ಲಖನೌ ಪೊಲೀಸ್ ಸ್ಟೇಶನ್ಗೆ ಆಗಮಿಸಿದ್ದ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು ಅಲ್ಲಿ ಪೊಲೀಸ್ ಸಿಬ್ಬಂದಿ ಕೊಟ್ಟ ಚಹಾ ಸೇವಿಸಲು ನಿರಾಕರಿಸಿದರು. ಅಷ್ಟೇ ಅಲ್ಲ, ‘ಈ ಚಹಾದಲ್ಲಿ ನೀವು ವಿಷ ಹಾಕಿದ್ದರೆ, ನಾನೇನು ಮಾಡಬೇಕು?’ ಎಂಬ ವ್ಯಂಗ್ಯಭರಿತ ಮಾತುಗಳನ್ನಾಡಿದ್ದಾರೆ. ‘ನಾನಿಲ್ಲಿ ಚಹಾ ಕುಡಿಯುವುದಿಲ್ಲ. ನನಗೆ ಬೇಕಾದ ಟೀ ನಾನು ಹೊರಗಿನಿಂದ ತರಿಸಿಕೊಳ್ಳುತ್ತೇನೆ. ನೀವು ವಿಷ ಹಾಕಿರಲ್ಲ ಎಂಬ ನಂಬಿಕೆ ನನಗೆ ಇಲ್ಲ. ನಾನು ಗಂಭೀರವಾಗಿ ಹೇಳುತ್ತಿದ್ದೇನೆ, ನನಗೆ ನಿಮ್ಮ ಮೇಲೆ ಕಿಂಚಿತ್ತೂ ನಂಬಿಕೆಯಿಲ್ಲ’ ಎಂದು ಅಖಿಲೇಶ್ ಯಾದವ್ ಪೊಲಿಸರಿಗೆ ಹೇಳಿದ ವಿಡಿಯೊ ವೈರಲ್ ಆಗಿದೆ. ಅವರು ತಮ್ಮೊಂದಿಗೆ ಬಂದಿದ್ದ ಪಕ್ಷದ ಕಾರ್ಯಕರ್ತನೊಬ್ಬನಿಗೆ ಹೇಳಿ ಚಹಾ ತರಿಸಿಕೊಂಡು ಕುಡಿದಿದ್ದಾರೆ.
ಸಮಾಜವಾದಿ ಪಕ್ಷದ ಸಾಮಾಜಿಕ ಜಾಲತಾಣ ವಿಭಾಗದಲ್ಲಿ ಕೆಲಸ ಮಾಡುವ ಜಗನ್ ಅಗರ್ವಾಲ್ ಅವರು ಬಿಜೆಪಿ ನಾಯಕರು ಮತ್ತು ಹಲವು ಪತ್ರಕರ್ತರ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ ಎಂದು ಬಿಜೆಪಿ ಐಟಿ ಸೆಲ್ ಕಾರ್ಯಕರ್ತೆ ರಿಚಾ ರಜಪೂತ್ ದೂರು ನೀಡಿದ್ದರು. ಅಷ್ಟೇ ಅಲ್ಲ, ಅತ್ಯಾಚಾರ ಮಾಡುತ್ತೇವೆ ಎಂದು ಜಗನ್ ಕಡೆಯವರಿಂದ ಕರೆ ಬರುತ್ತದೆ ಎಂದೂ ಹೇಳಿದ್ದರು. ಹೀಗಾಗಿ ಜಗನ್ ಅಗರ್ವಾಲ್ರನ್ನು ಲಖನೌ ಪೊಲೀಸರು ಬಂಧಿಸಿದ್ದರು. ಇದನ್ನು ವಿರೋಧಿಸಿ ಸಮಾಜವಾದಿ ಪಕ್ಷದ ನೂರಾರು ಕಾರ್ಯಕರ್ತರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲೇ ಅಖಿಲೇಶ್ ಯಾದವ್ ಅಲ್ಲಿಗೆ ಆಗಮಿಸಿದ್ದರು.
ಹೀಗೆ ಅಖಿಲೇಶ್ ಯಾದವ್ ಠಾಣೆಗೆ ಆಗಮಿಸಿದ ಕೆಲವು ಹೊತ್ತಿನ ಬಳಿಕ ಸಮಾಜವಾದಿ ಪಕ್ಷದ ಟ್ವಿಟರ್ ಖಾತೆಯಲ್ಲಿ ವಿಡಿಯೊವೊಂದು ಶೇರ್ ಆಗಿತ್ತು, ‘ನಾವಿಲ್ಲಿ ಏನೋ ಒಂದು ದೂರು ಕೊಡಲು ಬಂದಿದ್ದೇವೆ. ಆದರೆ ಒಬ್ಬರೂ ನಮ್ಮನ್ನು ವಿಚಾರಿಸಿಕೊಳ್ಳುತ್ತಿಲ್ಲ. ಇಲ್ಲಿ ಹಿರಿಯ ಅಧಿಕಾರಿಗಳು ಯಾರೂ ಇಲ್ಲ ಎಂದು‘ ಕ್ಯಾಪ್ಷನ್ ಬರೆಯಲಾಗಿತ್ತು. ಅದಾದ ಬಳಿಕ ಅಲ್ಲಿಗೆ ಹಿರಿಯ ಅಧಿಕಾರಿಗಳು ಬಂದಿದ್ದಾರೆ. ಹಾಗೇ, ಅಖಿಲೇಶ್ ಯಾದವ್ಗಾಗಿ ಟೀ ಕೂಡ ತರಿಸಿದ್ದರು.
ಇದೇ ವೇಳೆ ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ ನರೇಶ್ ಉತ್ತಮ್ ಪಾಟೀಲ್ ಅವರು ಬಿಜೆಪಿ ಐಟಿ ಸೆಲ್ ಕಾರ್ಯಕರ್ತೆ ರಿಚಾ ವಿರುದ್ಧ ದೂರು ದಾಖಲಿಸಿದ್ದಾರೆ. ರಿಚಾ ಅವರು ಅಖಿಲೇಶ್ ಯಾದವ್ ಪತ್ನಿ ಡಿಂಪಲ್ ಯಾದವ್ಗೆ ಅವಹೇಳನ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಪೊಲೀಸರು ಆ ದೂರನ್ನೂ ಸ್ವೀಕರಿಸಿದ್ದಾರೆ.