ನವದೆಹಲಿ: ನೈಋತ್ಯ ಮಾನ್ಸೂನ್ (South-West Monsoon)ಭಾನುವಾರ (ಮೇ 30)ರಂದು ಕೇರಳಕ್ಕೆ ಪ್ರವೇಶ ಮಾಡಿದ್ದು, ಜೂನ್ 2ರ ಹೊತ್ತಿಗೆ ಕರ್ನಾಟಕ ಪ್ರವೇಶ ಮಾಡಲಿದೆ. ಸಾಮಾನ್ಯವಾಗಿ ಪ್ರತಿವರ್ಷ ನೈಋತ್ಯ ಮುಂಗಾರು ಜೂ.1ಕ್ಕೆ ಕೇರಳ ಪ್ರವೇಶ ಮಾಡುತ್ತಿತ್ತು. ಅದಾದ ನಾಲ್ಕು ದಿನದಲ್ಲಿ ಅಂದರೆ ಜೂ.5ರ ಹೊತ್ತಿಗೆ ಕರ್ನಾಟಕಕ್ಕೆ ಬರುತ್ತಿತ್ತು. ಆದರೆ ಈ ಬಾರಿ ಅಂಡಮಾನ್ ನಿಕೋಬಾರ್ ದ್ವೀಪಕ್ಕೆ ತುಂಬ ಬೇಗ (ಮೇ 15) ಆಗಮಿಸಿರುವ ನೈಋತ್ಯ ಮುಂಗಾರು ಕೇರಳಕ್ಕೂ ಮೂರು ದಿನ ಮೊದಲೇ ಪ್ರವೇಶ ಮಾಡಿದೆ. ಕೇರಳ-ತಮಿಳುನಾಡುಗಳಲ್ಲಿ ಈಗಾಗಲೇ ಮಳೆ ಶುರುವಾಗಿದ್ದು ಕೇರಳ ಕರಾವಳಿಯಲ್ಲಿ ಗುರುವಾರದವರೆಗೂ ಹಳದಿ ಅಲರ್ಟ್ ಇರಲಿದೆ. ಮುಂಗಾರು ಬೇಗ ಬಂದಿದ್ದರಿಂದ ಕೃಷಿ ಚಟುವಟಿಕೆಗಳೂ ಗರಿಗೆದರಲಿವೆ.
ಕೇರಳದಲ್ಲಿ ಮುಂಗಾರು ಮಳೆ ಪ್ರಾರಂಭವಾದ ಬೆನ್ನಲ್ಲೇ ಕರ್ನಾಟಕದಲ್ಲೂ ಅಲರ್ಟ್ ಘೋಷಿಸಲಾಗಿದೆ. ಜೂನ್ 2ರಂದು ನೈಋತ್ಯ ಮಾನ್ಸೂನ್ ರಾಜ್ಯ ಪ್ರವೇಶ ಮಾಡಲಿರುವ ಹಿನ್ನೆಲೆಯಲ್ಲಿ ಕರಾವಳಿ ತೀರದ ಮತ್ತು ದಕ್ಷಿಣ ಒಳನಾಡಿನ ಪ್ರದೇಶಗಳಲ್ಲಿ ವಿಪರೀತ ಮಳೆಯಾಗುವ ಮುನ್ನೆಚ್ಚರಿಕೆ ನೀಡಿರುವ ಹವಾಮಾನ ಇಲಾಖೆ, ಒಟ್ಟು 10 ಜಿಲ್ಲೆಗಳಲಿ ಹಳದಿ ಅಲರ್ಟ್ ಘೋಷಣೆ ಮಾಡಿದೆ. ಉತ್ತರ ಕನ್ನಡ, ಕರಾವಳಿ ಜಿಲ್ಲೆಗಳು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಹಾಸನ, ಶಿವಮೊಗ್ಗ, ರಾಮನಗರ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ 7 ಎಂಎಂವರೆಗೂ ಮಳೆಯಾಗಬಹುದು. ಈ ಪ್ರದೇಶಗಳ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದೆ. ಬೆಂಗಳೂರಿನಲ್ಲಿ ಇಂದು ಮುಂಜಾನೆಯಿಂದಲೇ ಮೋಡ ಮುಸುಕಿದ ವಾತಾವರಣ ಇದ್ದು, ಸಂಜೆಯ ಹೊತ್ತಿಗೆ ಮಳೆಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: Delhi Rain: ದೆಹಲಿಯಲ್ಲಿ ಇಂದೂ ಭಾರಿ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ
10 ವರ್ಷಗಳಲ್ಲಿ ಇದು ಮೂರನೇ ಬಾರಿ !
