ಉತ್ತರ ಪ್ರದೇಶದಲ್ಲಿ 2005ರಲ್ಲಿ ನಡೆದಿದ್ದ ಬಹುಜನ ಸಮಾಜ ಪಾರ್ಟಿ ಶಾಸಕ ರಾಜು ಪಾಲ್ ಹತ್ಯೆಯ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್ ಅವರನ್ನು 2006ರಲ್ಲಿ ಅಪಹರಣ ಮಾಡಿದ್ದ ಕೇಸ್ನಡಿ ಅಪರಾಧಿ ಎಂದು ಪರಿಗಣಿತನಾಗಿ, ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ರಾಜಕಾರಣಿ/ಗ್ಯಾಂಗ್ಸ್ಟರ್ ಅತೀಕ್ ಅಹ್ಮದ್(Atiq Ahmed)ಗೆ ಎನ್ಕೌಂಟರ್ ಭಯ ತೀವ್ರವಾಗಿ ಕಾಡುತ್ತಿದೆ. ಎಲ್ಲಾದರೂ ಕೋರ್ಟ್ನಿಂದ ಜೈಲಿಗೆ, ಜೈಲಿನಿಂದ ಕೋರ್ಟ್ಗೆ ಕರೆತರುವ ಮಾರ್ಗದಲ್ಲಿ ತನ್ನನ್ನು ಪೊಲೀಸರು ಕೊಂದು ಬಿಟ್ಟರೆ ಎಂಬ ಆತಂಕದಲ್ಲಿಯೇ ಇದ್ದಾರೆ. ಅದರಲ್ಲೂ ಅತೀಕ್ನನ್ನು ಗುಜರಾತ್ನ ಸಬರಮತಿ ಜೈಲಿನಲ್ಲಿ ಇಡಲಾಗಿದ್ದು, ಇಂದು ಪ್ರಯಾಗ್ರಾಜ್ ಕೋರ್ಟ್ನಲ್ಲಿ ಅವನ ವಿಚಾರಣೆ ಇರುವ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ ಇಲ್ಲಿಗೆ ಕರೆತರಲಾಗಿದೆ.
ಇನ್ನು ಗುಜರಾತ್ನ ಸಬರಮತಿ ಜೈಲಿನಿಂದ ಪ್ರಯಾಗ್ರಾಜ್ಗೆ ಬರುವ ಮಾರ್ಗದಲ್ಲಿ ರಾಜಸ್ಥಾನದ ಬುಂಡಿ ಎಂಬಲ್ಲಿ ಅತೀಕ್ನನ್ನು ಮಾಧ್ಯಮಗಳು ಮಾತನಾಡಿಸಿವೆ. ‘ನಿಮಗೆ ನಿಮ್ಮ ಜೀವ ತೊಂದರೆಯಲ್ಲಿದೆ ಎಂದೆನಿಸುತ್ತಿದೆಯಾ?’ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅತೀಕ್ ಅಹ್ಮದ್ ‘ಖಂಡಿತ ತೊಂದರೆಯಿದೆ. ಇವತ್ತಿಗೂ ನಾನು ಸುರಕ್ಷಿತವಾಗಿದ್ದೇನೆ ಎಂದರೆ, ಅದು ನಿಮ್ಮಿಂದ (ಮಾಧ್ಯಮಗಳಿಂದ).’ ಎಂದು ಹೇಳಿದ್ದಾರೆ. ‘ನನ್ನ ಕುಟುಂಬ ಸರ್ವನಾಶವಾಯಿತು. ನಾನು ಜೈಲಿನಲ್ಲಿಯೇ ಇದ್ದೆ. ಉಮೇಶ್ ಪಾಲ್ ಹತ್ಯೆಯ ಬಗ್ಗೆ ನನಗೇನು ಗೊತ್ತು’ ಎಂದು ಮಾಧ್ಯಮಗಳಿಗೆ ಹೇಳಿದ್ದಾರೆ.
ಬುಂಡಿಯಲ್ಲಿ ಪೊಲೀಸ್ ವಾಹನ ನಿಂತಿದ್ದೇಕೆ?
