Site icon Vistara News

Early Mansoon: ಈ ಬಾರಿ ಒಂದು ವಾರ ಮೊದಲೇ ಮುಂಗಾರು ಪ್ರವೇಶ?

Southwest Monsoon

ದೆಹಲಿ: ದೇಶದ ದಕ್ಷಿಣ ರಾಜ್ಯಗಳಲ್ಲಿ ಸೈಕ್ಲೋನ್‌ ಅಸಾನಿ ಪ್ರಭಾವದಿಂದ ಮಳೆಯಾಗುತ್ತಿದ್ದರೂ ಉತ್ತರ ಭಾರತದ ರಾಜ್ಯಗಳಲ್ಲಿ ವಿಪರೀತ ತಾಪಮಾನವಿದೆ. ಉಷ್ಣ ಅಲೆಯಿಂದ ಜನರು ಸಂಕಷ್ಟಕ್ಕೀಡಾಗಿದ್ದಾರೆ. ದೆಹಲಿಯ ಹಲವು ಭಾಗಗಳಲ್ಲಿ ಉಷ್ಣ ಅಲೆ ಹೆಚ್ಚಿರುವ ಕಾರಣ  ಇಂದು ಮತ್ತು ನಾಳೆ (ಮೇ 13 ಮತ್ತು 14) ಹಳದಿ ಅಲರ್ಟ್‌ ಘೋಷಿಸಲಾಗಿದೆ. ದೆಹಲಿಯಲ್ಲಿ ಉಷ್ಣತೆ ಈಗಾಗಲೇ 45 ಡಿಗ್ರಿ ಸೆಲ್ಸಿಯಸ್‌ ತಲುಪಿದೆ. ಭಾನುವಾರ ಮತ್ತೆ 46-47 ಡಿಗ್ರಿ ಸೆಲ್ಸಿಯಸ್‌ ತಲುಪುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.  ರಾಜಸ್ಥಾನದಲ್ಲಂತೂ ಗರಿಷ್ಠ ಉಷ್ಣತೆ 48 ಡಿಗ್ರಿ ಸೆಲ್ಸಿಯಸ್‌ವರೆಗೂ ತಲುಪಿತ್ತು. ರಾಜಸ್ಥಾನದ ಸುಮಾರು 29 ನಗರಗಳು, ಹರ್ಯಾಣ, ಗುಜರಾತ್, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ 44 ಡಿಗ್ರಿ ಸೆಲ್ಸಿಯಸ್‌ಗಳಷ್ಟು ಉಷ್ಣತೆಯಿದೆ.

ಸದ್ಯ ದೇಶದಲ್ಲಿ ಬಿರುಬೇಸಿಗೆ ಕಾಲವಿದ್ದರೂ ಇನ್ನೊಂದೆರಡು ದಿನಗಳಲ್ಲೇ ನೈಋತ್ಯ ಮಾನ್ಸೂನ್‌ ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪವನ್ನು ಪ್ರವೇಶಿಸುವ ಸಾಧ್ಯತೆ ದಟ್ಟವಾಗಿದೆ ಎಂದೂ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಂದರೆ ಈ ಬಾರಿ ಒಂದು ವಾರ ಮೊದಲೇ ನೈಋತ್ಯ ಮಾನ್ಸೂನ್‌ ಭಾರತವನ್ನು ಪ್ರವೇಶಿಸಲಿದೆ. ಸಾಮಾನ್ಯವಾಗಿ ಪ್ರತಿವರ್ಷ ಮೇ 21-22ರ ಸುಮಾರಿಗೆ ನೈಋತ್ಯ ಮಾನ್ಸೂನ್‌ ಬರುತ್ತಿತ್ತು. ಆದರೆ ಈ ಸಲ ಮೇ 15ಕ್ಕೆ ಆಗಮಿಸಲಿದೆ ಎಂದು ಹೇಳಿದೆ. ಸಾಮಾನ್ಯವಾಗಿ ಪ್ರತಿವರ್ಷ ನೈಋತ್ಯ ಮುಂಗಾರು ಕೇರಳಕ್ಕೆ ಜೂನ್‌ 1ರಂದು ಪ್ರವೇಶಿಸುತ್ತದೆ. ಆದರೆ ಈ ಸಲ ಒಂದು ವಾರ ಬೇಗ ಬರಬಹುದು ಎಂದೂ ಹೇಳಲಾಗಿದೆ.

