ನವ ದೆಹಲಿ: ಪ್ರಸಕ್ತ ಸಾಲಿನ ಪದ್ಮಶ್ರೀ ಪ್ರಶಸ್ತಿಯನ್ನು ಬುಧವಾರ (ಏ.5)ರಂದು ಸ್ವೀಕಾರ ಮಾಡಿದ ಕರ್ನಾಟಕದ ಬೀದರ್ನ ಬಿದರಿ ಕಲಾವಿದ ಶಾ ರಶೀದ್ ಅಹ್ಮದ್ ಖಾದ್ರಿ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿದ್ದರು. ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಲು ನವದೆಹಲಿಗೆ ಹೋಗಿದ್ದ ಅವರು ಅಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವ ಕೈ ಹಿಡಿದುಕೊಂಡು, ‘ನನಗೆ ಕಾಂಗ್ರೆಸ್ ಸರ್ಕಾರವಿದ್ದಾಗ ಪದ್ಮಶ್ರಿ ಪ್ರಶಸ್ತಿ ಸಿಗಲಿಲ್ಲ. ಇನ್ನು ಬಿಜೆಪಿ ಸರ್ಕಾರವೆಂತೂ ಯಾವ ಕಾರಣಕ್ಕೂ ಮುಸ್ಲಿಮರಿಗೆ ಯಾವ ಪ್ರಶಸ್ತಿಯನ್ನೂ ಕೊಡುವುದಿಲ್ಲ ಎಂದು ನಾನು ಭಾವಿಸಿದ್ದೆ. ಆದರೆ ಅದನ್ನು ನೀವು ಸುಳ್ಳು ಮಾಡಿದಿರಿ’ ಎಂದು ಹೇಳಿದ್ದರು. ಅವರ ಮಾತನ್ನು ಕೇಳಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಎಲ್ಲ ದೊಡ್ಡದಾಗಿ ನಕ್ಕಿದ್ದರು.
ಆದರೆ ಶಾ ರಶೀದ್ ಅಹ್ಮದ್ ಖಾದ್ರಿಯವರ ಈ ಮಾತುಗಳನ್ನು ಕಾಂಗ್ರೆಸ್ಸಿಗರು ಟೀಕಿಸಿದ್ದರು. ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ (ಮೇ 10) ಹತ್ತಿರ ಬರುತ್ತಿದೆ. ಮುಸ್ಲಿಂ ಮತಗಳನ್ನು ಸೆಳೆಯಲು ಬಿಜೆಪಿ ಮಾಡಿದ ಪ್ಲ್ಯಾನ್ ಇದು. ಅಹ್ಮದ್ ಖಾದ್ರಿಯವರ ಮಾತು ಕೇಳಿದರೆ, ಅದು ಯಾರೋ ಹೇಳಿಕೊಟ್ಟಿದ್ದು ಎಂದು ತೋರುತ್ತಿದೆ ಎಂದು ಕಾಂಗ್ರೆಸ್ ಸಂಸದ ಪ್ರಮೋದ್ ತಿವಾರಿ ಅವರು ರಾಷ್ಟ್ರೀಯ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.
