ವಡೋದರಾ: ಗುಜರಾತ್ನ ವಡೋದರಾದಲ್ಲಿ ಗಣಪತಿ ವಿಗ್ರಹವನ್ನು ಮೆರವಣಿಗೆ ಮೂಲಕ ಪೆಂಡಾಲ್ಗೆ ಕರೆದೊಯ್ಯುತ್ತಿದ್ದಾಗ, ಎರಡು ಕೋಮುಗಳ ನಡುವೆ ಸಂಘರ್ಷ ಏರ್ಪಟ್ಟಿದೆ. ಎರಡೂ ಸಮುದಾಯಗಳವರು ಪರಸ್ಪರರ ಮೇಲೆ ಕಲ್ಲು ಎಸೆದುಕೊಂಡಿದ್ದಾರೆ (Stone pelting in Vadodara). ಸೋಮವಾರ ಮಧ್ಯರಾತ್ರಿ ವಡೋದರಾದ ಮುಸ್ಲಿಂ ಬಾಹುಳ್ಯ ಇರುವ ಪ್ರದೇಶದಲ್ಲಿ ಈ ಘಟನೆ ನಡೆದಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ನಂತರ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ನಂತರ ಗಣಪತಿ ವಿಗ್ರಹವನ್ನು ಪೆಂಡಾಲ್ಗೆ ಕರೆದೊಯ್ದು ಕೂರಿಸಲಾಗಿದೆ.
ಕೋಮು ಸಂಘರ್ಷ ಕೇಸ್ ಸಂಬಂಧ ಹಿಂದು-ಮುಸ್ಲಿಂ ಎರಡೂ ಸಮುದಾಯಗಳ ಹಲವರ ವಿರುದ್ಧ ವಡೋದರಾ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಅಷ್ಟೇ ಅಲ್ಲ, ಈಗಾಗಲೇ 13 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ, ದೊಡ್ಡಮಟ್ಟದ ಹಾನಿಯಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
‘ಗಣೇಶ ಹಬ್ಬದ ನಿಮಿತ್ತ ಸೋಮವಾರ ರಾತ್ರಿ ಹೊತ್ತಿಗೆ ಒಂದು ಗುಂಪು ಗಣೇಶನ ವಿಗ್ರಹವನ್ನು ಮೆರವಣಿಗೆಯಲ್ಲಿ ಪೆಂಡಾಲ್ಗೆ ಕರೆದೊಯ್ಯುತ್ತಿತ್ತು. ಕೋಮು ಸೂಕ್ಷ್ಮತೆ ಇರುವ ಮಾಂಡವಿ ಪ್ರದೇಶದಲ್ಲಿರುವ ಪಾಣಿಗೇಟ್ ದರ್ವಾಜಾ ಬಳಿ ರಾತ್ರಿ 11.15ರ ಹೊತ್ತಿಗೆ ಮೆರವಣಿಗೆ ಹೋದಾಗ ಮತ್ತೊಂದು ಸಮುದಾಯದವರು ತಕರಾರು ತೆಗೆದರು. ಆಗ ಎರಡೂ ಸಮುದಾಯದವರು ಮಾತಿನ ಚಕಮಕಿ ನಡೆಸಿಕೊಂಡರು. ಬಳಿಕ ಕಲ್ಲು ತೂರಾಟವೂ ನಡೆದು, ಸಂಘರ್ಷ ರೂಪ ಪಡೆಯಿತು. ಅಲ್ಲಿಯೇ ಗಸ್ತಿನಲ್ಲಿದ್ದ ಪೊಲೀಸರು ಗಲಾಟೆಯನ್ನು ನಿಯಂತ್ರಿಸಿದರು. ಹಾಗೇ, ಶಾಂತಿಯನ್ನು ಕಾಪಾಡುವಂತೆ ಜನರಿಗೆ ಮನವಿ ಮಾಡಲಾಗಿದೆ’ ಎಂದೂ ಪೊಲೀಸರು ವಿವರಿಸಿದ್ದಾರೆ.
ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಮುನ್ನ ಭುಜ್‌ನಲ್ಲಿ ಕೋಮು ಗಲಭೆ