Site icon Vistara News

Video: 62ವರ್ಷಗಳ ನಂತರ ದೆಹಲಿ-ಮುಂಬಯಿಗೆ ಒಂದೇ ಸಲ ಕಾಲಿಟ್ಟ ಮುಂಗಾರು; ನದಿನೀರಲ್ಲಿ ಕೊಚ್ಚಿಹೋದ ಕಾರು

Car Washed Away in River And Water in Train

#image_title

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ವಾಣಿಜ್ಯ ನಗರಿ ಮುಂಬಯಿಗೆ ನೈಋತ್ಯ ಮುಂಗಾರು (Southwest Monsoon) ಪ್ರವೇಶವಾಗಿದೆ. ಮುಂಬಯಿಗೆ ಮಾನ್ಸೂನ್​ ಎರಡುವಾರ ತಡವಾಗಿ ಕಾಲಿಟ್ಟಿದ್ದರೆ, ದೆಹಲಿಗೆ ನಿಗದಿಗಿಂತಲೂ ಎರಡು ದಿನ ಮೊದಲೇ ಪ್ರವೇಶಿಸಿದೆ. ಹೀಗೆ ದೆಹಲಿ ಮತ್ತು ಮುಂಬಯಿಗೆ ಮುಂಗಾರು ಒಟ್ಟಿಗೇ ಪ್ರವೇಶ (Monsoon Arrival) ಮಾಡಿದ್ದು 62ವರ್ಷಗಳಲ್ಲಿ ಇದೇ ಮೊದಲಾಗಿದೆ. ಈ ಹಿಂದೆ 1961ರಲ್ಲಿ ಹೀಗೆ ಎರಡೂ ನಗರಗಳಿಗೆ ಮುಂಗಾರು ಒಟ್ಟಿಗೇ ಬಂದಿತ್ತು. ಇದೊಂದು ಅಪರೂಪದ ಪ್ರಕರಣ ಎಂದು ಭಾರತೀಯ ಹವಾಮಾನ ಇಲಾಖೆ (Indian Meteorological Department) ತಿಳಿಸಿದೆ. ಮುಂಬಯಿಯಲ್ಲಿ ನಿನ್ನೆಯಿಂದಲೂ ಮುಂಗಾರು ಮಳೆ (Rain News) ಅಬ್ಬರಿಸುತ್ತಲೇ ಇದೆ. ಅದರ ಪರಿಣಾಮವಾಗಿ ರಸ್ತೆಗಳು ಜಲಾವೃತಗೊಂಡಿವೆ. ಎಲ್ಲೆಲ್ಲೂ ನೀರು. ನಿನ್ನೆ ಕಾಲೇಜು ವಿದ್ಯಾರ್ಥಿಗಳಿದ್ದ ಬಸ್​ವೊಂದು ನೀರಿನಲ್ಲಿ ಸಿಲುಕಿ, ಅದರಲ್ಲಿದ್ದ ವಿದ್ಯಾರ್ಥಿಗಳನ್ನು ಕಿಟಕಿ ಮೂಲಕ ಹೊರಗೆ ಎಳೆಯಲಾಗಿತ್ತು. ಅದರ ವಿಡಿಯೊ ವೈರಲ್ (Viral Video) ಆಗಿತ್ತು.

ಹಾಗೇ, ಇಂದು ರೈಲು ಸೋರುತ್ತಿರುವ ಫೋಟೊ-ವಿಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಮುಂಬಯಿ-ಇಂದೋರ್ ಆವಂತಿಕಾ ಎಕ್ಸ್​​ಪ್ರೆಸ್​ ರೈಲಿನಲ್ಲಿ ಮಳೆ ನೀರು ಒಳಗೇ ಸುರಿಯುತ್ತಿದೆ. ರೈಲಿನ ಎರಡೇ ಎಸಿ ಕೋಚ್​​ನಲ್ಲಿ ಈ ಅವಾಂತರವಾಗಿದೆ. ಅಲ್ಲಿರುವ ಹವಾನಿಯಂತ್ರಣ ಯಂತ್ರದ ದ್ವಾರದಿಂದ ಮಳೆನೀರು ರಭಸವಾಗಿಯೇ ಒಳಗೆ ಬರುತ್ತಿದೆ. ಆ ಕೋಚ್​​ನಲ್ಲಿ ವೃದ್ಧರೊಬ್ಬರು ಕುಳಿತಿದ್ದನ್ನೂ ನೋಡಬಹುದು. ಬಳಿಕ ಅದನ್ನು ದುರಸ್ತಿ ಪಡಿಸಿ, ರೈಲೊಳಗೆ ಬಂದಿದ್ದ ನೀರನ್ನೆಲ್ಲ ಸ್ವಚ್ಛಗೊಳಿಸಲಾಗಿದೆ.

