ಮುಂಬೈ: ಗುಜರಾತ್‌ನ ಕಾಂಡ್ಲಾದಿಂದ ಮುಂಬೈಗೆ ಪ್ರಯಾಣ ಮಾಡುತ್ತಿದ್ದ ಸ್ಪೈಸ್ ಜೆಟ್ ವಿಮಾನಕ್ಕೆ ಮಾರ್ಗ ಮಧ್ಯೆ ಅಡಚಣೆ ಉಂಟಾಗಿದೆ. ಹಾಗಿದ್ದಾಗ್ಯೂ ಅದು ಮುಂಬೈನಲ್ಲಿ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿದೆ. ಈ ವಿಮಾನ 23 ಸಾವಿರ ಅಡಿ ಎತ್ತರದಲ್ಲಿ ಹಾರಾಡುತ್ತಿದ್ದಾಗ ಅದರ ವಿಂಡ್‌ಶೀಲ್ಡ್‌ನಲ್ಲಿ ಬಿರುಕು ಕಾಣಿಸಿಕೊಂಡಿದ್ದರಿಂದ ಸಹಜವಾಗಿಯೇ ಆತಂಕ ಉಂಟಾಗಿತ್ತು. ಆದರೆ ಪೈಲಟ್‌ಗಳು ವಿಮಾನವನ್ನು ಸುರಕ್ಷಿತವಾಗಿ ಮುಂಬೈನಲ್ಲಿ ಲ್ಯಾಂಡ್ ಮಾಡಿಸಿದ್ದಾರೆ.
ಈ ಬಗ್ಗೆ ಸ್ಪೈಸ್‌ಜೆಟ್ ವಕ್ತಾರ ಹೇಳಿಕೆ ಬಿಡುಗಡೆ ಮಾಡಿದ್ದು, ʼಸ್ಪೈಸ್‌ಜೆಟ್ Q400 ವಿಮಾನ ಕಾಂಡ್ಲಾದಿಂದ ಮುಂಬೈಗೆ ಹೋಗುತ್ತಿತ್ತು. ಮಾರ್ಗಮಧ್ಯೆ ಪಿ2 ಬದಿಯ ವಿಂಡ್‌ಶೀಲ್ಡ್‌ನಲ್ಲಿ ಬಿರುಕು ಕಾಣಿಸಿಕೊಂಡಿತು. ಏನೂ ತೊಂದರೆಯಾಗುವುದಿಲ್ಲ ಎಂದು ಖಚಿತಪಡಿಸಿಕೊಂಡ ಬಳಿಕ ಪ್ರಯಾಣ ಮುಂದುವರಿಸಲಾಯಿತು ಎಂದು ಹೇಳಿದ್ದಾರೆ.
ಸ್ಪೈಸ್‌ಜೆಟ್ ವಿಮಾನ ಇತ್ತೀಚೆಗೆ ಪದೇಪದೆ ಇಂಥ ಸಮಸ್ಯೆಗಳನ್ನು ಎದುರಿಸುತ್ತಿದೆ. ಇಂದು ಬೆಳಗ್ಗೆ ದೆಹಲಿಯಿಂದ ದುಬೈಗೆ ಹೋಗುತ್ತಿದ್ದ ಸ್ಪೈಸ್ ಜೆಟ್ ಬಿ 737 ವಿಮಾನಕ್ಕೆ ಮಾರ್ಗಮಧ್ಯೆ ತಾಂತ್ರಿಕ ದೋಷ ಎದುರಾಯಿತು. ಇಂಡಿಕೇಟರ್ ಲೈಟ್ ಸರಿಯಾಗಿ ಕೆಲಸ ಮಾಡದ ಕಾರಣ ಆ ವಿಮಾನವನ್ನು ಪಾಕಿಸ್ತಾನದ ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು. ಅಂದಹಾಗೇ, ಈ ಸ್ಪೈಸ್ ಜೆಟ್ ವಿಮಾನ ಹೀಗೆ ಮಾರ್ಗ ಮಧ್ಯೆಯ ಸಮಸ್ಯೆ ಎದುರಿಸುತ್ತಿರುವುದು ಕಳೆದ 17 ದಿನಗಳಲ್ಲಿ ಇದು ಏಳನೇ ಬಾರಿಯಾಗಿದೆ.
ಜೂ.19ರಂದು ದೆಹಲಿಯಿಂದ 189 ಪ್ರಯಾಣಿಕರನ್ನು ಹೊತ್ತು ಹೊರಟಿದ್ದ ಸ್ಪೈಸ್ ಜೆಟ್ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡ ಬಳಿಕ ಪಟಣಾ ಏರ್‌ಪೋರ್ಟ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿತ್ತು. ಜುಲೈ 2ರಂದು ಸ್ಪೈಸ್ ಜೆಟ್ ವಿಮಾನವೊಂದು ದೆಹಲಿಯಿಂದ ಜಬಲ್ಪುರಕ್ಕೆ ಹೊರಟಿತ್ತು. ಕೆಲವೇ ಕ್ಷಣದಲ್ಲಿ ವಿಮಾನದ ಕ್ಯಾಬಿನ್‌ನಲ್ಲಿ ಹೊಗೆ ಕಾಣಿಸಿಕೊಂಡಿದ್ದರಿಂದ ವಾಪಸ್ ದೆಹಲಿಗೆ ಬಂದು ಲ್ಯಾಂಡ್ ಮಾಡಲಾಗಿತ್ತು.
ಇದನ್ನೂ ಓದಿ: ಸ್ಪೈಸ್ ಜೆಟ್ ವಿಮಾನದಲ್ಲಿ ಹೊಗೆ ಕಂಡ ಬಳಿಕ ತುರ್ತು ಭೂಸ್ಪರ್ಶ, 2 ತಿಂಗಳಲ್ಲಿ 4ನೇ ಅವಘಡ