ಭಾರತದ ಏಳನೇ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ (Vande Bharat Express) ಮೇಲೆ ಈಗ ಮೂರನೇ ಬಾರಿಗೆ ಕಲ್ಲು ತೂರಾಟವಾಗಿದೆ. ಇತ್ತೀಚೆಗಷ್ಟೇ ಪಶ್ಚಿಮ ಬಂಗಾಳದ ಹೌರಾಹ್ ರೈಲ್ವೆ ಸ್ಟೇಶನ್ನಲ್ಲಿ ಈ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವರ್ಚ್ಯುವಲ್ ಆಗಿ ಚಾಲನೆ ಕೊಟ್ಟಿದ್ದಾರೆ. ಉದ್ಘಾಟನೆಗೊಂಡ ನಾಲ್ಕು ದಿನಕ್ಕೇ ಈ ರೈಲಿಗೆ ಮಾಲ್ಡಾದ ಕುಮಾರ್ಗಂಜ್ ಬಳಿ ದುಷ್ಕರ್ಮಿಗಳು ಕಲ್ಲು ಎಸೆದಿದ್ದರು. ತತ್ಪರಿಣಾಮ ರೈಲಿನ 3ನೇ ಕೋಚ್ನ ಬಾಗಿಲಿನ ಗಾಜು ಒಡೆದಿತ್ತು. ಅದಾಗಿ ಎರಡೇ ದಿನಕ್ಕೆ ಮತ್ತೆ ಕಿಶನ್ಗಂಜ್ ಬಳಿ ಇದೇ ರೈಲಿನ ಮೇಲೆ ಕಲ್ಲು ಎಸೆಯಲಾಗಿತ್ತು.
ಹೌರಾಹ್ ಮತ್ತು ನ್ಯೂ ಜಲಪೈಗುರಿ ನಡುವೆ ಸಂಚಾರ ಮಾಡುತ್ತಿರುವ ಈ ರೈಲಿನ ಮೇಲೆ ಈಗ ಮತ್ತೆ 3ನೇ ಸಲ ಕಲ್ಲು ತೂರಾಟವಾಗಿದೆ. ಬಿಹಾರದ ಕಠಿಹಾರದಲ್ಲಿ ಕಿಡಿಗೇಡಿಗಳು ರೈಲಿಗೆ ಕಲ್ಲು ಎಸೆದಿದ್ದು, ಕೋಚ್ ನಂಬರ್ 6ರ ಕಿಟಕಿ ಗಾಜು ಒಡೆದಿದೆ. ರೈಲು ಡಾಲ್ಕೋಲಾ ರೈಲ್ವೆ ಸ್ಟೇಶನ್ ದಾಟಿ ಹೋಗಿ, ಬಿಹಾರದ ಕಠಿಹಾರದ ಬಲರಾಮ್ಪುರ ಸಮೀಪ ಹೋಗುತ್ತಿದ್ದಾಗ ಕಲ್ಲು ಎಸೆಯಲಾಗಿದೆ. ಕಲ್ಲು ಬಂದು ಬಡಿದ ಪರಿಣಾಮ ಕಿಟಕಿ ಗಾಜುಗಳು ಒಡೆದಿದ್ದಾಗಿ ಕೋಚ್ ನಂಬರ್ 6ರ 70ನೇ ಬರ್ತ್ನಲ್ಲಿ ಪ್ರಯಾಣ ಮಾಡುತ್ತಿದ್ದ ಪ್ರಯಾಣಿಕರೇ ತಿಳಿಸಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಅದೃಷ್ಟಕ್ಕೆ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ.
ಆಂಧ್ರದಲ್ಲೂ ಕಲ್ಲು ಎಸೆಯಲಾಗಿತ್ತು
ಆಂಧ್ರಪ್ರದೇಶದಲ್ಲೂ ವಂದೇ ಭಾರತ್ ರೈಲಿನ ಮೇಲೆ ಕಲ್ಲು ತೂರಾಟ ಆಗಿದೆ. ಜನವರಿ 19ರಂದು ಪ್ರಧಾನಿ ಮೋದಿ ಚಾಲನೆ ನೀಡಬೇಕಿದ್ದ ರೈಲಿಗೆ ಜನವರಿ 11ರಂದು ದುಷ್ಕರ್ಮಿಗಳು ಕಲ್ಲು ಎಸೆದಿದ್ದರು. ವಿಶಾಖಪಟ್ಟಣಂನ ಕಂಚಾರಪಲೇಂನಲ್ಲಿ ಈ ರೈಲನ್ನು ಸಿಬ್ಬಂದಿ ಪರಿಶೀಲನೆ ಮಾಡುತ್ತಿದ್ದರು. ಆಗಲೇ ಕಲ್ಲು ಎಸೆಯಲಾಗಿತ್ತು. ಇದರಿಂದಾಗಿ ಎರಡು ಕಡೆ ಕಿಟಕಿ ಗಾಜುಗಳು ಒಡೆದಿದ್ದವು.
ಇದನ್ನೂ ಓದಿ: Vande Bharat Express | ಪಶ್ಚಿಮ ಬಂಗಾಳದಲ್ಲಿ ವಂದೇ ಭಾರತ್ ರೈಲಿನ ಮೇಲೆ ಕಲ್ಲು ತೂರಾಟ; ಹೊಸ ಟ್ರೇನ್ ಗಾಜು ಪುಡಿಪುಡಿ