ ದ್ವೇಷದ ರಾಜಕಾರಣ ಎಂದೂ ಹೇಳಿದ್ದಾರೆ.
ಇದನ್ನೂ ಓದಿ ಸೋನಿಯಾ ಗಾಂಧಿಗೆ ಕೊರೊನಾ ಸೋಂಕು; ಇ.ಡಿ ವಿಚಾರಣೆಗೆ ಹಾಜರಾಗೋದು ಡೌಟ್