Site icon Vistara News

Nitasha Kaul : ಬ್ರಿಟನ್​ ಲೇಖಕಿಯನ್ನು ಏರ್​ಪೋರ್ಟ್​​ನಿಂದಲೇ ವಾಪಸ್​ ಕಳಿಸಿದ್ದಕ್ಕೆ ಕಾರಣ ಕೊಟ್ಟ ಕೇಂದ್ರ ಸರ್ಕಾರ

Nitasha Kaul

ನವದೆಹಲಿ: ಕಾಶ್ಮೀರ ಮೂಲದ ಬ್ರಿಟನ್​ ಪ್ರಜೆ ನಿತಾಶಾ ಕೌಲ್ (Nitasha Kaul ) ಅವರನ್ನು ಬೆಂಗಳೂರು ವಿಮಾನ ನಿಲ್ದಾಣದಿಂದಲೇ ವಾಪಸ್​ ಕಳುಹಿಸಿರುವ ತನ್ನ ನಿರ್ಧಾರವನ್ನು ವಿದೇಶಾಂಗ ಸಚಿವಾಲಯ ಸಮರ್ಥಿಸಿಕೊಂಡಿದ್ದು ಅದಕ್ಕೆ ಕಾರಣವನ್ನು ಇದೀಗ ಬಹಿರಂಗ ಮಾಡಿದೆ. ವಿದೇಶಿ ಪ್ರಜೆಗಳ ಭಾರತೀಯ ಪ್ರವೇಶವು ದೇಶದ ಸಾರ್ವಭೌಮ ನಿರ್ಧಾರ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.

ವಿದೇಶಾಂಗ ಸಚಿವಾಲಯದ ವಾರದ ಮಾಧ್ಯಮಗೋಷ್ಠಿಯಲ್ಲಿ, ಅಧಿಕೃತ ವಕ್ತಾರ ರಣಧೀರ್ ಜೈಸ್ವಾಲ್, “ಈ ನಿರ್ದಿಷ್ಟ ಬ್ರಿಟನ್​ ಪ್ರಜೆ (ನಿತಾಶಾ ಕೌಲ್) ಫೆಬ್ರವರಿ 22 ರಂದು ಭಾರತಕ್ಕೆ ಬಂದರು. ನಿಮಗೆ ತಿಳಿದಿರುವಂತೆ, ನಮ್ಮ ದೇಶಕ್ಕೆ ವಿದೇಶಿ ಪ್ರಜೆಗಳ ಪ್ರವೇಶವು ಸಾರ್ವಭೌಮ ನಿರ್ಧಾರವಾಗಿದೆ …” ಎಂದು ಹೇಳಿದ್ದಾರೆ.

ಯುಕೆ ಮೂಲದ ಭಾರತೀಯ ಮೂಲದ ಶಿಕ್ಷಣತಜ್ಞೆ ಮತ್ತು ಪ್ರಾಧ್ಯಾಪಕಿ ನಿತಾಶಾ ಕೌಲ್ ಅವರು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಕೂಡಲೇ ಭಾರತದಿಂದ ಗಡೀಪಾರು ಮಾಡಲಾಗಿತ್ತು. ಸಾಂವಿಧಾನಿಕ ಹಕ್ಕುಗಳ ಕುರಿತು ಎರಡು ದಿನಗಳ ಸಮಾವೇಶಕ್ಕೆ ಕರ್ನಾಟಕ ಸರ್ಕಾರವು ತನ್ನನ್ನು ಆಹ್ವಾನಿಸಿದೆ ಎಂದು ಕೌಲ್ ಹೇಳಿಕೊಂಡಿದ್ದಾರೆ.

ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಮೌಲ್ಯಗಳ ಬಗ್ಗೆ ಮಾತನಾಡಬೇಕಿದದ್ದ ನನಗೆ ಪ್ರವೇಶ ನಿರಾಕರಿಸಲಾಗಿದೆ. ಕರ್ನಾಟಕ ಸರ್ಕಾರದ ಗೌರವಾನ್ವಿತ ಪ್ರತಿನಿಧಿಯಾಗಿ ನನ್ನನ್ನು ಸಮ್ಮೇಳನಕ್ಕೆ ಆಹ್ವಾನಿಸಲಾಗಿತ್ತು. ಆದರೆ ಕೇಂದ್ರ ಸರ್ಕಾರವು ನನಗೆ ಪ್ರವೇಶವನ್ನು ನಿರಾಕರಿಸಿತು. ನನ್ನ ಎಲ್ಲಾ ದಾಖಲೆಗಳು ಅಧಿಕೃತ ಮತ್ತು ಪ್ರಸ್ತುತ (ಯುಕೆ ಪಾಸ್ಪೋರ್ಟ್ ಮತ್ತು ಒಸಿಐ) ” ಎಂದು ಕೌಲ್ ಫೆಬ್ರವರಿ 25 ರಂದು ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದರು.

