ಗಾಯಕ ಸೋನು ನಿಗಮ್(Sonu Nigam) ಅವರ ಮೇಲೆ ಮುಂಬಯಿಯಲ್ಲಿ ಶಿವಸೇನೆ ಶಾಸಕ ಪ್ರಕಾಶ್ ಫಾಟರ್‌ಪೇಕರ್ ಪುತ್ರ ಮತ್ತು ಅಳಿಯ ಹಲ್ಲೆಗೆ ಮುಂದಾಗಿದ್ದ ವಿಡಿಯೊ ಎಲ್ಲೆಡೆ ವೈರಲ್ ಆಗಿತ್ತು. ಇಲ್ಲಿನ ಚೆಂಬೂರಿನ ಸಾಂಸ್ಕೃತಿಕ ಉತ್ಸವದಲ್ಲಿ ಲೈವ್ ಕಾನ್ಸರ್ಟ್ ನಡೆಸುತ್ತಿದ್ದ ಸೋನು ನಿಗಮ್ ಜತೆಗೆ, ಶಿವಸೇನೆ ಶಾಸಕ ಪ್ರಕಾಶ್ ಪುತ್ರ ಸ್ವಪ್ನಿಲ್ ಫಾಟರ್‌ಪೇಕರ್ ಮತ್ತು ಸೋದರಳಿಯ ಸೆಲ್ಫಿ ತೆಗೆದುಕೊಳ್ಳಲು ಮುಂದಾದರು. ಆಗ ಸೋನು ಅವರ ಅಂಗರಕ್ಷಕರು ಅವರನ್ನು ತಡೆದಿದ್ದಾರೆ. ಆಗ ಕೋಪಗೊಂಡ ಮಗ ಮತ್ತು ಅಳಿಯ ಹಲ್ಲೆ ನಡೆಸಿದ್ದರು. ಅಂದಹಾಗೇ, ಈ ಸೋನು ನಿಗಮ್ ಅವರ ಸಂಗೀತ ಉತ್ಸವವನ್ನು ಆಯೋಜಿಸಿದ್ದೂ ಕೂಡ ಶಾಸಕ ಪ್ರಕಾಶ್ ಫಾಟರ್‌ಪೇಕರ್ ಅವರೇ ಆಗಿದ್ದರು. ಘಟನೆ ಬಗ್ಗೆ ಸೋನು ನಿಗಮ್ ಮತ್ತು ಅವರ ತಂಡದವರು ಪೊಲೀಸರಿಗೆ ದೂರು ನೀಡಿದ ಬೆನ್ನಲ್ಲೇ, ಎಫ್ಐಆರ್ ದಾಖಲಾಗಿದೆ.
ಇಷ್ಟೆಲ್ಲ ಆದ ಬಳಿಕ ಶಾಸಕ ಪ್ರಕಾಶ್ ಪುತ್ರಿ ಸುಪ್ರದಾ ಫಾಟರ್‌ಪೇಕರ್ ಅವರು ಟ್ವೀಟ್ ಮಾಡಿ ಕ್ಷಮೆ ಯಾಚಿಸಿದ್ದಾರೆ. ಕಾರ್ಯಕ್ರಮ ಆಯೋಜನಾ ತಂಡದಲ್ಲಿ ಇದ್ದ ಸುಪ್ರದಾ ‘ಕಾರ್ಯಕ್ರಮದ ಕೊನೆಯಲ್ಲಿ ಉಂಟಾದ ಅಹಿತಕರ ಸನ್ನಿವೇಶಕ್ಕೆ ಸಂಬಂಧಪಟ್ಟಂತೆ ನಾನು ಸೋನು ನಿಗಮ್ ಅವರಲ್ಲಿ ಕ್ಷಮೆ ಕೋರುತ್ತೇನೆ’ ಎಂದು ಹೇಳಿದ್ದಾರೆ. ‘ಲೈವ್ ಕಾನ್ಸರ್ಟ್ ಮುಕ್ತಾಯ ಆಗುತ್ತಿದ್ದಂತೆ ಸೋನು ನಿಗಮ್ ಅವಸರದಿಂದ ವೇದಿಕೆಯಿಂದ ಕೆಳಗೆ ಇಳಿದು ಹೊರಟರು. ಆಗ ನನ್ನ ಸಹೋದರ ಸೋನು ನಿಗಮ್ ಜತೆ ಸೆಲ್ಫಿ ತೆಗೆಯಲು ಮುಂದಾದರು. ಹೆಚ್ಚೆಚ್ಚು ಜನರು ಮುತ್ತಿಕೊಳ್ಳುತ್ತಿದ್ದಂತೆ ಸೋನು ನಿಗಮ್ ಅಂಗರಕ್ಷಕರು ತಡೆಯಲು ಬಂದರು. ಆಗ ಉಂಟಾದ ಅವ್ಯವಸ್ಥೆಯ ಕಾರಣದಿಂದ ಸೋನು ಜತೆಗಿದ್ದವರು ಒಬ್ಬರು ಕೆಳಗೆ ಬಿದ್ದರು. ನಾವು ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ, ಚಿಕಿತ್ಸೆ ಕೊಡಿಸಿದ್ದೇವೆ. ಬಳಿಕ ಅವರು ಡಿಸ್ಚಾರ್ಜ್ ಆಗಿದ್ದಾರೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: Attack on Sonu Nigam: ಸೆಲ್ಫಿಗಾಗಿ ಗಾಯಕ ಸೋನು ನಿಗಮ್ ಮೇಲೆ ಹಲ್ಲೆ ಮಾಡಿದ ಶಾಸಕನ ಪುತ್ರ ಮತ್ತು ಅಳಿಯ
‘ಸೋನು ನಿಗಮ್ ಅವರಿಗೆ ಏನೂ ತೊಂದರೆಯಾಗಿಲ್ಲ. ಸೋನು ನಿಗಮ್ ಮತ್ತು ಅವರ ಸಂಪೂರ್ಣ ತಂಡದ ಬಳಿ ಅಧಿಕೃತವಾಗಿ ಕ್ಷಮೆ ಯಾಚಿಸಿದ್ದೇವೆ. ಆದರೆ ಈ ವಿಚಾರವನ್ನು ಕೆಲವರು ರಾಜಕೀಯಗೊಳಿಸಲು ಯತ್ನಿಸುತ್ತಿದ್ದು, ಸುಳ್ಳು ಸುದ್ದಿ ಹರಡುತ್ತಿದ್ದಾರೆ. ದಯವಿಟ್ಟು ಅದನ್ನು ಯಾರೂ ನಂಬಬೇಡಿ’ ಎಂದೂ ಟ್ವೀಟ್ ಮಾಡಿಕೊಂಡಿದ್ದಾರೆ. ಇನ್ನು ಶಾಸಕ ಪ್ರಕಾಶ್ ಪುತ್ರನ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆಂದು ವರದಿಯಾಗಿದೆ.