ಭುವನೇಶ್ವರ: ಒಡಿಶಾದ ಜಗತ್‌ಸಿಂಗ್‌ಪುರ ಜಿಲ್ಲೆಯ ಪಾರಾದೀಪ್ ಕರಾವಳಿ ಭಾಗದಲ್ಲಿ ಪಾರಿವಾಳವೊಂದು ಪತ್ತೆಯಾಗಿದ್ದು, ಅದು ಬೇಹುಗಾರಿಕೆಗೆ ಬಳಸಲಾಗುತ್ತಿರುವ ಪಾರಿವಾಳ (Spy Pigeon) ಎಂದು ಸಂಶಯಿಸಲಾಗಿದೆ. ಪಾರಿವಾಳದ ಕಾಲಿನಲ್ಲಿ ಕೆಲವು ಸಾಧನಗಳನ್ನು ಕಟ್ಟಿರುವುದಾಗಿಯೂ ಹೇಳಲಾಗಿದೆ.
ಇದನ್ನೂ ಓದಿ: Salute to police | ಅತಿ ಎತ್ತರದ ಹೋರ್ಡಿಂಗ್ ಟವರಲ್ಲಿ ಸಿಕ್ಕಿ ಒದ್ದಾಡುತ್ತಿದ್ದ ಪಾರಿವಾಳವನ್ನು ಒಂಟಿಯಾಗಿ ಹತ್ತಿ ರಕ್ಷಿಸಿದ ಪೊಲೀಸ್!
ಈ ಬಗ್ಗೆ ಮಾಹಿತಿ ನೀಡಿರುವ ಜಗತ್‌ಸಿಂಗ್‌ಪುರ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಪಿ.ಆರ್. “ಪಶುವೈದ್ಯರು ಪಾರಿವಾಳವನ್ನು ಪರೀಕ್ಷೆ ಮಾಡುತ್ತಿದ್ದಾರೆ. ಅದರ ಕಾಲಿಗೆ ಕಟ್ಟಲಾಗಿದ್ದ ಸಾಧನವನ್ನು ರಾಜ್ಯ ವಿಧಿವಿಜ್ಞಾನ ಪ್ರಯೋಗಾಲಯದ ಸಹಾಯದಿಂದ ಪರೀಕ್ಷಿಸಲಾಗುವುದು. ಸಾಧನದಲ್ಲಿ ಮೈಕ್ರೋಚಿಪ್ ಮತ್ತು ಕ್ಯಾಮೆರಾ ಇರುವಂತೆ ಮೇಲ್ನೋಟಕ್ಕೆ ಕಂಡುಬಂದಿದೆ” ಎಂದು ತಿಳಿಸಿದ್ದಾರೆ. ಹಾಗೆಯೇ ಪಾರಿವಾಳದ ರೆಕ್ಕೆಯ ಮೇಲೆ ಬೇರಾವುದೋ ಭಾಷೆಯಲ್ಲಿ ಏನೋ ಬರೆದಿರುವುದಾಗಿ ಕಂಡುಬಂದಿದೆ ಎಂದೂ ವರದಿಯಿದೆ.
ಪಾರಿವಾಳವನ್ನು ಮೊದಲು ನೋಡಿರುವುದು ಸ್ಥಳೀಯರಾಗಿರುವ ಪೀತಾಂಬರ ಬೆಹೆರಾ ಅವರು. ಕರಾವಳಿಯಲ್ಲಿ ಸಾರಥಿ ಹೆಸರಿನ ಮೀನುಗಾರಿಕಾ ಸಂಸ್ಥೆಗೆ ಕೆಲಸ ಮಾಡುತ್ತಿರುವ ಅವರು ಪಾರಿವಾಳ ದೋಣಿಯ ಮೇಲೆ ಕುಳಿತಿದ್ದನ್ನು ಕಂಡಿದ್ದಾರೆ. ಅದರ ಕಾಲಿನಲ್ಲಿ ಏನನ್ನೋ ಕಟ್ಟಿರುವುದನ್ನೂ ಕಂಡಿದ್ದು, ಪಾರಿವಾಳವನ್ನು ಹಿಡಿದುಕೊಂಡಿದ್ದಾರೆ. 10 ದಿನಗಳ ಹಿಂದೆ ಕೋನಾರ್ಕ್ ಬಂದರಿನಿಂದ ಸುಮಾರು 35ಕಿ.ಮೀ. ದೂರದಲ್ಲಿ ಮೀನುಗಾರಿಕೆ ದೋಣಿಯಿದ್ದಾಗ ಈ ಪಾರಿವಾಳ ಪತ್ತೆಯಾಗಿತ್ತು. ಅಂದಿನಿಂದ ಪಾರಿವಾಳಕ್ಕೆ ಅಕ್ಕಿ ಹಾಕುತ್ತ ತಮ್ಮ ಬಳಿಯೇ ಇಟ್ಟುಕೊಂಡಿದ್ದ ಪೀತಾಂಬರ, ದಡಕ್ಕೆ ಬಂದೊಡನೆ ಪಾರಿವಾಳವನ್ನು ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.