ನಾವು ಏನನ್ನೂ ಮಾಡಲು ಸಾಧ್ಯವಿಲ್ಲ. ದೆಹಲಿಯಿಂದ ಆದೇಶಗಳನ್ನು ಬಂದಿದೆ ಎಂದು ವಲಸೆ ಅಧಿಕಾರಿಗಳು ತಿಳಿಸಿದ್ದರು. ಪ್ರವೇಶ ನಿರಾಕರಣೆ ಕುರಿತು ನನಗೆ ಯಾವುದೇ ಕಾರಣ ನೀಡಿಲ್ಲ. ನನ್ನ ಪ್ರಯಾಣದ ವ್ಯವಸ್ಥೆಯನ್ನು ಕರ್ನಾಟಕ ಸರ್ಕಾರ ಮಾಡಿತ್ತು. ನನ್ನ ಬಳಿ ಅಧಿಕೃತ ಪತ್ರವಿತ್ತು. ನನ್ನನ್ನು ಪ್ರವೇಶಿಸಲು ಅನುಮತಿಸುವುದಿಲ್ಲ ಎಂದು ದೆಹಲಿಯಿಂದ ನನಗೆ ಮುಂಚಿತವಾಗಿ ಯಾವುದೇ ಸೂಚನೆ ಅಥವಾ ಮಾಹಿತಿ ಬಂದಿಲ್ಲ” ಎಂದು ಕೌಲ್ ತಮ್ಮ ಪೋಸ್ಟ್​​ನಲ್ಲಿ ತಿಳಿಸಿದ್ದರು.

ಇದನ್ನೂ ಓದಿ : GDP Growth : ನಿರೀಕ್ಷೆಗೂ ಮೀರಿ ಭಾರತದ ಜಿಡಿಪಿ ಬೆಳವಣಿಗೆ; ಕಳೆದ ತ್ರೈಮಾಸಿಕದಲ್ಲಿ ಭರ್ಜರಿ ಪ್ರಗತಿ

ನಿತಾಶಾ ಕೌಲ್ ಅವರನ್ನು ಆಹ್ವಾನಿಸಿದ ಕರ್ನಾಟಕದ ಕಾಂಗ್ರೆಸ್ ಸರ್ಕಾರವನ್ನು ಪ್ರಶ್ನಿಸಿದ್ದ ವಿಶ್ವ ಹಿಂದೂ ಪರಿಷದ್​ ಮುಖಂಡ ಗಿರೀಶ್ ಭಾರದ್ವಾಜ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದು ನಿತಾಶಾ ಕೌಲ್ ಅವರ ಒಸಿಐ ಕಾರ್ಡ್ ಅನ್ನು ರದ್ದುಗೊಳಿಸುವಂತೆ ಸಚಿವಾಲಯವನ್ನು ಕೋರಿದ್ದರು. “ನಮ್ಮ ದೇಶದ ಹಿತಾಸಕ್ತಿಗಳಿಗೆ ವಿರುದ್ಧವಾದ ದುರುದ್ದೇಶಪೂರಿತ ಕಾರ್ಯಸೂಚಿಯೊಂದಿಗೆ ಅವರು ಆಗಾಗ್ಗೆ ಭಾರತಕ್ಕೆ ಭೇಟಿ ನೀಡುತ್ತಾರೆ. ಭಾರತದಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳಿಗೆ ಡಾ. ಕೌಲ್ ಅವರನ್ನು ಅತಿಥಿಯಾಗಿ ಆಹ್ವಾನಿಸದಂತೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಬೇಕು” ಎಂದು ಭಾರದ್ವಾಜ್ ಬರೆದಿದ್ದಾರೆ.

ನಿತಾಶಾ ವಾಪಸ್;‌ ಬಿಜೆಪಿ-ಕಾಂಗ್ರೆಸ್‌ ವಾಕ್ಸಮರ

ಬೆಂಗಳೂರಿನಲ್ಲಿ ನಡೆದ ಸಂವಿಧಾನ ಮತ್ತು ರಾಷ್ಟ್ರೀಯ ಏಕತಾ ಸಮ್ಮೇಳನದಲ್ಲಿ ಭಾಗವಹಿಸಲು ಆಗಮಿಸಿದ್ದ ಲಂಡನ್‌ ಮೂಲದ ಲೇಖಕಿ ನಿತಾಶಾ ಕೌಲ್ (Nitasha Kaul) ಅವರನ್ನು ವಲಸೆ ಅಧಿಕಾರಿಗಳು (Immigration Officers) ಬೆಂಗಳೂರು ವಿಮಾನ ನಿಲ್ದಾಣದಿಂದ ವಾಪಸ್‌ ಕಳುಹಿಸಿದ ಬೆನ್ನಲ್ಲೇ ಬಿಜೆಪಿ ಹಾಗೂ ಕಾಂಗ್ರೆಸ್‌ ನಾಯಕರ ಮಧ್ಯೆ ವಾಕ್ಸಮರ ಶುರುವಾಗಿದೆ. ಭಾರತ ವಿರೋಧಿ ಮನಸ್ಥಿತಿಯ ಲೇಖಕಿಯನ್ನು ವಾಪಸ್‌ ಕಳುಹಿಸಲಾಗಿದೆ ಎಂದ ಬಿಜೆಪಿ (BJP) ಹೇಳಿದರೆ, ಕೇಂದ್ರ ಸರ್ಕಾರವು ರಾಜ್ಯಕ್ಕೆ ಮಾಡಿದ ಅವಮಾನ ಎಂದು ಕಾಂಗ್ರೆಸ್‌ (Congress) ದೂರಿದೆ.

