ಈ ಬಾರಿ ಕೇರಳಕ್ಕೆ ನೈಋತ್ಯ ಮುಂಗಾರು (Southwest Monsoon) ಪ್ರವೇಶ ಸ್ವಲ್ಪ ತಡವಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಇಂದು ತಿಳಿಸಿದೆ. ಸಾಮಾನ್ಯವಾಗಿ ಜೂನ್ 1ರ ಹೊತ್ತಿಗೆಲ್ಲ ಕೇರಳಕ್ಕೆ ನೈಋತ್ಯ ಮುಂಗಾರು ಪ್ರವೇಶ ಮಾಡುತ್ತದೆ. ಈ ಸಲವೂ ಕೂಡ ಜೂ.1ಕ್ಕೆಲ್ಲ ಮುಂಗಾರು ಆಗಮನ ಆಗಬಹುದು ಎಂದು ಮೊದಲು ಐಎಂಡಿ ತಿಳಿಸಿತ್ತು. ಆದರೆ ಇಂದು ಹೇಳಿಕೆ ಬಿಡುಗಡೆ ಮಾಡಿ ‘ನೈಋತ್ಯ ಮುಂಗಾರು ವಿಳಂಬವಾಗಬಹುದು’ ಎಂದು ಹೇಳಿದೆ.
ಈ ಸಲ ನೈಋತ್ಯ ಮುಂಗಾರು ಮೇ 22ಕ್ಕೆ ಅಂಡಮಾನ್ ನಿಕೋಬಾರ್ ಪ್ರವೇಶ ಮಾಡುತ್ತದೆ. ಅದಾದ ಮೇಲೆ ತುಸು ದುರ್ಬಲಗೊಂಡು ಜೂ.4ರ ಹೊತ್ತಿಗೆ ಕೇರಳ ಪ್ರವೇಶ ಮಾಡುತ್ತದೆ ಎನ್ನಲಾಗಿದೆ. ಕಳೆದ ವರ್ಷ ಮೇ 16ರ ಹೊತ್ತಿಗೆ ಅಂಡಮಾನ್-ನಿಕೋಬಾರ್ ಪ್ರವೇಶ ಮಾಡಿದ್ದ ನೈಋತ್ಯ ಮಾನ್ಸೂನ್ ಮೇ 29ರ ಹೊತ್ತಿಗೆ ಕೇರಳಕ್ಕೆ ಕಾಲಿಟ್ಟಿತ್ತು. ಹಾಗೇ, 2021ರಲ್ಲಿ ಜೂನ್ 3ರಂದು ಮತ್ತು 2020ರಲ್ಲಿ ಜೂನ್ 1ರಂದು ಮುಂಗಾರು ಆಗಮನವಾಗಿತ್ತು. ದೇಶದ ಕೃಷಿ ಚಟುವಟಿಕೆಗಳು ಈ ನೈಋತ್ಯ ಮುಂಗಾರು ಹೊತ್ತು ತರುವ ಮಳೆಯ ಮೇಲೆ ಅವಲಂಬಿತವಾಗಿದ್ದು, ಇದು ತಡವಾದಷ್ಟೂ ಕೃಷಿಕರಿಗೆ ಸಮಸ್ಯೆ ಆಗಲಿದೆ.
ಇದನ್ನೂ ಓದಿ: Monsoon: ಜೂನ್ ಮೊದಲ ವಾರ ಕೇರಳಕ್ಕೆ ಕಾಲಿಡಲಿದೆ ಮುಂಗಾರು
ಮುಂಗಾರು ಪ್ರವೇಶಕ್ಕೆ ಮುನ್ನವೇ ದೇಶದ ವಿವಿಧೆಡೆ ಗಾಳಿ-ಗುಡುಗು-ಮಳೆ ಶುರುವಾಗಲಿದೆ. ಮುಂದಿನ ಮೂರು ದಿನಗಳಲ್ಲಿ ದೆಹಲಿ, ಹರ್ಯಾಣ, ಪಶ್ಚಿಮ ಉತ್ತರ ಪ್ರದೇಶ, ರಾಜಸ್ಥಾನಗಳಲ್ಲಿ ಧೂಳು ಸಹಿತ ಬಿರುಗಾಳಿ ಏಳಬಹುದು. ಇನ್ನೆರಡು ದಿನಗಳಲ್ಲಿ ಇದೇ ಸನ್ನಿವೇಶ ಮಧ್ಯಪ್ರದೇಶ ಮತ್ತು ವಿದರ್ಭಾಗಳಲ್ಲಿ ಕಾಣಸಿಗುತ್ತದೆ. ಇನ್ನು ಐದು ದಿನಗಳಲ್ಲಿ ಈಶಾನ್ಯ ಭಾರತದಲ್ಲಿ ಸಾಧಾರಣ ಮಳೆಯಾಗಬಹುದು. ಮೇ 19, 20ರಂದು ಅರುಣಾಚಲ ಪ್ರದೇಶದ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗಲಿದೆ ಮತ್ತು ಅಸ್ಸಾಂ, ಮೇಘಾಲಯ, ಮಣಿಪುರ, ಮಿಝೋರಾಂ ಮತ್ತು ತ್ರಿಪುರಾಗಳಲ್ಲಿ ಮೇ 16ಮತ್ತು 20ರಂದು ಭಾರಿ ಮಳೆಯಾಗಲಿದೆ’ ಎಂದೂ ಹವಾಮಾನ ಇಲಾಖೆ ಮಾಹಿತಿ ನೀಡಿದೆ.