ಹೌರಾಹ್: ಪಶ್ಚಿಮ ಬಂಗಾಳದಲ್ಲಿ ಕಿಡಿಗೇಡಿಗಳು ನೂತನ ವಂದೇ ಭಾರತ್ ರೈಲಿನ ಮೇಲೆಯೂ ತಮ್ಮ ವಕ್ರದೃಷ್ಟಿ ಬೀರಿದ್ದಾರೆ. ಇತ್ತೀಚೆಗಷ್ಟೇ ಅಂದರೆ ಡಿ.30ರಂದು ಪಶ್ಚಿಮ ಬಂಗಾಳದ ಹೌರಾಹ್ ರೈಲ್ವೆ ಸ್ಟೇಶನ್ನಲ್ಲಿ ಚಾಲನೆ ನೀಡಲಾಗಿದ್ದ ಹೌರಾಹ್-ಜಲಪೈಗುರಿ ವಂದೇ ಭಾರತ್ ರೈಲಿಗೆ ದುಷ್ಕರ್ಮಿಗಳು ಕಲ್ಲು ತೂರಿದ್ದು, ರೈಲಿನ 3ನೇ ಕೋಚ್ನ ಬಾಗಿಲಿನ ಗಾಜುಗಳು ಪುಡಿಪುಡಿಯಾಗಿವೆ. ರೈಲು ಹೌರಾಹ್ನಿಂದ ಹೊರಟು ಮಾಲ್ಡಾದ ಕುಮಾರ್‌ಗಂಜ್ ನಿಲ್ದಾಣದ ಬಳಿ ತಲುಪುತ್ತಿದ್ದಂತೆ ಕಲ್ಲು ಎಸೆಯಲಾಗಿದೆ. ಅಂದಹಾಗೇ, ಇದು ಪಶ್ಚಿಮ ಬಂಗಾಳದ ಮೊದಲ ಮತ್ತು ದೇಶದ ಏಳನೇ ವಂದೇ ಭಾರತ್ ರೈಲು.
2019ರಿಂದ ದೇಶದಲ್ಲಿ ವಂದೇ ಭಾರತ್ ರೈಲು ಸಂಚಾರ ಶುರುವಾಗಿದೆ. ಪ್ರಾರಂಭದಲ್ಲಿ ಎರಡು ಮಾರ್ಗದಲ್ಲಿ ಮಾತ್ರ ಸಂಚರಿಸುತ್ತಿದ್ದ ವಂದೇ ಭಾರತ್ನ್ನು ಈಗ ದೇಶದೆಲ್ಲೆಡೆ ವಿಸ್ತರಿಸಲಾಗುತ್ತಿದೆ. ಈ ಆರು ಟ್ರೇನ್ಗಳು ಸಂಚಾರ ಮಾಡುತ್ತಿದ್ದರೂ, ಮೂರು ಬಾರಿ ಜಾನುವಾರು ಡಿಕ್ಕಿಯಾಗಿ, ಸುದ್ದಿಯಾಗಿದ್ದು ಬಿಟ್ಟರೆ ವಂದೇ ಭಾರತ್ ರೈಲಿನ ಮೇಲೆ ಕಲ್ಲು ತೂರಾಟ ಅಥವಾ ಇನ್ಯಾವುದೇ ವಿಧ್ವಂಸಕ ಕೃತ್ಯ ನಡೆದ ವರದಿ ಬೆಳಕಿಗೆ ಬಂದಿರಲಿಲ್ಲ. ಇದೇ ಮೊದಲ ಬಾರಿಗೆ ಪಶ್ಚಿಮ ಬಂಗಾಳದಲ್ಲಿ ಇಂಥದ್ದೊಂದು ಘಟನೆ ನಡೆದಿದೆ.
ಘಟನೆ ಬಗ್ಗೆ ಮಾಹಿತಿ ನೀಡಿದ ಪೂರ್ವ ರೈಲ್ವೆ ವಲಯ, ‘ಕುಮಾರ್‌ಗಂಜ್ ನಿಲ್ದಾಣವನ್ನು ದಾಟುತ್ತಿದ್ದಂತೆ ರೈಲಿನ ಕೋಚ್ ನಂಬರ್ 3 ರ ಮೇಲೆ ಕಲ್ಲು ತೂರಾಟವಾಗಿದೆ ಎಂಬ ಮಾಹಿತಿ ನಮಗೆ ಬಂತು. ರೈಲಿನ ಬಾಗಿಲಿನ ಗಾಜು ಸಂಪೂರ್ಣವಾಗಿ ಒಡೆದು ಹೋಗಿದೆ ಎಂದು ತಿಳಿಸಿದೆ. ‘ರೈಲು ಸಾಗುತ್ತಿದ್ದಾಗ ಒಂದಷ್ಟು ಜನರು ಕಲ್ಲು ಎಸೆದಿದ್ದಾರೆ. ನಿಜಕ್ಕೂ ನಮಗೆ ಶಾಕ್ ಆಯಿತು. ಬಾಗಿಲು ಒಡೆದಿದ್ದರೂ, ಪ್ರಯಾಣಿಕರಿಗೆ ಯಾರಿಗೆ ಏನೂ ಆಗದೆ ಇರುವುದು ಅದೃಷ್ಟ. ಘಟನೆ ನಡೆಯುವಾಗ ಕತ್ತಲಾಗಿತ್ತು. ಹೀಗಾಗಿ ಅವರು ಯಾರೆಂದು ಗುರುತಿಸಲು ಸಾಧ್ಯವಾಗಲಿಲ್ಲ’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.
ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ವಂದೇ ಭಾರತ್ ರೈಲಿಗೆ ಚಾಲನೆ ವೇಳೆ ಜೈ ಶ್ರೀರಾಮ್ ಘೋಷಣೆ; ವೇದಿಕೆ ಏರದೆ ಮೌನವಾಗಿ ಕುಳಿತ ಮಮತಾ ಬ್ಯಾನರ್ಜಿ