ಗಾಂಧಿನಗರ: ದಕ್ಷಿಣ ಕೊರಿಯಾ ಪ್ರಜೆಯೊಬ್ಬ ಗುಜರಾತ್ನ ಮೆಹ್ಸಾನಾ ಜಿಲ್ಲೆಯಲ್ಲಿ ಪ್ಯಾರಾಗ್ಲೈಡಿಂಗ್ ಮಾಡುತ್ತಿದ್ದಾಗ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. 50 ವರ್ಷದ ಶಿನ್ ಬೈಯಾಂಗ್ ಮೂನ್ ಎಂಬುವರು ಕಡಿ ಪಟ್ಟಣದ ವಿಸಾಟ್ಪುರಾ ಗ್ರಾಮದಲ್ಲಿರುವ ಶಾಲಾ ಮೈದಾನದಲ್ಲಿ ಇಂದು ಸಂಜೆ 5.30ರ ಹೊತ್ತಿಗೆ ಪ್ಯಾರಾಗ್ಲೈಡಿಂಗ್ ಮಾಡುತ್ತಿದ್ದರು.
ಶಿನ್ ಬೈಯಾಂಗ್ ಮೂನ್ 50 ಅಡಿ ಎತ್ತರಕ್ಕೆ ಹೋದಾಗ ಅವರ ಪ್ಯಾರಾಗ್ಲೈಡರ್ನ ಮೇಲಾವರಣ ಸರಿಯಾಗಿ ತೆರೆದುಕೊಳ್ಳದೆ, ಮುಚ್ಚಿಕೊಂಡುಬಿಟ್ಟಿತು. ಇದರಿಂದಾಗಿ ಪ್ಯಾರಾಗ್ಲೈಡರ್ ಹಾರದೆ ಶಿನ್ ಕೆಳಗೆ ಬಿದ್ದಿದ್ದಾರೆ. ಅರೆ ಪ್ರಜ್ಞೆ ಅವಸ್ಥೆ ತಲುಪಿದ್ದ ಶಿನ್ರನ್ನು ಅವರ ಸ್ನೇಹಿತ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಚಿಕಿತ್ಸೆ ನೀಡುತ್ತಿದ್ದಾಗಲೇ ಅವರು ಮೃತಪಟ್ಟಿದ್ದಾರೆ. ಕೆಳಗೆ ಬಿದ್ದ ಶಾಕ್ಗೆ ಹೃದಯಸ್ತಂಭನ ಆಗಿ ಶಿನ್ ಸಾವನ್ನಪ್ಪಿದ್ದಾರೆಂದು ವೈದ್ಯರು ಹೇಳಿದ್ದಾರೆ.
ಶಿನ್ ಅವರು ತಮ್ಮ ಸ್ನೇಹಿತನೊಂದಿಗೆ ದಕ್ಷಿಣ ಕೊರಿಯಾದಿಂದ ವಡೋದರಾಕ್ಕೆ ಪ್ರವಾಸಕ್ಕೆ ಬಂದಿದ್ದರು. ವಿವಿಧ ಸ್ಥಳಗಳಿಗೆ ಭೇಟಿಕೊಟ್ಟ ಇವರಿಬ್ಬರೂ, ಶನಿವಾರ ಪ್ಯಾರಾಗ್ಲೈಡಿಂಗ್ ಮಾಡಲು ಬಂದರು. ಈ ವೇಳೆ ದುರಂತ ನಡೆದಿದೆ. ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.