ಅಂಡಮಾನ್ ನಿಕೋಬಾರ್ ದ್ವೀಪಕ್ಕೆ ಮೇ 16ರಂದು ಮುಂಗಾರು ಪ್ರವೇಶ ಮಾಡಿದ್ದರಿಂದ ಕೇರಳಕ್ಕೂ ಮೇ 26ರ ಹೊತ್ತಿಗೆ ಪ್ರವೇಶ ಮಾಡಬಹುದು ಎಂದು ಹೇಳಲಾಗಿತ್ತು. ಆದರೆ ಎರಡು ದಿನ ತಡವಾಗಿ ಮತ್ತು ಸಾಮಾನ್ಯವಾಗಿ ಪ್ರತಿವರ್ಷ ಆಗಮನವಾಗುವ ಅವಧಿ (ಜೂ.1)ಗೂ ಮೂರು ದಿನ ಪೂರ್ವದಲ್ಲಿಯೇ ಪ್ರವೇಶವಾಗಿದೆ. ಹೀಗೆ ಅವಧಿಗೂ ಪೂರ್ವ ಮುಂಗಾರು ಆಗಮನವಾಗುವುದು ವಿರಳ. ಕಳೆದ 10 ವರ್ಷಗಳಲ್ಲಿ ಇದು ಮೂರನೇಬಾರಿ ಎಂದೂ ಹವಾಮಾನ ಇಲಾಖೆ ತಿಳಿಸಿದೆ.
ಸೈಕ್ಲೋನ್ ಅಸಾನಿ ಕಾರಣದಿಂದ ಈ ಬಾರಿ ಮುಂಗಾರು ಕೂಡ ಬೇಗ ಪ್ರವೇಶ ಆಗಿದೆ ಎಂದು ಹವಾಮಾನ ಇಲಾಖೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ದಕ್ಷಿಣ ಭಾರತದ ಎಲ್ಲ ರಾಜ್ಯಗಳಲ್ಲೂ ಮಾರ್ಚ್ ತಿಂಗಳಿಂದ ಮೇ 28ರವರೆಗೆ ಸಾಮಾನ್ಯ ಪ್ರಮಾಣಕ್ಕಿಂತಲೂ ಹೆಚ್ಚಿನ ಮಳೆಯಾಗಿದೆ. ಈ ಅವಧಿಯಲ್ಲಿ ಕರ್ನಾಟಕದಲ್ಲಿ ಶೇ.136, ಲಕ್ಷದ್ವೀಪ ಶೇ.112, ಕೇರಳ ಶೇ.98, ಪುದುಚೇರಿ ಶೇ.87, ಆಂಧ್ರಪ್ರದೇಶ ಶೇ.34 ರಷ್ಟು ಮಳೆ ಕಂಡಿದೆ.
ದೆಹಲಿಯಲ್ಲಿ ಭಯಂಕರ ಉಷ್ಣತೆಯಿಂದ ಕಂಗೆಟ್ಟಿ ಹೋಗಿದ್ದ ಜನರಿಗೆ ಭಾನುವಾರದ ಸಂಜೆ ಮಳೆ ರಿಲೀಫ್ ಕೊಟ್ಟಿದೆ. ಇಂದೂ ಕೂಡ ಮಳೆಯಾಗುವ ಸಾಧ್ಯತೆ ಇದೆ. ಹಾಗೇ, ಬಿಹಾರದಲ್ಲಿ ಭಾನುವಾರ ಬೆಳಗ್ಗೆಯಿಂದಲೇ ಗಾಳಿ, ಗುಡುಗು ಸಹಿತ ಮಳೆಯಾಗುತ್ತಿದೆ. ಈ ಮಳೆ ಮುಂದಿನ ಮೂರು ದಿನ ಮುಂದುವರಿಯುವ ಸಾಧ್ಯತೆ ಇದೆ ಎನ್ನಲಾಗಿದೆ. ಹಾಗೇ, ಉತ್ತರಾಖಂಡ್‌ನಲ್ಲಿ ನಿನ್ನೆಯಿಂದ ಭಾರಿ ಮಳೆ ಸುರಿಯುತ್ತಿದ್ದು, ನಿನ್ನೆ -ಇಂದು ಹಳದಿ ಅಲರ್ಟ್ ಘೋಷಿಸಲಾಗಿದೆ.
ಇದನ್ನೂ ಓದಿ: ನೈಋತ್ಯ ಮುಂಗಾರು ಅಂಡಮಾನ್ ಪ್ರವೇಶ, ರಾಜ್ಯದಲ್ಲಿ ಇನ್ನೂ 4 ದಿನ ಭರ್ಜರಿ ಮಳೆ