“ನಿತಾಶಾ ಕೌಲ್‌ ಅವರು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಆದರೆ, ಸಮರ್ಪಕವಾದ ಕಾರಣ ನೀಡದೆ ಅವರನ್ನು ವಾಪಸ್‌ ಕಳುಹಿಸಲಾಗಿದೆ. ಭಾರತ ಮೂಲದ ಲೇಖಕಿಯನ್ನು ಒಕ್ಕೂಟ ವ್ಯವಸ್ಥೆಯ ರಾಜ್ಯ ಸರ್ಕಾರವೊಂದು ಆಹ್ವಾನಿಸಿದೆ. ಆದರೆ, ಅವರನ್ನು ವಾಪಸ್‌ ಕಳುಹಿಸಿರುವುದು ಕೇಂದ್ರ ಸರ್ಕಾರವು ರಾಜ್ಯಕ್ಕೆ ಮಾಡಿದ ಅವಮಾನವಾಗಿದೆ. ದೇಶವೀಗ ನಿರಂಕುಶ ಪ್ರಭುತ್ವದಲ್ಲಿದೆಯೇ? ಸಂವಿಧಾನದ ಬಗ್ಗೆ ಚರ್ಚಿಸುವ ಅಭಿವ್ಯಕ್ತಿ ಸ್ವಾತಂತ್ರ್ಯವೂ ದೇಶದಲ್ಲಿಲ್ಲವೇ” ಎಂದು ಕಾಂಗ್ರೆಸ್‌ ಶಾಸಕ ರಿಜ್ವಾನ್‌ ಅರ್ಷದ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಿರುಗೇಟು ಕೊಟ್ಟ ಬಿಜೆಪಿ

ಕಾಂಗ್ರೆಸ್‌ ಆರೋಪಗಳಿಗೆ ಬಿಜೆಪಿ ತಿರುಗೇಟು ನೀಡಿದೆ. “ಸಿದ್ದರಾಮಯ್ಯನವರಿಗೆ ನಾಚಿಕೆ ಇಲ್ಲವೇ? ನೀವು ಸಂವಿಧಾನಕ್ಕೆ ಸವಾಲು ಹಾಕಲು, ಭಾರತದ ಏಕತೆ ಮತ್ತು ಸಮಗ್ರತೆಗೆ ಬೆದರಿಕೆ ಹಾಕಲು ಪ್ರಯತ್ನಿಸುತ್ತಿದ್ದೀರಾ? ಕಾಂಗ್ರೆಸ್ ಪಕ್ಷವು ತನ್ನ ವಿಭಜಕ ಅಜೆಂಡಾಗಳಿಗೆ ನೆಲವನ್ನು ಸಿದ್ಧಪಡಿಸಲು ಕರ್ನಾಟಕವನ್ನು ತನ್ನ ಪ್ರಯೋಗಾಲಯವನ್ನಾಗಿ ಬಳಸಿಕೊಳ್ಳುತ್ತಿದೆʼ ಇದು ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಯನ್ನು ದುರ್ಬಲಗೊಳಿಸುವುದು ಈಗ ಸ್ಪಷ್ಟವಾಗಿದೆ. ಕರ್ನಾಟಕ ತೆರಿಗೆ ಪಾವತಿದಾರರ ವೆಚ್ಚದಲ್ಲಿ, ಕಾಂಗ್ರೆಸ್ ಸರ್ಕಾರವು ಭಯೋತ್ಪಾದಕ ಸಹಾನುಭೂತಿಗಳು, ನಗರ ನಕ್ಸಲರು, ರಾಷ್ಟ್ರವಿರೋಧಿಗಳು, ಗಲಭೆ ಆಪಾದಿತರಿಗೆ ಮಣೆ ಹಾಸುತ್ತಿದ್ದು, ಚುನಾವಣೆಗೆ ಮುಂಚಿತವಾಗಿ ಭಾರತವನ್ನು ಅಸ್ಥಿರಗೊಳಿಸಲು ಹಣವನ್ನು ಹರಿಸುತ್ತಿದೆʼʼ ಎಂದು ಬಿಜೆಪಿ ಟೀಕಿಸಿದೆ.

Exit mobile version