ಪಟನಾ: ದೇಶದಲ್ಲೀಗ ಕಷ್ಟದಲ್ಲಿರುವವರಿಗೆ ವ್ಯಕ್ತಿಗತವಾಗಿ ಸಹಾಯ ಮಾಡುವಲ್ಲಿ ಮುಂಚೂಣಿಯಲ್ಲಿರುವವರು ನಟ ಸೋನು ಸೂದ್. ಕೊರೊನಾ ಕಾಲದಿಂದ ಅವರ ಜನಸೇವೆ ಮತ್ತಷ್ಟು ಪ್ರಜ್ವಲಿಸಿತು. ಮೊನ್ನೆ ಮೊನ್ನೆಯಷ್ಟೇ ಒಂಟಿ ಕಾಲಿನಲ್ಲಿ ಶಾಲೆಗೆ ಹೋಗುತ್ತಿದ್ದ ಬಾಲಕಿಯೊಬ್ಬಳಿಗೆ ಕೃತಕ ಕಾಲು ಕೊಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ ಸೋನು ಇದೀಗ ಮತ್ತೊಮ್ಮೆ ಅಂತಹುದೇ ವಿಶೇಷ ಉದಾರ, ಸಹೃದಯಿ ಮನಸ್ಸಿನಿಂದ ಎಲ್ಲರ ಪ್ರೀತಿ ಗೆದ್ದಿದ್ದಾರೆ. ಬಿಹಾರದ ಸಣ್ಣ ಹಳ್ಳಿಯಲ್ಲಿ ನಾಲ್ಕು ಕಾಲು ಮತ್ತು ನಾಲ್ಕು ಕಾಲುಗಳೊಂದಿಗೆ ಕಷ್ಟಪಡುತ್ತಿರುವ ಹುಡುಗಿಗೆ ಅವರೀಗ ಶಸ್ತ್ರಚಿಕಿತ್ಸೆಗೆ ನೆರವಾಗಿದ್ದಾರೆ.
ದೇಹದಲ್ಲಿ ನಾಲ್ಕು ಹೆಚ್ಚುವರಿ ಕೈಗಳು ಮತ್ತು ಕಾಲುಗಳೊಂದಿಗೆ ಜನಿಸಿದ ಚಾಹುಮುಖಿ ಎಂಬ ಹುಡುಗಿಗೆ ನಾನು ನೆರವಾಗುತ್ತಿದ್ದೇನೆ. ಅವಳ ಶಸ್ತ್ರಚಿಕಿತ್ಸೆಗೆ ಹೆತ್ತವರ ಬಳಿ ಹಣವಿಲ್ಲದ್ದರಿಂದ ಸಂಪೂರ್ಣ ಚಿಕಿತ್ಸೆಗೆ ಧನಸಹಾಯ ಮಾಡಿದ್ದೇನೆ, ಶಸ್ತ್ರಚಿಕಿತ್ಸೆಯನ್ನು ಈಗ ಯಶಸ್ವಿಯಾಗಿ ಮಾಡಲಾಗಿದೆ ಎಂಬ ಮಾಹಿತಿಯನ್ನು ಗುರುವಾರ ರಾತ್ರಿ, ಸೋನು ಸೂದ್ ತಮ್ಮ ಅಧಿಕೃತ ಇನ್‌ಸ್ಟಾ ಗ್ರಾಮ್ ಖಾತೆಯಲ್ಲಿ ಹಂಚಿಕೊಂಡರು.
ಆಸ್ಪತ್ರೆಯ ಹಾಸಿಗೆಯಲ್ಲಿದ್ದ ಬಾಲಕಿಯ ಚಿತ್ರಗಳನ್ನು ಹಂಚಿಕೊಂಡ ಸೋನು ಸೂದ್, “ಮೇರಾ ಔರ್ ಚಾಹುಮುಖಿ ಕುಮಾರಿ ಕಾ ಸಫರ್ ಕಾಮ್ಯಾಬ್ ರಹಾʼ ಎಂದಿದ್ದಾರೆ. ಬಿಹಾರದ ಒಂದು ಸಣ್ಣ ಹಳ್ಳಿಯ ಈ ಪುಟಾಣಿ ಈಗ ಯಶಸ್ವಿ ಶಸ್ತ್ರಚಿಕಿತ್ಸೆಯ ನಂತರ ಅವಳು ತನ್ನ ಮನೆಗೆ ಹಿಂತಿರುಗಲು ಸಿದ್ಧಳಾಗಿದ್ದಾಳೆ ಎಂದು ತಿಳಿಸಿದ್ದಾರೆ.