ಅದರ ಬೆನ್ನಲ್ಲೇ ಶಾ ರಶೀದ್ ಅಹ್ಮದ್ ಖಾದ್ರಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿ ‘ನಾನು ನನ್ನ ಹೃದಯದಲ್ಲಿ ಇರುವ ಮಾತನ್ನೇ ಪ್ರಧಾನಿ ನರೇಂದ್ರ ಮೋದಿಯವರ ಬಳಿ ಹೇಳಿದ್ದೇನೆ. ನನಗ್ಯಾರೂ, ಏನನ್ನೂ ಹೇಳಿಕೊಟ್ಟಿಲ್ಲ. ಕಾಂಗ್ರೆಸ್ ಆಡಳಿತವಿದ್ದಾಗ ನನಗೆ ಪ್ರಶಸ್ತಿ ಬರಬಹುದು ಎಂಬ ನಿರೀಕ್ಷೆಯಿತ್ತು. ಆಗ ನಾನು ಪ್ರಯತ್ನವನ್ನೂ ಮಾಡಿದ್ದೆ ಕೂಡ. ಆದರೆ ಸಿಕ್ಕಿರಲಿಲ್ಲ. ಯಾವಾಗ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂತೋ, ನನ್ನಲ್ಲಿ ಆಶಾವಾದವೇ ಇರಲಿಲ್ಲ. ಬಿಜೆಪಿ ಸರ್ಕಾರ ಮುಸ್ಲಿಮರಿಗೆ ಪ್ರಶಸ್ತಿ ಕೊಡುವುದಿಲ್ಲ ಎಂದೇ ಭಾವಿಸಿದ್ದೆ ಮತ್ತು ಪ್ರಯತ್ನ ಮಾಡಲೂ ಹೋಗಲಿಲ್ಲ. ಒಬ್ಬೇ ಒಬ್ಬ ರಾಜಕಾರಣಿಯ ಬಳಿ ಪ್ರಶಸ್ತಿ ಬಗ್ಗೆ ಪ್ರಸ್ತಾಪ ಮಾಡಲಿಲ್ಲ. ಈ ಹಿಂದೆ ನನ್ನ ಪ್ರೊಫೈಲ್ ಕಳಿಸಿದ್ದಾಗ ಸರ್ಕಾರದಿಂದ ಪ್ರತಿಕ್ರಿಯೆ ಬಂದಿರಲಿಲ್ಲ. ಇತ್ತೀಚೆಗೆ ನನ್ನ ಕೆಲಸದಲ್ಲಿ ನಾನು ಮಗ್ನನಾಗಿದ್ದೆ. ಆದರೆ ಈಗಿನ ಬಿಜೆಪಿ ಸರ್ಕಾರ ನನ್ನನ್ನು ಗುರುತಿಸಿತು. ಕಾಂಗ್ರೆಸ್ ಸರ್ಕಾರ ಇದ್ದಾಗ ಮಾಡಿದ್ದ ಸಂದೇಶ/ಪ್ರೊಫೈಲ್ಗೆ ಈಗಿನ ಸರ್ಕಾರ ಉತ್ತರ ನೀಡಿತು. ನನ್ನ ಮನಸಿನ ಮಾತನ್ನೇ ಆಡಿದ್ದೇನೆ, ಹೊರತು ಇನ್ಯಾರೋ ಹೇಳಿಕೊಟ್ಟಿದ್ದನ್ನು ಹೇಳಿಲ್ಲ’ ಎಂದು ಶಾ ರಶೀದ್ ಅಹ್ಮದ್ ಖಾದ್ರಿ ತಿಳಿಸಿದ್ದಾರೆ.
ನನಗೀಗ 68ವರ್ಷ. ಯಾರೋ ಹೇಳಿಕೊಟ್ಟಿದ್ದನ್ನೆಲ್ಲ ಹೇಳಲು ನಾನೇನು ಮಗುವಾ? ಎಂದು ಪ್ರಶ್ನಿಸಿದ ಖಾದ್ರಿ, ‘ಈ ಚುನಾವಣೆಗೂ, ಪ್ರಶಸ್ತಿಗೂ ಏನೂ ಸಂಬಂಧವಿಲ್ಲ. ನನ್ನ ಹೆಸರು ಘೋಷಣೆಯಾಗಿದ್ದು ಜನವರಿಯಲ್ಲೇ. ಪ್ರಶಸ್ತಿ ಕೊಟ್ಟಿದ್ದು ಈಗ ಆಗಿರಬಹುದು. ಇನ್ನು ಕಳೆದವರ್ಷದಿಂದಲೇ ಆಯ್ಕೆ ಪ್ರಕ್ರಿಯೆ ಶುರುವಾಗಿರುತ್ತದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ ‘ನಾನು ಯಾವತ್ತೂ ಕಾಂಗ್ರೆಸ್ಗೆ ಮತ ಹಾಕುತ್ತಿದ್ದೆ. ಇನ್ನೀಗ ಬಿಜೆಪಿಯತ್ತ ವಾಲಿದ್ದೇನೆ. ಪದ್ಮಶ್ರಿ ಪ್ರಶಸ್ತಿಗಾಗಿ ನನ್ನ ಹೆಸರು ಘೋಷಣೆಯಾದ ಇಡೀ ದಿನ ಸಂತೋಷದಿಂದ ಅತ್ತಿದ್ದೇನೆ’ ಎಂದೂ ಹೇಳಿಕೊಂಡಿದ್ದಾರೆ.