ಇದನ್ನೂ ಓದಿ | Explainer: ಆಹಾರ ವಸ್ತುಗಳ ದರ ಏರಿಕೆ ಮುಂದುವರಿಯಲಿದೆಯೇ?

ಸದ್ಯ ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಕ್ಕೆ ಮಾನ್ಸೂನ್‌ ಪ್ರವೇಶದ ಹಂತ ಇರುವುದರಿಂದ ಹವಾಮಾನದಲ್ಲಿ ಬದಲಾವಣೆಯಾಗುತ್ತಿದೆ. ಇದರಿಂದಾಗಿ ಅಂಡಮಾನ್‌ ಮತ್ತು ನಿಕೋಬಾರ್‌, ಕೇರಳದಲ್ಲಿ ಮುಂದಿನ ಐದು ದಿನಗಳ ಕಾಲ ಭಾರಿ ಮಳೆಯಾಗಬಹುದು. ಅದರೊಂದಿಗೆ ತಮಿಳುನಾಡು, ಪುದುಚೇರಿ, ಕರೈಕಲ್‌ಗಳಲ್ಲಿ ಮುಂದಿನ 48ಗಂಟೆಗಳ ಕಾಲ ಮಳೆ ಬೀಳಬಹುದು. ಈಶಾನ್ಯ ರಾಜ್ಯಗಳಾದ ಅಸ್ಸಾಂ, ಅರುಣಾಚಲ ಪ್ರದೇಶ, ತ್ರಿಪುರ, ನಾಗಾಲ್ಯಾಂಡ್‌, ಮಣಿಪುರ ಮತ್ತು ಮೇಘಾಲಯಗಳಲ್ಲಿ ಕೂಡ ಮೇ 17ರವರೆಗೆ ವ್ಯಾಪಕ ಮಳೆಯಾಗಲಿದೆ ಎಂದೂ ಹವಾಮಾನ ಇಲಾಖೆ ತಜ್ಞರು ಹೇಳಿದ್ದಾರೆ.

ನೈಋತ್ಯ ಮಾನ್ಸೂನ್‌ ಪ್ರವೇಶದೊಂದಿಗೆ ದೇಶದಲ್ಲಿ ಮಳೆಗಾಲವೂ ಶುರುವಾಗಲಿದೆ. ಕೃಷಿ ಚಟುವಟಿಕೆಗಳೂ ಗರಿಗೆದರುತ್ತವೆ. ಹಾಗಾಗಿ ಈ ಮುಂಗಾರು ಸಮಯಕ್ಕೆ ಸರಿಯಾಗಿ ಬರುವುದು ತುಂಬ ಮುಖ್ಯ. ಅಂಡಮಾನ್‌ ನಿಕೋಬಾರ್‌ಗೆ ಸಮಯಕ್ಕೆ ಸರಿಯಾಗಿ ಮುಂಗಾರು ಪ್ರವೇಶಿಸಿದರೂ ಕೇರಳಕ್ಕೆ ತಡವಾಗಿ ಪ್ರವೇಶಿಸುವುದೂ ಇದೆ. ಆದರೂ ಈ ಬಾರಿ ಒಂದು ವಾರ ಪೂರ್ವದಲ್ಲಿ ಮಾನ್ಸೂನ್‌ ಆಗಮನ ಆಗುತ್ತಿರುವುದರಿಂದ ಕೇರಳಕ್ಕೂ ಒಂದು ವಾರ ಮೊದಲೇ ಬರುವ ನಿರೀಕ್ಷೆ ಹೆಚ್ಚಾಗಿದೆ.

ಇದನ್ನೂ ಓದಿ | Bangalore Rain | ಬೆಂಗಳೂರಲ್ಲಿ ನಿನ್ನೆ ರಾತ್ರಿಯಿಂದಲೂ ಮಳೆ; 22 ವರ್ಷಗಳಲ್ಲಿ ಮೇನಲ್ಲಿ ಇಷ್ಟು ಚಳಿ ಆಗಿರಲಿಲ್ಲ!

Exit mobile version