ಮಗುವಿಗೆ ಸಹಾಯ ಮಾಡಿದ್ದಕ್ಕಾಗಿ ಅನೇಕರು ಸೂದ್ ಅವರನ್ನು ಶ್ಲಾಘಿಸಿದ್ದಾರೆ. “ಮಕ್ಕಳನ್ನು ತುಂಬಾ ಬೆಂಬಲಿಸಿದ್ದಕ್ಕಾಗಿ ಸೋನು ಸರ್ ಗೆ ಧನ್ಯವಾದಗಳು, ನೀವು ಎಲ್ಲರಿಗೂ ಸಹಾಯ ಮಾಡುತ್ತೀರಿ, ಅದಕ್ಕಾಗಿಯೇ ನೀವು ತುಂಬಾ ಒಳ್ಳೆಯ ವ್ಯಕ್ತಿಯಾಗಿದ್ದೀರಿ” ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು, ‘ಧನ್ಯವಾದಗಳು ಸೋನು. ನಿಮ್ಮ ಉದಾರ ಹೃದಯವು ಮತ್ತೆ ಅತ್ಯುತ್ತಮವಾದದ್ದನ್ನು ಮಾಡುತ್ತಿದೆ. ಪ್ರಾರ್ಥನೆಗಳು ಭರವಸೆ ನೀಡಿವೆ. ದೇವರು ನಿಮ್ಮನ್ನು ಆಶೀರ್ವದಿಸಲಿ ಮತ್ತು ಮಗುವು ತನ್ನ ಜೀವನವನ್ನು ಎಂದಿನಂತೆ ನಡೆಸಲಿ” ಎಂದು ಕಮೆಂಟ್ ಮೂಲಕ ಸೋನುಗೆ ಶಹಬ್ಬಾಶ್ ಹೇಳಿದ್ದಾರೆ. ಚಿತ್ರ ತಾರೆಯರಾದ ಸುನಿಲ್ ಶೆಟ್ಟಿ, ರಿಧಿಮಾ ಪಂಡಿತ್, ಇಷಾ ಗುಪ್ತಾ ಮೊದಲಾದವರು ಕೆಂಪು ಬಣ್ಣದ ಹೃದಯದ ಚಿತ್ರಗಳನ್ನು ಹಾಕುವ ಮೂಲಕ ಬೆಂಬಲ ಸಾರಿದ್ದಾರೆ. ಒಬ್ಬ ಅಭಿಮಾನಿಯಂತೂ ಬಡವರ ಪಾಲಿನ ರಕ್ಷಕ ಎಂದಿದ್ದಾರೆ.
ಸೂರತ್‌ನಲ್ಲಿ ಶಸ್ತ್ರಚಿಕಿತ್ಸೆ
ಬಿಹಾರದ ನೇವಾಡದ ಕಾರ್ಮಿಕ ದಂಪತಿಯ ಪುಟ್ಟ ಮಗಳು, ಎರಡುವರೆ ವರ್ಷದ ಚಾಹುಮುಖಿ ನಾಲ್ಕು ಕಾಲು ಮತ್ತು ನಾಲ್ಕು ಕೈಗಳೊಂದಿಗೆ ಬದುಕುತ್ತಿದ್ದಳು. ಕೆಲವು ದಿನಗಳ ಹಿಂದೆ ಈಕೆಯ ಹೆತ್ತವರು ಸ್ಥಳೀಯ ಜಿಲ್ಲಾಧಿಕಾರಿ ಕಚೇರಿಗೆ ಹೋಗಿ ನೆರವು ಕೇಳಿದ್ದರು. ಈ ಸನ್ನಿವೇಶವನ್ನು ಯಾರೋ ಒಬ್ಬರು ವಿಡಿಯೊ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದರು. ಇದನ್ನು ಗಮನಿಸಿದ ಸೋನು ಸೂದ್ ನೇವಾಡದಲ್ಲಿರುವ ಬಾಲಕಿಯ ಹೆತ್ತವರನ್ನು ಸಂಪರ್ಕಿಸಿದರು. ಬಾಲಕಿಯನ್ನು ನೇವಾಡದಿಂದ ಸೂರತ್‌ಗೆ ಕರೆತಂದು ಅಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ʻʻಇದು ತುಂಬ ಕಷ್ಟಕರ ಶಸ್ತ್ರಚಿಕಿತ್ಸೆಯಾಗಿತ್ತು. ಅದನ್ನು ಅತ್ಯಂತ ನಾಜೂಕಿನಿಂದ ನಿಭಾಯಿಸಿದ ಕಿರಣ್ ಆಸ್ಪತ್ರೆಯ ವೈದ್ಯರಿಗೆ ವಂದನೆಗಳುʼʼ ಎಂದು ಸೋನು ಸೂದ್ ಹೇಳಿದ್ದಾರೆ. ಚಾಹುಮುಖಿ ಹೆತ್ತವರು ಸೋನುಸೂದ್‌ಗೆ ಧನ್ಯವಾದ ಹೇಳಿದ್ದಾರೆ.
ಇದನ್ನೂ ಓದಿ:Viral Video: ಒಂದೇ ಕಾಲಲ್ಲಿ ಶಾಲೆಗೆ ಹೋಗುತ್ತಿದ್ದ ಬಾಲಕಿ ನೆರವಿಗೆ ಬಂದ ನಟ ಸೋನು ಸೂದ್