Site icon Vistara News

ಜಮ್ಮು-ಕಾಶ್ಮೀರದಲ್ಲಿ ಆರ್ಟಿಕಲ್​ 370 ಇನ್ನೆಂದೂ ಸ್ಥಾಪಿತವಾಗದು ಎಂದ ಗುಲಾಂ ನಬಿ ಆಜಾದ್​

Special Status will never Restored In Kashmir Says Ghulam Nabi Azad

ಶ್ರೀನಗರ: ಕಾಂಗ್ರೆಸ್​​ಗೆ 50 ವರ್ಷಗಳ ಸೇವೆ ಸಲ್ಲಿಸಿ, ಈ ಹೊರಬಿದ್ದಿರುವ ಹಿರಿಯ ನಾಯಕ ಗುಲಾಂ ನಬಿ ಆಜಾದ್​ ಹೊಸ ಪಕ್ಷ ಕಟ್ಟಲು ಸಿದ್ಧತೆ ನಡೆಸುತ್ತಿದ್ದಾರೆ. ಇವರೊಂದು ರಾಷ್ಟ್ರೀಯ ಪಕ್ಷವನ್ನು ಸ್ಥಾಪಿಸುತ್ತಿದ್ದು, ಅದರ ಮೊದಲ ಘಟಕ ಜಮ್ಮು-ಕಾಶ್ಮೀರದಲ್ಲಿ ಪ್ರಾರಂಭವಾಗಲಿದೆ. ಅದಕ್ಕಾಗಿ ಆಜಾದ್ ಜಮ್ಮು-ಕಾಶ್ಮೀರದಲ್ಲಿ ಈಗಾಗಲೇ ಸಾರ್ವಜನಿಕ ಸಭೆಗಳನ್ನು ನಡೆಸುತ್ತ, ಜನರನ್ನು ಸಂಘಟಿಸುವ ಕೆಲಸ ಮಾಡುತ್ತಿದ್ದಾರೆ. ಹಾಗೇ ಇಂದು ಉತ್ತರ ಕಾಶ್ಮೀರದ ಬಾರಾಮುಲ್ಲಾದಲ್ಲಿ ಸಾರ್ವಜನಿಕ ಸಭೆ ನಡೆಸಿದ ಅವರು ‘ಜಮ್ಮು-ಕಾಶ್ಮೀರದಲ್ಲಿ ಕಳೆದ ಎರಡು ವರ್ಷಗಳ ಹಿಂದೆ ರದ್ದುಗೊಂಡ ಆರ್ಟಿಕಲ್​ 370 (ವಿಶೇಷ ಸ್ಥಾನಮಾನ) ಇನ್ನೆಂದೂ ಪುನಃ ಸ್ಥಾಪಿತಗೊಳ್ಳುವುದಿಲ್ಲ’ ಎಂದು ಹೇಳಿದ್ದಾರೆ.

‘2019ರಲ್ಲಿ ಕೇಂದ್ರ ಸರ್ಕಾರ ತೆಗೆದುಹಾಕಿರುವ ಆರ್ಟಿಕಲ್​ 370ನ್ನು ಮತ್ತೆ ಸ್ಥಾಪಿಸುತ್ತೇವೆ ಎಂದು ಜಮ್ಮು-ಕಾಶ್ಮೀರದ ಪ್ರಾದೇಶಿಕ ಪಕ್ಷಗಳು ಇಲ್ಲಿನ ಜನರಿಗೆ ಸುಳ್ಳು ಭರವಸೆ ನೀಡುತ್ತಿವೆ. ಈ ಮೂಲಕ ಮತ ಗಳಿಸುವ ಯತ್ನ ಮಾಡುತ್ತಿವೆ. ಆದರೆ ನಾನು ಎಂದಿಗೂ ಇಂಥ ತಪ್ಪು ಮಾಹಿತಿ ಕೊಡುವುದಿಲ್ಲ. ಮತ ಗಳಿಕೆಗಾಗಿ ಜನರ ದಿಕ್ಕುತಪ್ಪಿಸುವುದಿಲ್ಲ. ಆರ್ಟಿಕಲ್​ 370 ಇನ್ನೆಂದಿಗೂ ಜಮ್ಮು-ಕಾಶ್ಮೀರದಲ್ಲಿ ಜಾರಿಯಾಗುವುದಿಲ್ಲ. ಸಾಧ್ಯವಾಗದ ವಿಷಯಗಳ ಬಗ್ಗೆ ಯಾರೇ ಭರವಸೆಕೊಟ್ಟರೂ ನಂಬಬೇಡಿ. ಯಾಕೆಂದರೆ ಸಂವಿಧಾನದ ಈ ಆರ್ಟಿಕಲ್​ ಇಲ್ಲಿ ಮತ್ತೆ ಜಾರಿಗೊಳಿಸಲು ಸಂಸತ್ತಿನಲ್ಲಿ ಬಹುಮತ ಸಿಗಬೇಕು. ಆದರೆ ಅದಂತೂ ಸಾಧ್ಯವೇ ಇಲ್ಲದ ಮಾತು’ ಎಂದು ಹೇಳಿದ್ದಾರೆ.

ಕಾಂಗ್ರೆಸ್ ವಿರುದ್ಧ ಮಾತನಾಡಿದ ಗುಲಾಂ ನಬಿ ಆಜಾದ್​ ‘ಕಾಂಗ್ರೆಸ್ ಅಧಃಪತನವಾಗುತ್ತಿದೆ. ಪ್ರತಿ ಚುನಾವಣೆಯಲ್ಲೂ ಇದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಆರ್ಟಿಕಲ್​ 370ನ್ನು ಮತ್ತೆ ಜಾರಿಗೊಳಿಸಲು ಆ ಪಕ್ಷಕ್ಕೂ ಬಹುಮತವಿಲ್ಲ. ಕಾಶ್ಮೀರದಲ್ಲಿ ರಾಜಕೀಯವನ್ನು ಶೋಷಣೆ ಮತ್ತು ಸುಳ್ಳಿನ ಪ್ರಚಾರಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಈ ರಾಜಕೀಯ ಶೋಷಣೆ ಇಲ್ಲಿಯವರೆಗೆ ಕಾಶ್ಮೀರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರ ಜೀವ ತೆಗೆದಿದೆ. ಐದು ಲಕ್ಷಗಳಷ್ಟು ಮಕ್ಕಳನ್ನು ಅನಾಥವಾಗಿಸಿದೆ. ಒಟ್ಟಾರೆ ಇಲ್ಲಿನ ವ್ಯವಸ್ಥೆಯನ್ನು ಹಾಳು ಮಾಡಿದೆ. ಇದನ್ನೆಲ್ಲ ಕೊನೆಗಾಣಿಸಲು ಇನ್ನು 10 ದಿನದಲ್ಲಿ ನಾವು ಹೊಸದಾದ ಪಕ್ಷ ರಚನೆ ಮಾಡಲಿದ್ದೇವೆ’ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Ghulam Nabi Azad | ಜಮ್ಮು ಕಾಶ್ಮೀರಕ್ಕೆ ಹೊರಟ ಗುಲಾಂ ನಬಿ ಆಜಾದ್​​; ಇಂದು ಹೊಸ ಪಕ್ಷ ಘೋಷಣೆ

Exit mobile version