ಕಟ್ಟಡದ ಒಂದು ಭಾಗ ಕುಸಿತ
ಇನ್ನು ನಗರದಲ್ಲಿ ಶನಿವಾರದಿಂದ ನಿರಂತರವಾಗಿ ಸುರಿಯುತ್ತಿರುವ ಭರ್ಜರಿ ಮಳೆಯಿಂದಾಗಿ ಹಲವು ಅವಾಂತರಗಳು ಆಗುತ್ತಿವೆ. ಇಲ್ಲಿನ ಘಾಟ್​ಕೋಪಾರ್​ ಎಂಬಲ್ಲಿ ಕಟ್ಟಡವೊಂದರ ಅರ್ಧ ಭಾಗ ಕುಸಿದು ಹಾನಿಯಾಗಿದೆ. ಮುಂಬಯಿಯ ಪೂರ್ವ ವಲಯದಲ್ಲಿರುವ ಇರುವ ಘಾಟ್​ಕೋಪಾರ್​ ಒಂದು ಐಷಾರಾಮಿ ಏರಿಯಾ. ಅಲ್ಲೇ ಕಟ್ಟಡ ಕುಸಿದಿದ್ದು, ಅವಶೇಷಗಳಡಿ ಮೂವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್​ಡಿಆರ್​ಎಫ್​) ಸದಸ್ಯರು ಸ್ಥಳಕ್ಕೆ ಆಗಮಿಸಿದ್ದಾರೆ.

ಕಟ್ಟಡ ಕುಸಿದುಬಿದ್ದಿರುವುದು

ಹರ್ಯಾಣದಲ್ಲಿ ಕೊಚ್ಚಿ ಹೋದ ಕಾರು

ಹರ್ಯಾಣದಲ್ಲೂ ವಿಪರೀತ ಮಳೆಯಾಗುತ್ತಿದೆ. ಇಲ್ಲಿನ ಪಂಚಕುಲಾದಲ್ಲಿ ಕಾರು ನದಿನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಮಹಿಳೆಯೊಬ್ಬರು ಪಂಚಕುಲಾದ ಘಗ್ಗರ್ ಕಾಲುವೆ ಬಳಿ ಇರುವ ದೇವಸ್ಥಾನಕ್ಕೆ ಕಾರು ತೆಗೆದುಕೊಂಡು ಹೋಗಿದ್ದರು. ಘಗ್ಗರ್​ ಸೇತುವೆಯ ಅಡಿಯ ಕಂಬಕ್ಕೆ ಮಹಿಳೆಯ ಕಾರು ಡಿಕ್ಕಿ ಹೊಡೆದಿದೆ. ಈ ವೇಳೆ ಆಕೆಯ ಆಯ ತಪ್ಪಿದೆ. ಅಲ್ಲಿ ನದಿ ನೀರು ಕೂಡ ಜೋರಾಗಿ, ಕೆಂಪು ಬಣ್ಣಕ್ಕೆ ತಿರುಗಿ ರಭಸದಿಂದ ಹರಿಯುತ್ತಿತ್ತು. ಹೀಗಾಗಿ ಮಹಿಳೆ ಕಾರು ಕೊಚ್ಚಿಕೊಂಡು ಹೋಗಿದೆ. ಮಹಿಳೆಯೂ ಕಾರಿನಲ್ಲಿಯೇ ಇದ್ದು, ಅಪಾಯಕ್ಕೆ ಸಿಲುಕಿದ್ದರು. ಇದನ್ನು ನೋಡಿದ ಸ್ಥಳೀಯರು, ಈಜುಗಾರರು ಕೂಡಲೇ ಕಾರನ್ನು ಹಿಡಿದು ಮಹಿಳೆಯನ್ನು ರಕ್ಷಿಸಿದ್ದಾರೆ. ಈ ಭಯಾನಕ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿ, ಸೋಷಿಯಲ್ ಮೀಡಿಯಾಗಳಲ್ಲೂ ಹರಿದಾಡುತ್ತಿದೆ.

Exit mobile version