ರಾಜುಪಾಲ್ ಕೊಲೆ ಕೇಸ್ನಲ್ಲಿ ಆರೋಪ ಸಾಬೀತಾದ ಬಳಿಕ ಅತೀಕ್ ಅಹ್ಮದ್ನನ್ನು 2017ರಲ್ಲಿ ಅರೆಸ್ಟ್ ಮಾಡಲಾಗಿತ್ತು. 2019ರಲ್ಲಿ ಆತನನ್ನು ಪ್ರಯಾಗ್ರಾಜ್ನಿಂದ ಗುಜರಾತ್ನ ಸಬರಮತಿ ಜೈಲಿಗೆ ಸಾಗಿಸಲಾಗಿತ್ತು. ಅಷ್ಟಾದ ಮೇಲೆ ಉಮೇಶ್ಪಾಲ್ ಅಪಹರಣ ಕೇಸ್ಗೆ ಸಂಬಂಧಪಟ್ಟಂತೆ ಪ್ರಯಾಗ್ ಕೋರ್ಟ್ ಮಾ.28ರಂದು ತೀರ್ಪು ನೀಡಲಿರುವ ಹಿನ್ನೆಲೆಯಲ್ಲಿ, ಅತೀಕ್ನನ್ನು ಸಬರಮತಿ ಜೈಲಿನಿಂದ ಪ್ರಯಾಗ್ರಾಜ್ಗೆ ಕರೆತರಲಾಗಿತ್ತು. ಆತ ದೋಷಿ ಎಂದು ಆಗಿ, ಜೀವಾವಧಿ ಶಿಕ್ಷೆ ಪ್ರಕಟವಾದ ಬೆನ್ನಲ್ಲೇ ಮತ್ತೆ ಸಬರಮತಿಗೆ ಕರೆದೊಯ್ಯಲಾಗಿತ್ತು. ಈಗ ಮತ್ತೊಂದು ಪ್ರಕರಣದ ವಿಚಾರಣೆಗಾಗಿ ಪ್ರಯಾಗ್ರಾಜ್ಗೆ ಬಂದಿದ್ದಾನೆ. ಹೀಗೆ ಒಂದೆಡೆಯಿಂದ ಮತ್ತೊಂದೆಡೆಗೆ ಹೋಗುವಾಗ ಅತೀಕ್ಗೆ ಎನ್ಕೌಂಟರ್ ಭಯ ಕಾಡುತ್ತಿದೆ.
ಇದನ್ನೂ ಓದಿ: ಉಮೇಶ್ ಪಾಲ್ ಕೊಲೆ ಕೇಸ್; ಆರೋಪಿ ಅತೀಕ್ ಅಹ್ಮದ್ ಸೋದರ ಮಾವ ಅಖ್ಲಾಕ್ ಅಹ್ಮದ್ ಬಂಧನ
ಈ ಸಲ ಗುಜರಾತ್ನ ಸಬರಮತಿಯಿಂದ ಪ್ರಯಾಗ್ರಾಜ್ಗೆ ಬರುವ ವೇಳೆ ಮಾರ್ಗಮಧ್ಯೆಯಲ್ಲಿ ರಾಜಸ್ಥಾನದ ದುಂಗಾರ್ಪುರ ಜಿಲ್ಲೆಯ ಬುಂಡಿ ಎಂಬಲ್ಲಿ ಮಂಗಳವಾರ ಸಂಜೆ ಹೊತ್ತು ಅತೀಕ್ ಅಹ್ಮದ್ನನ್ನು ಕೊಂಡೊಯ್ಯುತ್ತಿದ್ದ ವಾಹನ ಸುಮಾರು ಒಂದು ತಾಸುಗಳ ಕಾಲ ನಿಂತಿತ್ತು. ಈತನೊಂದಿಗೆ ಸಾಗಿ ಬರುತ್ತಿದ್ದ ವಾಹನಗಳಲ್ಲಿ ಯಾವುದೋ ಒಂದು ವಾಹನದಲ್ಲಿ ಯಾಂತ್ರಿಕ ದೋಷ ಕಾಣಿಸಿಕೊಂಡ ಕಾರಣಕ್ಕೆ ನಿಲ್ಲಿಸಲಾಗಿತ್ತು. ಆಗಲೇ ಮಾಧ್ಯಮದವರು ಅತೀಕ್ನನ್ನು ಮಾತನಾಡಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಗ್ಯಾಂಗ್ಸ್ಟರ್ಗಳು, ಮಾಫಿಯಾ ಮಂದಿ ವಿರುದ್ಧ ಉತ್ತರ ಪ್ರದೇಶ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತಿದೆ. ರಾಜುಪಾಲ್ ಹತ್ಯೆಯ ಸಾಕ್ಷಿಯಾಗಿದ್ದ ಉಮೇಶ್ ಪಾಲ್ರನ್ನು ಇದೇ ವರ್ಷ ಫೆಬ್ರವರಿಯಲ್ಲಿ ಪ್ರಯಾಗ್ರಾಜ್ನಲ್ಲಿ ಹೊರವಲಯದಲ್ಲಿ ಕೊಂದುಹಾಕಲಾಗಿತ್ತು. ಇವರ ಹತ್ಯೆಯ ಪ್ರಮುಖ ಆರೋಪಿ ಅರ್ಬಾಜ್ ಖಾನ್ ಮತ್ತು ಇನ್ನೊಬ್ಬಾತನನ್ನು ಈಗಾಗಲೇ ಉತ್ತರ ಪ್ರದೇಶ ಪೊಲೀಸರು ಎನ್ಕೌಂಟರ್ ಮಾಡಿದ್ದಾರೆ. ಹೀಗಾಗಿ ಅತೀಕ್ಗೆ ಭಯ ಜಾಸ್ತಿಯಾಗಿದೆ.